ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗ ಮಹಿಳಾ ಪದವಿ ಕಾಲೇಜು ನಿರ್ಮಾಣ ಮಾಡದಂತೆ ಆಗ್ರಹಿಸಿ ಕಾಗಸ್ ಫೌಂಡೇಶನ್‌ನ ಮುಖ್ಯಸ್ಥೆ ಹಾಗೂ ಸಮಾಜ ಸೇವಕಿ ಕವಿತಾ ರೆಡ್ಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗ ಯಾವುದೇ ಕಾರಣದಿಂದ ಮಹಿಳಾ ಕಾಲೇಜು ನಿರ್ಮಾಣ ಮಾಡಬಾರದೆಂದು ವಿವಿಧ ಸಂಘಸಂಸ್ಥೆಗಳು ಜಿಲ್ಲಾಡಳಿತಕ್ಕೆಆಗ್ರಹಿಸಿವೆ.

ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಭೇಟಿ ಮಾಡಿದ ಕಾಗಸ್ ಫೌಂಡೇಶನ್‌ನ ಮುಖ್ಯಸ್ಥೆ ಹಾಗೂ ಸಮಾಜ ಸೇವಕಿ ಕವಿತಾ ರೆಡ್ಡಿ ಸರ್ಕಾರಿ ವಿಜ್ಞಾನ ಕಾಲೇಜಿನ ಪಕ್ಕದಲ್ಲಿ ಸರ್ಕಾರಿ ಮಹಿಳಾ ಕಾಲೇಜನ್ನು ನಿರ್ಮಿಸುವುದರಿಂದ ಎರಡು ಕಾಲೇಜುಗಳ ಬೆಳವಣಿಗೆಗೆ ಜಾಗದ ಕೊರತೆ ಉಂಟಾಗುತ್ತದೆ, ಮುಂದೆ ಎರಡು ಕಾಲೇಜುಗಳು ಸಹ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ, ಹೊಸದಾಗಿ ನಿರ್ಮಾಣವಾಗುವ ಕಾಲೇಜುಗಳನ್ನು ನಗರದ ಬೇರೆ ಬೇರೆ ಸ್ಥಳದಲ್ಲಿ ಸ್ಥಾಪಿಸಿದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಂದು ಹೋಗಲು ಅನುಕೂಲಕರವಾಗುತ್ತದೆ ಎಂದರು.

ಒಂದೇ ಕ್ಯಾಂಪಸ್‌ನಲ್ಲಿ ಎರಡು-ಮೂರು ಕಾಲೇಜುಗಳನ್ನು ಸ್ಥಾಪಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ. ಎರಡು ಕಾಲೇಜುಗಳ ಮಧ್ಯೆ ಪೈಪೋಟಿ ಉಂಟಾಗಿ ಎರಡರ ಬೆಳವಣಿಗೆಗೂ ತೊಂದರೆಯಾಗುತ್ತದೆ. ಹಾಗಾಗಿ ಈಗ ಸರ್ಕಾರಿ ಮಹಿಳಾ ಕಾಲೇಜಿಗೆ ನೀಡಿರುವ ಎರಡು ಎಕರೆ ಜಾಗ ಯಾವುದಕ್ಕೂ ಸಾಲದು, ಅದಕ್ಕೆ ಇನ್ನೂ ಹೆಚ್ಚಿನ ವಿಸ್ತೀರ್ಣದ, ಕನಿಷ್ಠ 5 ಎಕರೆನ್ನಾದರೂ ನೀಡಿ ಎಂದು ಆಗ್ರಹಿಸಿದರು.

ಪ್ರತಿ ಕಾಲೇಜಿಗೂ ಕನಿಷ್ಠ ಪಕ್ಷ 5 ಎಕರೆ ಜಾಗವಿದ್ದರೆ ಮುಂದೆ ಅವರ ಹಾಸ್ಟೆಲ್‌ಗಳಿಗೆ ಕ್ರೀಡಾ ಚಟುವಟಿಕೆಗಳಿಗೆ, ಸ್ನಾತಕೋತ್ತರ ವಿಭಾಗಕ್ಕೆ, ಎನ್‌ಸಿಸಿ,

ಎನ್‌ಎಸ್ಎಸ್ ಹಾಗೂ ಇನ್ನಿತರ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಜಾಗ ದೊರೆತಂತಾಗುತ್ತದೆ. ಹಾಗೂ ವಿವಿಧ ಭಾಗಗಳಿಂದ ಬರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುತ್ತದೆ. ಎಲ್ಲಾ ಕಾಲೇಜುಗಳನ್ನು ಒಂದೇ ಜಾಗದಲ್ಲಿ, ಒಂದೇ ಕ್ಯಾಂಪಸ್ ನಲ್ಲಿ ಸ್ಥಾಪಿಸುವುದರಿಂದ ಮುಂದೆ ಜಾಗದ ಕೊರತೆ ಉಂಟಾಗಿ, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತದೆ ಹಾಗೂ ಅವರ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ ಎಂದರು.

ವಿಜ್ಞಾನ ಕಾಲೇಜು ಮುಂಭಾಗದ ಜಾಗವನ್ನು ಆ ಕಾಲೇಜಿಗೆ ಬಿಟ್ಟುಕೊಟ್ಟರೆ, ಮುಂದೆ ಸ್ನಾತಕ್ಕೂತ್ತರ ವಿಭಾಗಗಳನ್ನು ತೆರೆದುಕೊಳ್ಳಲು ಅಥವಾ ಗ್ರಂಥಾಲಯಗಳನ್ನು ವಿಸ್ತೀರ್ಣಗೊಳಿಸಲು, ಔಷಧ ಸಸ್ಯಗಳ ಬೆಳವಣಿಗೆ ಮಾಡಲು ಅಥವಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಕೊಠಡಿಗಳ ಸಂಖ್ಯೆಗಳನ್ನು ಹೆಚ್ಚಿಸಲು ಅವಕಾಶ ನೀಡಿದಂತಾಗುತ್ತದೆ. ಈಗಾಗಲೇ ಹೆಣ್ಣು ಮಕ್ಕಳೆ ಹೆಚ್ಚು ಓದುತ್ತಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಅಭಿವೃದ್ಧಿಗೂ ಸಹ ಪೈಪೋಟಿ ಏರ್ಪಡುತ್ತದೆ, ಹೆಣ್ಣು ಮಕ್ಕಳೇ ಹೆಚ್ಚು ಓದುತ್ತಿರುವ ಕಾಲೇಜಿನ ಮುಂಭಾಗದಲ್ಲಿ, ಇನ್ನೊಂದು ಮಹಿಳಾ ಕಾಲೇಜನ್ನು ತೆರೆಯುವುದು ಹಣದ ವ್ಯಯವಾದಂತಾಗುತ್ತದೆ ಎಂದರು.

ಒಂದೇ ಕಾಲೇಜಿನ ಪಕ್ಕ ಇನ್ನೊಂದು ಕಾಲೇಜು ಸ್ಥಾಪನೆ ಮಾಡುವುದರಿಂದ ಅಲ್ಲಿ ಎರಡು ಕಾಲೇಜುಗಳ ಮಧ್ಯೆ ಪೈಪೋಟಿ ಸಹ ಉಂಟಾಗಿ ಯಾವುದಾದರೂ ಒಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಬಹುದು, ಅದರಿಂದ ಆ ಕಾಲೇಜಿನಲ್ಲಿರುವ ಉಪನ್ಯಾಸಕರಿಗೆ ಕೆಲಸವಿಲ್ಲದಂತಾಗಬಹುದು, ಈ ರೀತಿ ಪೈಪೋಟಿ ಮಾಡುವುದರಿಂದ ಸಾರ್ವಜನಿಕ ಹಣ ವ್ಯರ್ಥವಾಗುತ್ತದೆ ಹಾಗೂ ಎರಡು ಕಾಲೇಜಿನ ಅಭಿವೃದ್ಧಿಗೆ ಮಾರಕವಾಗುತ್ತದೆ ಹಾಗಾಗಿ ಚಿತ್ರದುರ್ಗದಲ್ಲಿ ಒಂದೇ ಕಡೆ ಎರಡು ಕಾಲೇಜುಗಳನ್ನು ಸ್ಥಾಪಿಸುವುದು ಉತ್ತಮವಾದದ್ದಲ್ಲ ಎಂದು ವಿನಂತಿಸಿಕೊಂಡರು.

ಸರ್ಕಾರಿ ವಿಜ್ಞಾನಕ್ಕಾಗಿ ಮುಂಭಾಗದಲ್ಲಿರುವ ಮರಗಳು ಸಹ ಅತ್ಯಮೂಲ್ಯ ವಾದಂತವುಗಳು, ಮರಗಳನ್ನು ಬೆಳೆಸುವುದು ಸಹ ಈಗಿನ ಕಾಲದಲ್ಲಿ ಕಷ್ಟಕರವಾಗಿದೆ. ಮರಗಳನ್ನು ಕಡಿಯುವುದರಿಂದ ನಗರದ ತಾಪಮಾನ ಮಾಲಿನ್ಯ ಕೂಡ ಹೆಚ್ಚಾಗುತ್ತದೆ. ಈಗ ಸದ್ಯ ಚಿತ್ರದುರ್ಗ ಬಯಲು ಸೀಮೆ ಪ್ರದೇಶವಾಗಿರುವುದರಿಂದ, ಇಲ್ಲಿ ಮರಗಳನ್ನು ಉಳಿಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ ಎಂದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷದ ಡಾ.ಎಚ್.ಕೆ.ಎಸ್.ಸ್ವಾಮಿ ಈಗಾಗಲೇ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿ ಮೂರು ಮರಗಳನ್ನು ಕಡಿಯಲಾಗಿದೆ, ಉಳಿದ ಮರಗಳನ್ನಾದರೂ ಉಳಿಸಿ ಕೊಡುವ ನಿಟ್ಟಿನಲ್ಲಿ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು. ಹಳೆ ವಿದ್ಯಾರ್ಥಿ ಸಂಘಟನೆಯ ಸಲೀಂ ಮಹಮದ್, ಟಾರ್ಗೆಟ್ ಟೆನ್ ತೌಸಂಡ್ ನ ಸದಸ್ಯ ತೇಜಮೂರ್ತಿ ಈ ವೇಳೆ ಉಪಸ್ಥಿತರಿದ್ದರು.