ಸಾರಾಂಶ
ಕೆರೂರ ಪಟ್ಟಣದಲ್ಲಿ ಅನುದಾನವಿಲ್ಲದೆ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ ಎಂಬ ವದಂತಿಗೆ ಉತ್ತರವಾಗಿ ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಬುಧವಾರ ಸಿಬ್ಬಂದಿ ಸಮೇತ ಪೂಜಾಕಾರ್ಯ ಕೈಗೊಂಡ ಸ್ಥಳಗಳಿಗೆ ಗುತ್ತಿಗೆದಾರರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕೆರೂರ
ಪಟ್ಟಣದಲ್ಲಿ ಅನುದಾನವಿಲ್ಲದೆ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ ಎಂಬ ವದಂತಿಗೆ ಉತ್ತರವಾಗಿ ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಬುಧವಾರ ಸಿಬ್ಬಂದಿ ಸಮೇತ ಪೂಜಾಕಾರ್ಯ ಕೈಗೊಂಡ ಸ್ಥಳಗಳಿಗೆ ಗುತ್ತಿಗೆದಾರರೊಂದಿಗೆಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಗುತ್ತಿಗೆದಾರರಿಗೆ ಕಾಮಗಾರಿ ಪ್ರಾರಂಭಿಸಲು ಆದೇಶ ನೀಡಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಕಾಮಗಾರಿ ಸ್ಥಳದಲ್ಲಿ ಅಡೆತಡೆಯಾಗಿರುವ ಒತ್ತುವರಿ ಕಟ್ಟೆ ಕಟ್ಟಡತೆರವುಗೊಳಿಸಿ ಗುಣಮಟ್ಟದ ರಸ್ತೆ ಗಟಾರ ನಿರ್ಮಾಣಕ್ಕೆ ಸಹಕರಿಸಬೇಕೆಂದು ನಾಗರಿಕರಿಗೆ ಮನವಿ ಮಾಡಿದರು.
ಬಸ್ ನಿಲ್ದಾಣ ಹತ್ತಿರದ ಪಶು ಆಸ್ಪತ್ರೆಯ ಆವರಣದ ಮುಂಭಾಗದ ದುರಸ್ತಿ ಕಾರ್ಯವನ್ನು ಇಂದಿನಿಂದಲೇ (ಬುಧವಾರ ) ಆರಂಭವಾಗಬೇಕೆಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಹೇಳಿದರು. ಪಟ್ಟಣದಲ್ಲಿ ಸಂಚರಿಸಿ ರಸ್ತೆ ಚರಂಡಿ ವೀಕ್ಷಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪೌರ ಕಾರ್ಮಿಕರಿಗೆ ಸೂಚಿಸಿದರು. ಬೇಸಿಗೆ ಕಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಹೆಚ್ಚು. ರಸ್ತೆ ಹಾಗೂ ಗಟಾರಗಳಲ್ಲಿ ಕೊಳಕು ಸಂಗ್ರಹವಾಗದಂತೆ ನೋಡಿಕೊಳ್ಳಬೇಕೆಂದು ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ ಅವರು, ಪಟ್ಟಣದ ರಸ್ತೆಗಳು, ಚರಂಡಿ, ಶೌಚಾಲಯ ನಿರ್ಮಾಣ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳಿಗಾಗಿ ₹40 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಶಾಸಕ ಭೀಮಸೇನ ಚಿಮ್ಮನಕಟ್ಟಿಯವರು ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.ಅಭಿಯಂತರ ಎಂ.ಐ. ಹೊಸಮನಿ, ಸ್ಯಾನಿಟರಿ ಇನಸ್ಪೆಕ್ಟರ್ ನವೀನ ಮಹಾರಾಜನವರ, ಪಪಂ ಸದಸ್ಯ ಪರಶುರಾಮ ಮಲ್ಲಾಡದ, ಸುರೇಶ ಪೂಜೇರಿ, ಗುತ್ತಿಗೆದಾರರಾದ ಹನುಮಂತ ಮತ್ತಿಕಟ್ಟಿ, ಗೈಬುಸಾಬ ವಠಾರದ ಇತರರು ಇದ್ದರು.