ಡಿಕೆಶಿ ರಾಜಕೀಯ ಅಧ್ಯಾಯ ಮುಗಿದರೂ ಅಚ್ಚರಿ ಇಲ್ಲ

| Published : Jun 21 2024, 01:02 AM IST

ಸಾರಾಂಶ

ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಅಧ್ಯಾಯವೇ ಮುಕ್ತಾಯವಾದರೂ ಅಚ್ಚರಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.

ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಅಧ್ಯಾಯವೇ ಮುಕ್ತಾಯವಾದರೂ ಅಚ್ಚರಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣ ಕ್ಷೇತ್ರದಿಂದ ಹೊಸ ರಾಜಕೀಯ ಅಧ್ಯಾಯ ಪ್ರಾರಂಭದಿಂದರೂ ಆಗಬಹುದು. ಇಲ್ಲವೇ ರಾಜಕೀಯ ಅಧ್ಯಾಯ ಮುಕ್ತಾಯ ಆದರೂ ಆಗಬಹುದು. ಕಾದು ನೋಡಿ ಎಂದರು.

ಡಿ.ಕೆ.ಶಿವಕುಮಾರ್ ಸುಧೀರ್ಘ ರಾಜಕೀಯ ಜೀವನದ ಮುಸ್ಸಂಜೆಯಲ್ಲಿದ್ದಾರೆ. ರಾಜಕಾರಣದಲ್ಲಿ ಅನೇಕ ಏಳು ಬೀಳು ಕಂಡವರು. ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು. ಈಗ ಬೇಲ್ ಮೇಲಿದ್ದು, ರಾಜಕೀಯದ ಕೊನೆ ಪುಟದಲ್ಲಿದ್ದಾರೆ. ಕಾಂಗ್ರೆಸ್ ಶಾಸಕರು ಹಾಗೂ ಸಿದ್ದರಾಮಯ್ಯ ವಿಶ್ವಾಸ ಪಡೆದರೆ ನಾಳೆಯೇ ಮುಖ್ಯಮಂತ್ರಿ ಆಗಬಹುದು. ಕ್ಷೇತ್ರ ಬದಲಾಯಿಸಿದ ಮಾತ್ರಕ್ಕೆ ಮುಖ್ಯಮಂತ್ರಿ ಆಗುತ್ತಾರೆ ಎಂಬುದೆಲ್ಲ ಭ್ರಮೆ ಎಂದು ಟೀಕಿಸಿದರು.

ಡಿ.ಕೆ.ಸುರೇಶ್ ಸೋಲು ಡಿ.ಕೆ.ಶಿವಕುಮಾರ್ ಅವರಿಗೆ ಹತಾಶೆ ತಂದಿದೆ. ಆ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಲೂ ಅವರು ಪಾಠ ಕಲಿತಂತೆ ಕಾಣುತ್ತಿಲ್ಲ. ಚನ್ನಪಟ್ಟಣದ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಧಮ್ಕಿ ಹಾಕಿದ್ದಾರೆ. ಒಂದೇ ಸಮುದಾಯದ 7-8 ಸಾವಿರ ಮತಗಳನ್ನು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಆರೋಪಿಸಿದರು.

ಅಧಿಕಾರ ದುರ್ಬಳಕೆ ಮಾಡಿಕೊಂಡು ವಾಮ ಮಾರ್ಗದಲ್ಲಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲ್ಲಲು ಬರುತ್ತಿದ್ದಾರೆ. ಈ ವಾಮಮಾರ್ಗಕ್ಕೆ ಕಾನೂನು ರೀತಿ ಕಡಿವಾಣ ಹಾಕಿಸಲು ನಾವು ಸನ್ನದ್ಧರಾಗಿದ್ದೇವೆ. ಪಾರದರ್ಶಕವಾಗಿ ಉಪ ಚುನಾವಣೆ ನಡೆಸಲು ಕ್ರಮ ವಹಿಸುವಂತೆ ಚುನಾವಣಾ ಆಯೋಗಕ್ಕೆ ನಾವು ಮನವಿ ಮಾಡುತ್ತೇವೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಆಯೋಗ ಕಠಿಣ ಕ್ರಮ ಕೈಗೊಂಡ ಕಾರಣ ಕನಕಪುರ ಕ್ಷೇತ್ರದಲ್ಲಿ ಅಕ್ರಮಗಳು ನಡೆಯಲಿಲ್ಲ. ಆದರೆ, ಚನ್ನಪಟ್ಟಣದಲ್ಲಿ ಅಕ್ರಮ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಆ ರೀತಿಯ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ. ಡಿಕೆಶಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದ್ದರಿಂದ ಏಳೆಂಟು ಸಾವಿರ ಮತಗಳು ಮೈನಸ್ ಆಗಿವೆ ಎಂದು ಹೇಳಿದರು.

ಸಾತನೂರು ಕ್ಷೇತ್ರ ಇದ್ದಾಗ 30-40 ವರ್ಷಗಳಿಂದ ಚನ್ನಪಟ್ಟಣದ 2 ಹೋಬಳಿಯ ಕೆಲ ಭಾಗಗಳನ್ನು ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಿದ್ದರು. ಆ ಋಣ ತೀರಿಸಲು ಬರುತ್ತಿದ್ದೇನೆಂದು ಹೇಳಿದ್ದಾರೆ. ಯಾವುದೇ ಚುನಾವಣೆಯಲ್ಲಿ ಸ್ಪರ್ಧೆಗೆ ಪ್ರತಿಸ್ಪರ್ಧೆ ಮುಖ್ಯ. ಹಾಗಾಗಿ ಅವರ ಸ್ಪರ್ಧೆಯನ್ನು ಸ್ವಾಗತಿಸುತ್ತೇವೆ. ರಾಜಕೀಯದಲ್ಲಿ ಸ್ಪರ್ಧೆ ಅನಿವಾರ್ಯ. ಆ ಸ್ಪರ್ಧೆ ಉತ್ತಮವಾದ ವಾತಾವರಣದಲ್ಲಿ ನಡೆಯಬೇಕೆಂದು ನಾವು ಬಯಸುತ್ತೇವೆ ಎಂದು ತಿಳಿಸಿದರು.

ಆದರೆ, ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಜೀವನದಲ್ಲಿ ಮೊದಲಿನಿಂದಲೂ ಕುತಂತ್ರ ನಡೆಸುತ್ತಾ ಬಂದಿದ್ದಾರೆ. ಪಾರದರ್ಶಕವಾಗಿ ಗೆಲ್ಲಲು ಆಗದಿದ್ದರೆ ವಾಮಮಾರ್ಗದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳೆಲ್ಲ ಟಾರ್ಚರ್ ಕೊಡುತ್ತಾರೆ. ನಾನಾಗಲಿ ಅಥವಾ ಕುಮಾರಸ್ವಾಮಿ ಅವರಾಗಲಿ ಎಂದೂ ಅಧಿಕಾರಿಗಳಿಗೆ ಕಿರುಕುಳ ಕೊಟ್ಟವರಲ್ಲ ಎಂದು ಹೇಳಿದರು.

ಡಿ.ಕೆ.ಸುರೇಶ್ ಇಲ್ಲಿ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ ಅವರೇ ಸ್ಪರ್ಧೆ ಮಾಡುತ್ತಿದ್ದಾರೆ ಅಂದರೆ ಬೇರೆಯವರು ಗೆಲ್ಲುವುದಿಲ್ಲ ಎಂಬುದು ಸಾಬೀತಾಯಿತು. ಡಿ.ಕೆ.ಶಿವಕುಮಾರ್ ಸ್ಪರ್ಧೆಯಿಂದ ನಮಗೇನು ಆತಂಕ ಇಲ್ಲ. ಈ ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ ಸೋಲುತ್ತದೆ. ಹಾಗಾಗಿ ವಾಮಾಮಾರ್ಗದಲ್ಲಿ ಚುನಾವಣೆ ಮಾಡಲು ಡಿಕೆಶಿ ಬರುತ್ತಿದ್ದಾರೆ. ಅವರನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಯೋಗೇಶ್ವರ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ವಂದಾರಗುಪ್ಪೆ ಚಂದ್ರು, ಶಿವಕುಮಾರ್ , ಜೆಡಿಎಸ್ ಮುಖಂಡ ಜಯಕುಮಾರ್ ಇದ್ದರು.

ಬಾಕ್ಸ್‌.........

ಉಪಚುನಾವಣೆ ಸ್ಪರ್ಧೆಗೆ ಪರೋಕ್ಷ ಒಪ್ಪಿಗೆ

ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಪೈಕಿ ಯಾವುದಾದರು ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಲು ತಮಗೆ ಅಭ್ಯಂತರ ಇಲ್ಲ. ಉಭಯ ಪಕ್ಷಗಳ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಾವು ಆಕಾಂಕ್ಷಿ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ - ಜೆಡಿಎಸ್ ಚಿಹ್ನೆ ನಮಗೆ ಸಮಸ್ಯೆಯೇ ಅಲ್ಲ. ಉಭಯ ಪಕ್ಷಗಳ ವರಿಷ್ಠರು ಚರ್ಚಿಸಿ ತೀರ್ಮಾನ ಮಾಡಿ ಯಾವುದೇ ಚಿಹ್ನೆಯಲ್ಲಿ ಸ್ಪರ್ಧಿಸಲು ಹೇಳಿದರು ನಮಗೆ ಅಭ್ಯಂತರ ಇಲ್ಲ. ಯಾರನ್ನೇ ಅಭ್ಯರ್ಥಿ ಮಾಡಿದರು ವಿರೋಧ ಇಲ್ಲ ಎಂದರು.

ಈ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ - ಜೆಡಿಎಸ್ ವರಿಷ್ಠರಿಂದ ಆಗಬೇಕಿದೆ. ಅದರಲ್ಲೂ ಕೇಂದ್ರ ಸಚಿವ ಕುಮಾರಸ್ವಾಮಿರವರ ತೀರ್ಮಾನ ಕೂಡ ಮುಖ್ಯವಾಗಿರುತ್ತದೆ. ಅವರೊಂದಿಗೆ ನಾನು ಚರ್ಚೆ ನಡೆಸಿಲ್ಲ. ವೈಯಕ್ತಿಕವಾಗಿ ನಾನು ಆಕಾಂಕ್ಷಿ ಅಂತಲೂ ಹೇಳುವುದಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಣಯದ ವಿರುದ್ಧ ಹೋಗುವುದಿಲ್ಲ. ಯಾರೇ ಅಭ್ಯರ್ಥಿಯಾದರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಎನ್ ಡಿಎ ಅಭ್ಯರ್ಥಿಯಿಂದ ಡಿ.ಕೆ.ಶಿವಕುಮಾರ್ ಮಣಿಸುವ ಆತ್ಮವಿಶ್ವಾಸ ಇದೆ. ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನಾನ್ನಲ್ಲದೆ ಬೇರೆ ಯಾರಿಗಾದರು ಟಿಕೆಟ್ ಸಿಗಲಿ ಅಪಸ್ವರ ಎತ್ತದೆ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಯೋಗೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

20ಕೆಆರ್ ಎಂಎನ್ 2.ಜೆಪಿಜಿ

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.