ಲೋಕಾಯುಕ್ತ ದಾಳಿ ಬಳಿಕ ನಾಪತ್ತೆಯಾದ ತಹಸೀಲ್ದಾರ್ ಸುಳಿವಿಲ್ಲ

| Published : Sep 13 2025, 02:06 AM IST

ಸಾರಾಂಶ

ಪುತ್ತೂರು ತಹಸೀಲ್ದಾರ್ ಎಸ್.ಬಿ. ಕೂಡಲಗಿ ತಲೆಮರೆಸಿಕೊಂಡಿದ್ದು, ಪ್ರಕರಣ ನಡೆದು ೧೫ ದಿನಗಳು ಕಳೆದರೂ ನಾಪತ್ತೆಯಾಗಿದ್ದಾರೆ. ಇದೀಗ ಪುತ್ತೂರು ತಹಸೀಲ್ದಾರ್ ಆಗಿ ಪುತ್ತೂರಿನ ಎಸಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿರುವ ಗ್ರೇಡ್-೨ ತಹಸೀಲ್ದಾರ್ ನಾಗರಾಜ್ ಪ್ರಭಾರ ವಹಿಸಿಕೊಂಡಿದ್ದಾರೆ.

ಪುತ್ತೂರು: ಅಕ್ರಮ ಸಕ್ರಮ ಜಮೀನು ಪರಬಾರೆಗೆ ಸಂಬಂಧಿಸಿ ಎನ್‌ಒಸಿ ಪತ್ರ ನೀಡಲು ಲಂಚ ಪಡೆದುಕೊಂಡ ವಿಚಾರಕ್ಕೆ ಸಂಬಂಧಿಸಿ ಪ್ರಕರಣ ದಾಖಲುಗೊಂಡಿರುವ ಪುತ್ತೂರು ತಹಸೀಲ್ದಾರ್ ಎಸ್.ಬಿ. ಕೂಡಲಗಿ ತಲೆಮರೆಸಿಕೊಂಡಿದ್ದು, ಪ್ರಕರಣ ನಡೆದು ೧೫ ದಿನಗಳು ಕಳೆದರೂ ನಾಪತ್ತೆಯಾಗಿದ್ದಾರೆ. ಇದೀಗ ಪುತ್ತೂರು ತಹಸೀಲ್ದಾರ್ ಆಗಿ ಪುತ್ತೂರಿನ ಎಸಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿರುವ ಗ್ರೇಡ್-೨ ತಹಸೀಲ್ದಾರ್ ನಾಗರಾಜ್ ಪ್ರಭಾರ ವಹಿಸಿಕೊಂಡಿದ್ದಾರೆ. ಜಮೀನು ಮಾರಾಟದ ವಿಷಯಕ್ಕೆ ಸಂಬಂಧಿಸಿ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ನಿವಾಸಿ ವ್ಯಕ್ತಿಯೊಬ್ಬರು ನಿರಕ್ಷೇಪಣಾ ಪತ್ರ ಪಡೆಯಲು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ಭೂಸುಧಾರಣಾ ವಿಭಾಗದ ಕೇಸ್ ವರ್ಕರ್ ಆಗಿರುವ ಸುನಿಲ್ ರು. ೧೨ ಸಾವಿರ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಗೆ ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಸುನಿಲ್‌ನನ್ನು ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಯನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಆತ ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಹಸೀಲ್ದಾರ್ ಅವರಿಗೆ ರು. ೧೦ ಸಾವಿರ ಕೊಡಬೇಕಾಗಿತ್ತು ಎಂದು ಸುನಿಲ್ ತನಿಖೆ ವೇಳೆ ಬಾಯಿ ಬಿಟ್ಟಿದ್ದು, ಅದರಂತೆ ತಹಸೀಲ್ದಾರ್ ಎಸ್.ಬಿ. ಕೂಡಲಗಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆದರೆ ಆ ಬಳಿತ ತಲೆ ಮರೆಸಿಕೊಂಡಿದ್ದ ತಹಸೀಲ್ದಾರ್ ಈ ತನಕವೂ ಪತ್ತೆಯಾಗಿಲ್ಲ.

೧೫ ದಿನಗಳಿಂದ ಗೈರು:

ಲೋಕಾಯುಕ್ತ ಪೊಲೀಸರು ತನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಅಂದಿನಿಂದ ಇಂದಿನ ತನಕ ತಹಸೀಲ್ದಾರ್ ಎಸ್.ಬಿ. ಕೂಡಲಗಿ ತಲೆ ಮರೆಸಿಕೊಂಡಿದ್ದಾರೆ. ಕಳೆದ ೧೫ ದಿನಗಳಿಂದ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತನ್ನ ಕರ್ತವ್ಯ ನಿರ್ವಹಿಸಿಲ್ಲ. ಅತ್ತ ಕಚೇರಿಗೂ ಆಗಮಿಸದೆ ಇತ್ತ ವಿಚಾರಣೆಗೂ ಹಾಜರಾಗದೆ ತಲೆ ಮರೆಸಿಕೊಂಡಿರುವ ತಹಸೀಲ್ದಾರ್ ಕೂಡಲಗಿ ಅವರಿಗೆ ವಿಚಾರಣೆಗೆ ಹಾಜರಾಗುಂತೆ ಲೋಕಾಯುಕ್ತ ಪೊಲೀಸರು ನೊಟೀಸ್ ನೀಡಿದ್ದರೂ ಅವರು ವಿಚಾರಣೆಗೂ ಹಾಜರಾಗಿಲ್ಲ ಎನ್ನಲಾಗಿದೆ.

ಈ ಮಧ್ಯೆ, ತಹಸೀಲ್ದಾರ್ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಮಾತೂ ಕೇಳಿ ಬಂದಿದೆ. ತಹಸೀಲ್ದಾರ್ ಕಚೇರಿಗೆ ಬಾರದಿರುವ ಕಾರಣ ಪುತ್ತೂರು ತಾಲೂಕು ಕಚೇರಿಯ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ನಡುವೆ ಕೆಲ ದಿನಗಳ ಕಾಲ ಪುತ್ತೂರು ತಾಲೂಕು ಕಚೇರಿಯಲ್ಲಿ ನಿತ್ಯದ ಕೆಲಸ ಕಾರ್ಯಗಳನ್ನು ಉಪ ತಹಸೀಲ್ದಾರ್ ಮಾಡುತ್ತಿದ್ದರು. ಲೋಕಾಯುಕ್ತ ದಾಳಿಯ ಸಂದರ್ಭ ತಹಸೀಲ್ದಾರ್ ಅನುಪಸ್ಥಿತಿ ಇದ್ದ ಕಾರಣ ಸಹಾಯಕ ಆಯುಕ್ತರು ಉಪ ತಹಸೀಲ್ದಾರ್ ರವಿಕುಮಾರ್ ಅವರಿಗೆ ತನಿಖೆಗೆ ಪೂರಕ ದಾಖಲೆ ಒದಗಿಸುವ ಹೊಣೆಗಾರಿಕೆ ನೀಡಿ ಆದೇಶಿಸಿದ್ದರು. ತಹಸೀಲ್ದಾರ್ ಅವರ ಡಿಜಿಟಲ್ ಸಹಿ ಅಗತ್ಯವಿರುವ ದಾಖಲೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದೀಗ ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಲ್ಲಿನ ವ್ಯವಸ್ಥಾಪಕರಾದ ಗ್ರೇಡ್-೨ ತಹಸೀಲ್ದಾರ್ ನಾಗರಾಜ್ ಅವರಿಗೆ ತಹಸೀಲ್ದಾರ್ ಪ್ರಭಾರ ಹುದ್ದೇ ನೀಡಿ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶಿಸಿದ್ದಾರೆ. ಅದರಂತೆ ನಾಗರಾಜ್ ಅಧಿಕಾರ ಸ್ವೀಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.