ದಾಸರಹಳ್ಳಿ ಕ್ಷೇತ್ರದಲ್ಲಿ ನೀಗದ ನೀರಿನ ಸಮಸ್ಯೆ; ಹೋರಾಟದ ಎಚ್ಚರಿಕೆ ನೀಡಿದ ಮುನಿರಾಜು

| Published : May 03 2024, 01:00 AM IST

ದಾಸರಹಳ್ಳಿ ಕ್ಷೇತ್ರದಲ್ಲಿ ನೀಗದ ನೀರಿನ ಸಮಸ್ಯೆ; ಹೋರಾಟದ ಎಚ್ಚರಿಕೆ ನೀಡಿದ ಮುನಿರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಪೀಣ್ಯ ದಾಸರಹಳ್ಳಿ ಜನರ ಕುಂದು ಕೊರತೆ ಆಲಿಸುತ್ತಾ, ಕೆಲವು ಭಾಗದಲ್ಲಿ ನೀರಿನ ಸಮಸ್ಯೆ, ರಸ್ತೆ, ಚರಂಡಿ ಕಾಮಗಾರಿಗಳ ಗುಣಮಟ್ಟವನ್ನು ಶಾಸಕ ಎಸ್.ಮುನಿರಾಜು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಜನರ ಕುಂದು ಕೊರತೆ ಆಲಿಸುತ್ತಾ, ಕೆಲವು ಭಾಗದಲ್ಲಿ ನೀರಿನ ಸಮಸ್ಯೆ, ರಸ್ತೆ, ಚರಂಡಿ ಕಾಮಗಾರಿಗಳ ಗುಣಮಟ್ಟವನ್ನು ಶಾಸಕ ಎಸ್.ಮುನಿರಾಜು ಪರಿಶೀಲಿಸಿದರು.

ಬಾಗಲಗುಂಟೆ ವಾರ್ಡ್ ಸಿಡೇದಹಳ್ಳಿಯ ಸಹ್ಯಾದ್ರಿ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ, ಸಿದ್ದೇಶ್ವರ ಬಡಾವಣೆ, ಸೌಂದರ್ಯ ಬಡಾವಣೆ ಇನ್ನೂ ಹಲವು ಭಾಗಗಳಲ್ಲಿ ಜನರ ಕುಂದು ಕೊರತೆ ಆಲಿಸಿ ಮಾತನಾಡಿದರು.

ಕೆಲವೊಂದು ಭಾಗದಲ್ಲಿ ಅವೈಜ್ಞಾನಿಕ ಚರಂಡಿ ಮಾಡಲಾಗಿದೆ. ಅದನ್ನು ಸರಿಪಡಿಸಲು ತಿಳಿಸಲಾಯಿತು. ನೀರಿನ ಸಮಸ್ಯೆ ಬಹಳಷ್ಟಿದೆ. ಮುಖ್ಯಮಂತ್ರಿಗಳಿಗೆ, ಡಿಸಿಎಂ ಮತ್ತು ಜಲಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದು ಬೇಜವಾಬ್ದಾರಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕ್ಷೇತ್ರಕ್ಕೆ ನೀರಿಗಾಗಿ ₹4 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದ ಪಾಲಿಕೆ ಆಯುಕ್ತರು, ಚುನಾವಣೆಗೆ ಮುನ್ನ ಸಭೆ ಮಾಡಿ ಟೆಂಡರ್ ಕರೆದು ಕೆಲಸ ಮಾಡಿ ಎಂದರು, ಇನ್ನೂ ಅದರ ಟೆಂಡರ್ ಕರೆದಿಲ್ಲ. ಹಣ ಬಿಡುಗಡೆಗಾಗಿ ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತೆ ಪತ್ರ ಬರೆದಿದ್ದೇನೆ ಎಂದರು.

ನಮ್ಮಲ್ಲಿ ನೀರಿನ ಹಾಹಾಕಾರವಿದೆ. ಬೇರೆ ಕ್ಷೇತ್ರಗಳಿಗೆ 8ರಿಂದ 9 ಕೋಟಿ ರುಪಾಯಿ ನೀಡಿದ್ದಾರೆ. ನಮಗೆ ₹4 ಕೋಟಿ ಕೊಟ್ಟಿದ್ದಾರೆ. ಕಾವೇರಿ ನೀರು 12 ದಿನಕ್ಕೊಮ್ಮೆ ಬರುತ್ತಿದೆ. ಹೆಣ್ಣು ಮಕ್ಕಳು ನೀರಿಗಾಗಿ ನಿತ್ಯ ದೂರುಗಳನ್ನು ನೀಡುತ್ತಿದ್ದಾರೆ. ಇಂತಹ ಸಮಸ್ಯೆಗೆ ಪ್ರತಿದಿನ ಒಂದೊಂದು ಭಾಗಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಸರ್ಕಾರವು ಸಹ ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಅಸ್ತ್ರ ಮಾತ್ರ ಉಳಿದಿದೆ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಹೇಳೋ ಪ್ರಕಾರ ಜೂನ್ 4 ರವರೆಗೆ ನೀತಿ ಸಂಹಿತೆ ಇದೆ. ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಿಲ್ಲ, ಟೆಂಡರ್ ಕರೆದರೂ ವರ್ಕ್‌ ಆರ್ಡರ್ ನೀಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಅದಕ್ಕಾಗಿ ನಾವು ಕೇಳುವುದೇನೆಂದರೆ ಕುಡಿಯುವ ನೀರಿಗಾಗಿ ಚುನಾವಣಾ ಆಯೋಗದ ಬಳಿ ಅನುಮತಿ ತೆಗೆದುಕೊಂಡು ನಮ್ಮ ಹೊರವಲಯದ ಜನರಿಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ಕೇಳುತ್ತಿದ್ದೇವೆ ಎಂದರು.

ಶಾಸಕ ಎಸ್.ಮುನಿರಾಜು ಅವರು ಹೋದ ಕಡೆಗಳಲ್ಲಿ ನೂರಾರು ಜನರು ನೀರಿನ ಸಮಸ್ಯೆ ಹೇಳಿಕೊಂಡರು. ಕೆಲವೊಬ್ಬರ ಮನೆಗಳಿಗೆ ತೆರಳಿ ನೀರಿನ ಸಂಪು ಪರಿಶೀಲಿಸಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದರು.

ಬಿಜೆಪಿ ಮುಖಂಡರಾದ ಕೃಷ್ಣಮೂರ್ತಿ, ನಾರಾಯಣ್, ಪಿ.ಎಚ್.ರಾಜು, ಭರತ್ ಸೌಂದರ್ಯ, ಆನಂದ್ ರೆಡ್ಡಿ, ಸೂರ್ಯ ರಘು, ಬಿಜೆಪಿ ಮುಖಂಡರು, ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.