2ನೇ ಬೆಳೆಗಿಲ್ಲ ನೀರು, ಅಕ್ಕಿ ದರ ಏರುವ ಸಾಧ್ಯತೆ

| Published : Nov 17 2025, 01:30 AM IST

ಸಾರಾಂಶ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಭತ್ತದ ಬೆಳೆ ರಾಜ್ಯ ಸೇರಿದಂತೆ ನೆರೆಯ ರಾಜ್ಯದ ಬಹುತೇಕ ಅಕ್ಕಿಯ ಬೇಡಿಕೆ ಈಡೇರಿಸುತ್ತದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ರಾಜ್ಯದಲ್ಲಿಯೇ ಅತ್ಯಧಿಕ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶಗಳಲ್ಲೊಂದಾದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಬೇಸಿಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದ ಪರಿಣಾಮ ಭತ್ತ ಮತ್ತು ಅಕ್ಕಿ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯ ಮುನ್ಸೂಚನೆ ಕಂಡು ಬರಲಾರಂಭಿಸಿದೆ.

ಹೌದು, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ಬರೋಬ್ಬರಿ 12.5 ಲಕ್ಷ ಎಕರೆ ಪ್ರದೇಶದಲ್ಲಿ (ಇದು ಅಧಿಕೃತ ಲೆಕ್ಕಾಚಾರ, ವಾಸ್ತವವಾಗಿ ಇನ್ನೂ ಜಾಸ್ತಿಯಿದೆ) ಭತ್ತ ಬೆಳೆಯಲಾಗುತ್ತದೆ. ಬರೋಬ್ಬರಿ 2.5 ಕೋಟಿ ಕ್ವಿಂಟಲ್‌ ಭತ್ತ ಉತ್ಪಾದನೆ ಸಾಮರ್ಥ್ಯ ಇರುವ ಈ ಪ್ರದೇಶದಲ್ಲಿ ಈ ಬಾರಿ ಬೆಳೆಯನ್ನೇ ಬೆಳೆಯುವುದಿಲ್ಲ ಎನ್ನುವ ಅಂಶ ಸಹಜವಾಗಿಯೇ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದೇ ಹೇಳಲಾಗುತ್ತಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಭತ್ತದ ಬೆಳೆ ರಾಜ್ಯ ಸೇರಿದಂತೆ ನೆರೆಯ ರಾಜ್ಯದ ಬಹುತೇಕ ಅಕ್ಕಿಯ ಬೇಡಿಕೆ ಈಡೇರಿಸುತ್ತದೆ. ಅಷ್ಟೇ ಅಲ್ಲ ನಾನಾ ರಾಷ್ಟ್ರಗಳ ತಟ್ಟೆಗೂ ಇಲ್ಲಿಯ ಅಕ್ಕಿ ರಫ್ತು ಆಗುತ್ತದೆ.

ಕಾರಣ ಏನು?: ತುಂಗಭದ್ರಾ ಜಲಾಶಯದ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತುಂಗಭದ್ರಾ ಕ್ರಸ್ಟ್ ಗೇಟ್ ದುರಸ್ಥಿಗಾಗಿ ಎರಡನೇ ಬೆಳೆಗೆ ನೀರು ಕೊಡದಿರಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ನೀರಿದ್ದರೂ ಈ ವರ್ಷ ಎರಡನೇ ಬೆಳೆಗೆ ನೀರು ಕೊಡದೆ ಇರುವ ಕುರಿತು ರೈತರ ಸಮುದಾಯದಲ್ಲಿ ಆಕ್ರೋಶದ ಮಾತುಗಳು ಇದ್ದೇ ಇವೆ. ಆದರೆ, ತುಂಗಭದ್ರಾ ಜಲಾಶಯದ 34 ಕ್ರಸ್ಟ್ ಗೇಟ್ ಪೈಕಿ ಬಹುತೇಕ ಶೇ. 30ರಿಂದ 48ರಷ್ಟು ಶಿಥಿಲಗೊಂಡಿವೆ. ಹೀಗಾಗಿ, ಅವುಗಳ ದುರಸ್ತಿ ಅನಿವಾರ್ಯ ಎಂದು ಕೇಂದ್ರ ಜಲ ಆಯೋಗ ವರದಿ ನೀಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಿಂದ ಕ್ರಸ್ಟ್ ಗೇಟ್ ಬದಲಾಯಿಸುವ ಕಾರ್ಯ ಆರಂಭವಾಗಲಿದೆ. ಹೀಗಾಗಿ ಎರಡನೇ ಬೆಳೆಗೆ ನೀರು ಬಿಡದಿರಲು ನಿರ್ಧರಿಸಲಾಗಿದೆ. ಡಿಸೆಂಬರ್ ವೇಳೆಗೆ ಜಲಾಶಯದ ನೀರನ್ನು 40 ಟಿಎಂಸಿಗೆ ಇಳಿಸಲಾಗುತ್ತದೆ. ಆನಂತರ ದುರಸ್ತಿ ಕಾರ್ಯ ನಡೆಯುತ್ತದೆ.

ಮಾರುಕಟ್ಟೆ ಮೇಲೆ ಪರಿಣಾಮ: ಇದರಿಂದ ಈಗ ಮಾರುಕಟ್ಟೆಯಲ್ಲಿ ನಿಧಾನಕ್ಕೆ ಅಕ್ಕಿಯ ದರ ಏರಲು ಪ್ರಾರಂಭವಾಗಿದೆ. ಎರಡನೇ ಬೆಳೆಗೆ ನೀರಿಲ್ಲ ಎನ್ನುವ ಅಧಿಕೃತ ಘೋಷಣೆಯಾಗುತ್ತಿದ್ದಂತೆ ಆರ್‌ಎನ್‌ಆರ್‌ ಭತ್ತದ ದರ 75 ಕೆಜಿಗೆ ₹1950ರಿಂದ ₹2 ಸಾವಿರ ವರೆಗೆ ಏರಿಕೆಯಾಗಿದೆ. ಇನ್ನು ಸೋನಾ ಮಸೂರಿ ಭತ್ತದ ದರವೂ ಏರುವ ಸಾಧ್ಯತೆ ಇದೆ.

ಮುಂಗಾರು ಬೆಳೆ ಕಟಾವು ಪ್ರಾರಂಭವಾಗುತ್ತಿದೆ. ಮುಂಗಾರು ಬೆಳೆ ಕಟಾವು ಮುಗಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಅಕ್ಕಿ ಮತ್ತು ಭತ್ತ ದಲ್ಲಾಳಿಗಳು ಸಂಗ್ರಹಿಸಿಟ್ಟುಕೊಂಡು ಬೇಸಿಗೆಯಲ್ಲಿನ ಭತ್ತದ ಕಟಾವು ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಗೂ ಇದು ಕಾರಣವಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ.

ತುಂಗಭದ್ರಾ ಕ್ರಸ್ಟ್‌ಗೇಟ್‌ ದುರಸ್ತಿ ಮಾಡದೆ ವಿಧಿಯಿಲ್ಲ. ಹೀಗಾಗಿ, ಎರಡನೇ ಬೆಳೆಗೆ ನೀರು ಬಿಡದಿರಲು ನಿರ್ಧರಿಸಲಾಗಿದೆ. ಹೀಗಾಗಿ, ಸಹಜವಾಗಿಯೇ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಕಾಡಾ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಚಿವರು ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಎರಡನೇ ಬೆಳೆಗೆ ನೀರಿಲ್ಲ ಎಂದು ಘೋಷಣ ಮಾಡಿರುವುದರಿಂದ ಮಾರುಕಟ್ಟೆಯಲ್ಲಿ ಈಗಾಗಲೇ ಭತ್ತದ ದರ ಏರಲು ಪ್ರಾರಂಭವಾಗಿದೆ. ಭತ್ತದ ದರ ಕುಸಿಯುತ್ತದೆ ಎಂದಾಗಲೇ ಸರ್ಕಾರದ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವಂತಾಗಿದೆ ಎಂದು ಹಿಟ್ನಾಳ ಗ್ರಾಮದ ರೈತ ಉಮೇಶ ಪಲ್ಲೇದ ತಿಳಿಸಿದ್ದಾರೆ.