ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನಲ್ಲಿ ಕೃಷ್ಣಾ ನದಿ ಬತ್ತಿಹೋಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹ, ಬೇಸಿಗೆಯಲ್ಲಿ ಬರಗಾಲ ಎಂಬ ದ್ವಂದ್ವ ವಿಷಮ ಪರಿಸ್ಥಿತಿ ಎದುರಿಸುತ್ತಿರುವ ರೈತರು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮನೆ ಬಾಗಿಲಿಗೆ ಹೋಗಿ ನಿರಾಶೆರಾಗಿ ಪ್ರತಿಭಟನೆ ಒಂದೇ ದಾರಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಪ್ರತಿ ಬಾರಿ ಪ್ರತಿಭಟನೆ ನಡೆಸುವುದೇ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ರೈತರ ಗೋಳು ಕೇಳುವರಿಲ್ಲದ ಪರಿಸ್ಥಿತಿ ಇದೆ. ಕಳೆದ ಮೇ 26ರಂದು ರೈತ ಸಂಘದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು ಹಾಗೂ ಇಲ್ಲಿನ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್‌ಗಳನ್ನು ಕೂಡಲೆ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಆಲಗೂರು ಗೌಡರಗಡ್ಡೆ ಸಮೀಪ ವಿಜಯಪುರ - ಜಮಖಂಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು 8 ದಿನದೊಳಗೆ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಿಲ್‌ ಪಾವತಿ ಮಾಡಲು ಸೂಚಿಸಿದ್ದೇವೆ. ಅದರಂತೆ 3-4 ದಿನಗಳಲ್ಲಿ ನದಿಗೆ ನೀರು ಬಿಡಿಸುತ್ತೇವೆ ಎಂದು ಭರವಸೆ ನೀಡಿ ರೈತರ ಮನ ಒಲಿಸಿ ಪ್ರತಿಭಟನೆ ಹಿಂಪಡೆಯಲು ತಿಳಿಸಿದ್ದರು. ಅಧಿಕಾರಿಗಳ ಭರವಸೆಯಂತೆ ರೈತರ ಸಂಘಟನೆಗಳು ಪ್ರತಿಭಟನೆ ಕೈಬಿಟ್ಟು 8 ದಿನಗಳ ವರೆಗೆ ಜಾತಕಪಕ್ಷಿಯಂತೆ ಕಾದು ಕುಳಿತಿದ್ದರು. ಅಧಿಕಾರಿಗಳ ಭರವಸೆ ಹುಸಿಯಾಗಿದೆ. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿ ಕೊಂಡಿರುವ ಕಬ್ಬಿನ ಬಿಲ್‌ ಇನ್ನೂ ಪಾವತಿಸಿಲ್ಲ. ನದಿಗೆ ನೀರು ಬಿಡಿಸಲು ಸಾಧ್ಯವಾಗಿಲ್ಲ. ರೈತ ಸಂಘಟನೆಗಳು ಪ್ರತಿವರ್ಷದ ಸಮಸ್ಯೆಗೆ ಶಾಶ್ವತ ಪರಿಹಾರ ವದಗಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ಸಭೆ: ತಾಲೂಕಿನ ರೈತ ಸಂಘಟನೆಯ ಪದಾಧಿಕಾರಿಗಳು ಶನಿವಾರ ಸಭೆ ಸೇರಿದ್ದರು. ಪ್ರಸ್ತುತ ಪರಿಸ್ಥಿಯ ಅವಲೋಕನೆ ಮುಂದಿನ ದಿನಗಳಲ್ಲಿ ಕೈಗೊಳ್ಳ ಬೇಕಾದ ಹೋರಾಟದ ಕುರಿತು ಚಚಿಸಿದ್ದಾರೆ.


ಸಭೆಯಲ್ಲಿ ತಾಲುಕಿನ ರೈತ ಹೋರಾಟಗಾರರು ಹಾಗೂ ಮುಖಂಡರಾದ ಹಣಮಂತ ಮಗದುಮ, ಶ್ರೀಶೈಲ ಭೂಮಾರ, ರಾಜು ನದಾಫ, ಕಲ್ಲಪ್ಪ ಬಿರಾದಾರ, ಸಿದ್ದಪ್ಪ ಬಣಜಗಾರ, ಸುರೇಶ ಹಂಚಿನಾಳ ಧರೆಪ್ಪ ದಾನಗೌಡ ಬಾಹುಬಲಿ ನ್ಯಾಮಗೌಡ, ಸದಾಶಿವ ಕಲೂತಿ ಶಿವಪ್ಪ ಕುರಣಿ, ಸುರೇಶ ಹಂಚಿನಾಳ, ಸದಪ್ಪ ಮಂಟೂರ ಮುಂತಾದವರು ಪಾಲ್ಗೊಂಡಿದ್ದರು.

ತಾಲೂಕಿನ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್‌ನ್ನು ಹಂತ ಹಂತವಾಗಿ ಪಾವತಿಸುತ್ತಿದ್ದಾರೆ. ಈ ಹಿಂದೆ ಸೂಚಿಸಿದಂತೆ ಎಲ್ಲ ಕಾರ್ಖಾನೆಗಳು ಮಾಹಿತಿ ನೀಡಿದ್ದವು. ಅಲ್ಲದೇ ಬಿಲ್‌ ಪಾವತಿ ಕಾರ್ಯವು ನಡೆದಿತ್ತು. ಸದ್ಯದ ಪರಿಸ್ಥಿತಿ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೋಳ್ಳುತ್ತೇವೆ.

ಅನೀಲ ಬಡಿಗೇರ ತಹಸೀಲ್ದಾರ್ ಜಮಖಂಡಿ.

ಸದ್ಯ ನದಿಲ್ಲಿ ನೀರಿಲ್ಲ. ತಾಲೂಕಿನ ರೈತರ ಪರವಾಗಿ ಮೇಲಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿದ್ದು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನೀರು ಬಿಡುವ ಕುರಿತು ಯಾವುದೇ ಪ್ರಾಧಿಕಾರದಿಂದ ಹೊಸ ನಿರ್ದೇಶನಗಳು ಬಂದಿಲ್ಲ.

ಶ್ವೇತಾ ಬೀಡಿಕರ ಉಪವಿಭಾಗಾಧಿಕಾರಿ ಜಮಖಂಡಿ.