ಸಾರಾಂಶ
ಶ್ರೀ ದೇವಿ ಗುರುಕುಲದ 8ನೆಯ ವಾರ್ಷಿಕೋತ್ಸವ ಆಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿರೋಧ ರಹಿತವಾದದ್ದೇ ವೀರಶೈವ. ಪ್ರಧಾನ ತತ್ವತ್ರಯಗಳನ್ನು ಪ್ರತಿನಿಧಿಸುವ 856 ವೀರಶೈವ ಧರ್ಮದ ಸಂಕೇತ. ಇದನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕೆಂದು ಶ್ರೀಶೈಲಪೀಠದ ಶ್ರೀಮದ್ ಗಿರಿರಾಜಸೂರ್‍ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನಡೆದ ಶ್ರೀ ದೇವಿ ಗುರುಕುಲದ 8ನೆಯ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಲಿಂಗಧರಿಸಿ, ನಿತ್ಯ ಲಿಂಗಪೂಜೆ, ಇತರೆ ಎಲ್ಲ ಧರ್ಮಿಯ ರನ್ನು ಪ್ರೀತಿ ವಿಶ್ವಾಸ ಗೌರವದಿಂದ ನೋಡುವ ಜೊತೆಗೆ ವಿರೋಧ ರಹಿತವಾದ ಜೀವನ ನಡೆಸುವವರೆ ಸಾಮಾಜಿಕವಾಗಿ ವೀರಶೈವ ಎಂದನೆಸಿಕೊಳ್ಳುತ್ತಾನೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳು ವೀರಶೈವ ಧರ್ಮದ ಪ್ರಧಾನ ತತ್ವತ್ರಯಗಳಾದ ಸಂಕೇತಗಳು. ಇದರ ಬಗ್ಗೆ ಪ್ರತಿಯೊಬ್ಬರೂ ಕನಿಷ್ಟ ತಿಳುವಳಿಕೆ ಹೊಂದುವುದು ಅತ್ಯಗತ್ಯ ಎಂದರು.
ತತ್ವತ್ರಯಗಳನ್ನು ವೀರಶೈವ ಲಿಂಗಾಯತ ಸಂಸ್ಕೃತಿ ಎಲ್ಲ ಜಾತಿ ಉಪಜಾತಿ ಗುಂಪು ಸಂಪ್ರದಾಯ, ಸಮುದಾಯಗಳು ಒಪ್ಪಿಕೊಳ್ಳುತ್ತದೆ. 856 ಅನ್ನು ಯಾರೂ ವಿರೋಧಿಸುವ, ಆಕ್ಷೇಪಿಸುವ, ತಕರಾರು ತೆಗೆಯುವ ಸಂಭವವೇ ಇಲ್ಲ. ಸರ್ವರೂ ಒಪ್ಪಿಕೊಳ್ಳುವ ಸಂಕೇತವನ್ನು ವ್ಯಾಪಕವಾಗಿ ಸಮುದಾಯದಲ್ಲಿ ಪ್ರಚುರಪಡಿಸುವ ಅಗತ್ಯವಿದೆ ಎಂದ ಶ್ರೀಶೈಲ ಜಗದ್ಗುರು ಮಕ್ಕಳಿಗೆ ಅರಿವು ಮೂಡಿಸಬೇಕೆಂದರು.ದೇಶ ಧರ್ಮದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಅತ್ಯಗತ್ಯ. ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದ್ದು. ಧನಾಭಿ ಮಾನಕ್ಕಿಂತ ಧರ್ಮಾಭಿಮಾನ ರೂಢಿಸಿಕೊಳ್ಳುವುದು ಅಗತ್ಯ. ವಿವಿಧ ಸಂಪ್ರದಾಯಗಳಿದ್ದರೂ ಸಕಾರಾತ್ಮಕವಾಗಿ ಸೌಹಾರ್ದಯುತ ಬದುಕಿಗೆ ಆದ್ಯತೆ ನೀಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.ವಿದ್ಯೆಯ ಜೊತೆಗೆ ಸಂಸ್ಕಾರ ಮೇಳೈಸಬೇಕು. ಜ್ಞಾನ, ಶಕ್ತಿ, ಹಣ ಸರಿದಾರಿಯಲ್ಲಿ ಸಾಗಲು ಸಂಸ್ಕಾರ ಅವಶ್ಯ. ಶಕ್ತಿ ಆತ್ಮರಕ್ಷಣೆಗೇ ಹೊರತು ಇನ್ನೊಬ್ಬರನ್ನು ಹಿಂಸಿಸುವುದಲ್ಲ. ಜ್ಞಾನ ಸಂವಹನಕ್ಕೆ ಬಳಕೆಯಾಗಬೇಕೆ ಹೊರತು ಅಹಂಕಾರಕ್ಕಲ್ಲ. ಹಣ ದಾನಕ್ಕೆ ಹೊರತು ದರ್ಪಕ್ಕಲ್ಲ ಎಂಬುದನ್ನು ಅರ್ಥ ಮಾಡಿಸುವುದೇ ಸಂಸ್ಕೃತಿ. ಮಾತಾ ಪಿತರು, ಆಚಾರ್ಯರು ಅತಿಥಿಗಳು ದೇವರ ಸಮಾನ. ಬದುಕಿನ ಜೀವನದ ಮೌಲ್ಯ ಅರಿತು ಬಾಳಬೇಕು. ಪ್ರಾಚೀನ ಗುರುಕುಲಗಳು ಕುಟುಂಬ ವ್ಯವಸ್ಥೆ ಸರಿಪಡಿಸಲು ಪೂರಕವಾಗಿದ್ದವು ಎಂದ ಶ್ರೀಶೈಲ ಜಗದ್ಗುರುಗಳು, ಅನ್ನದಾತ ರೈತ, ವಿದ್ಯೆ ಕಲಿಸುವ ಗುರು ಮತ್ತು ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸಬೇಕೆಂದರು.
ಶಾಸಕ ಎಚ್.ಡಿ.ತಮ್ಮಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ ಸನಾತನ ಪರಂಪರೆಯ ಸಂರಕ್ಷಣೆಗೆ ಪಂಚಪೀಠಗಳು ಉತ್ತಮ ಕೊಡುಗೆ ನೀಡಿವೆ. ಇಂದು ಶ್ರೀಶೈಲ ಜಗದ್ಗುರುಗಳು ನಗರಕ್ಕೆ ಆಗಮಿಸಿದ ಫಲ ವೀರಶೈವ ಮಹಿಳೆ ಪ್ರಥಮ ಪ್ರಜೆ ನಗರಸಭಾ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮಳೆ, ಬೆಳೆ, ಬೆಲೆ ಸುಭೀಕ್ಷೆಗೊಂಡು ಆರೋಗ್ಯ ಪೂರ್ಣ ಸಮಾಜಕ್ಕೆ ಪೂಜ್ಯರ ಆಶೀರ್ವಾದ ಬಲನೀಡುತ್ತದೆ ಎಂದರು.ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಾಚೀನ ಪರಂಪರೆಯ ಮುಂದುವರಿಕೆಗೆ ದೇವಿ ಗುರುಕುಲ ಶ್ರಮಿಸು ತ್ತಿದೆ. ಶ್ರೀಶೈಲಪೀಠ ಸೇರಿದಂತೆ ಪಂಚಪೀಠಗಳು ಧರ್ಮಾಚರಣೆಗೆ ನಿರಂತರವಾಗಿ ಶ್ರಮಿಸುತ್ತಿವೆ. ಸಮಾಜದಲ್ಲಿ ಸಾಮರಸ್ಯ ಸದ್ಭಾವನೆ ಪ್ರೇರೇಪಿಸುತ್ತಿವೆ ಎಂದರು. ಶ್ರೀ ದೇವಿ ಗುರುಕುಲ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿ ಶಾಸ್ತ್ರಿ, ಆಶಾಕಿರಣ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಗುರುಕುಲದ ಮಹಾಪೋಷಕ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು.ಕೃಷಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಐದು ದಂಪತಿಗಳನ್ನು ಗೌರವಿಸುವ ’ರೈತ ನಮನ’ ಮತ್ತು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಆರು ಶಿಕ್ಷಕರಿಗೆ ’ಗುರು ನಮನ’ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿದ ಕುಮಾರಶರ್ಮ ಮತ್ತಿತರರನ್ನು ವಿಶೇಷ ’ಗುರುರಕ್ಷೆ’ ನೀಡಿ ಗೌರವಿಸಲಾಯಿತು.
ತಾವರೆಕೆರೆ ಶಿಲಾಮಠದ ಡಾ.ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸನಾತನ ಧಾರ್ಮಿಕ ಆಚರಣೆಗಳು ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಬೇರುಗಂಡಿ ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯರು, ಬೀರೂರಿನ ಶ್ರೀ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು ಮತ್ತು ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾ ರ್ಯರು, ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು, ಅಡ್ನೂರು-ಗದಗ ಬೃಹ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು, ನೀಲಗಲ್ ಬೃಹನ್ಮಠದ ಶ್ರೀ ಅಭಿನವರೇಣುಕ ಶಾಂತಮಲ್ಲ ಶಿವಾಚಾರ್ಯರ, ಲಕ್ಷ್ಮೀಪುರ ಬೃಹ್ಮಠದ ಶ್ರೀಚನ್ನಮಲ್ಲ ಶಿವಾಚಾರ್ಯರು ಉಪಸ್ಥಿತರಿದ್ದರು.ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಬಿ.ಎ.ಶಿವಶಂಕರ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಶ್ರೀಜಗದ್ಗುರು ರೇಣುಕಾಚಾರ್ಯಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜು, ಮೈಸೂರು ವೇದಮಾತಾ ಗುರುಕುಲದ ಸಂಸ್ಥಾಪಕ ವಿದ್ವಾನ ಡಾ.ಮಂಜುನಾಥ ಆರಾಧ್ಯ, ಗಾಳಿಹಳ್ಳಿಮಠದ ಗುರುಮೂರ್ತಯ್ಯ ಶಾಸ್ತ್ರಿ, ಕಾರ್‍ಯದರ್ಶಿ ವೇದಮೂರ್ತಿ, ಹೊನ್ನಾಳಿಯ ವೇ. ಮೂ.ವೀರೇಶಶಾಸ್ತ್ರಿ, ಮಂಡ್ಯದ ವೇ.ಮೂ.ಮಲ್ಲಿಕಾರ್ಜುನ, ವೇ.ಮೂ.ಮಧುಶಾಸ್ತ್ರಿ, ಹೊಸಳ್ಳಿಯ ವೇ.ಮೂ.ಗಿರೀಶಾರಾಧ್ಯ ವೇದಿಕೆಯಲ್ಲಿದ್ದರು.
6 ಕೆಸಿಕೆಎಂ 4ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನಡೆದ ಶ್ರೀ ದೇವಿ ಗುರುಕುಲದ 8ನೆಯ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶ್ರೀಶೈಲಪೀಠದ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ.ದಯಾನಂದಮೂರ್ತಿಶಾಸ್ತ್ರಿ, ಪ್ರಭುಲಿಂಗಶಾಸ್ತ್ರಿ ಇದ್ದರು.