ಧಾರವಾಡ:

ಜಿಲ್ಲೆಯಲ್ಲಿ ಕೃಷಿ ಹಾಗೂ ಕೈಗಾರಿಕೆಗಳಿಗೆ ಪೂರಕ ಸಣ್ಣ ಉದ್ಯಮ ಸ್ಥಾಪಿಸಿ, ಪ್ರೋತ್ಸಾಹಿಸಲು ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಸಹಕರಿಸಬೇಕು. ಸರ್ಕಾರದ ನಿರ್ದೇಶನ ಮೀರಿ, ಆರ್‌ಬಿಐ ಮಾರ್ಗಸೂಚಿ ಉಲ್ಲಂಘಿಸಿ, ಸಾಲ ವಸೂಲಾತಿ ಮಾಡಬಾರದೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಪಂ ಭವನದಲ್ಲಿ ಬುಧವಾರ ಜಿಲ್ಲಾಮಟ್ಟದ ಬ್ಯಾಂಕರ್ಸ್ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಸಾಲ ವಸೂಲಾತಿಯಲ್ಲಿ ಬ್ಯಾಂಕ್‌ಗಳು ತಾರತಮ್ಯ ಮಾಡುತ್ತಿದ್ದು, ಸರ್ಕಾರದಿಂದ ಸಿಗುವ ಸಬ್ಸಿಡಿ ಹಣವನ್ನು ಸಾಲದ ಮೊತ್ತಕ್ಕೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂಬ ದೂರಿದೆ. ಈ ಕುರಿತು ಸರ್ಕಾರದ ನಿರ್ದೇಶನ ಪಾಲಿಸಬೇಕು ಎಂದರು.

ಬ್ಯಾಂಕ್‌ಗಳು ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಸಭೆ ಆಯೋಜಿಸಿ, ರೈತರಿಗೆ ಸಾಲ ಮರುಪಾವತಿ ಕುರಿತು ಜಾಗೃತಿ ಮೂಡಿಸಬೇಕು. ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿ ಕಾಯದೆ ಸಾಧ್ಯವಾದಷ್ಟು ಸಾಲ ತೀರಿಸುವಂತೆ ಪ್ರೇರೇಪಿಸಬೇಕು. ಪಿಎಂಇಜಿಪಿ ಯೋಜನೆಯಡಿ ಇನ್ನೂ 142 ಅರ್ಜಿಗಳು ಬ್ಯಾಂಕ್‌ಗಳಲ್ಲಿ ಬಾಕಿ ಇವೆ. ಸಂಬಂಧಿತ ಬ್ಯಾಂಕ್‌ಗಳು ಅವುಗಳನ್ನು ಆದ್ಯತೆಯ ಮೇರೆಗೆ ತಕ್ಷಣ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ರೈತರಿಗೆ ಹಾಗೂ ಸೂಕ್ಷ್ಮ ಉದ್ಯಮಿಗಳಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸುವ ಜತೆಗೆ ರೈತರಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡಬಾರದು. ಇಲ್ಲವಾದಲ್ಲಿ ಅವರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಅವಲಂಬಿತರಾಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ಜಿಪಂ ಸಿಇಒ ಭುವನೇಶ ಪಾಟೀಲ, ನಬಾರ್ಡ್‌ ವ್ಯವಸ್ಥಾಪಕ ಮಯೂರ್ ಕಾಂಬಳೆ ಮಾತನಾಡಿ, ಕಳೆದ ಹಣಕಾಸು ವರ್ಷದಲ್ಲಿ ಜಿಲ್ಲೆಯ ಒಟ್ಟು ಸಾಲ ವಿತರಣೆ ₹ 11,800 ಕೋಟಿಯಿಂದ ₹ 14,800 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ ಎಂಎಸ್‌ಎಂಇ ಕ್ಷೇತ್ರದಲ್ಲಿ ₹ 1500 ಕೋಟಿ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾವಿರ ಕೋಟಿಗಳ ಹೆಚ್ಚಳವಾಗಿದೆ. ನವಲಗುಂದ ಹಾಗೂ ಅಣ್ಣಿಗೇರಿ ಭಾಗಗಳಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದರು. ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಗಡಾದವರ ಇದ್ದರು.