ಮೇಯರ್ ಜ್ಯೋತಿ ಪಾಟೀಲ ಹಾಗೂ ಆಯುಕ್ತ ಡಾ. ರುದ್ರೇಶ ಘಾಳಿ ನೇತೃತ್ವದಲ್ಲಿ 43 ಜನ ಪಾಲಿಕೆ ಸದಸ್ಯರು, 10 ಅಧಿಕಾರಿ ತಂಡ ಇಂದೋರ್, ಅಹ್ಮದಬಾದ್ ಸೇರಿದಂತೆ ವಿವಿಧೆಡೆ 5 ದಿನ ಪ್ರವಾಸಕ್ಕೆ ತೆರಳಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೊಳಗಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪಾಲಿಕೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಇಂದೋರ್ ಸೇರಿದಂತೆ ಹೊರರಾಜ್ಯಗಳಿಗೆ ಪ್ರವಾಸಕ್ಕೆ ಹೋಗಿರುವುದನ್ನು ಪಕ್ಷಾತೀತವಾಗಿ ಎಲ್ಲ ಸದಸ್ಯರು ಸಮರ್ಥಿಸಿಕೊಂಡರು.ಈ ನಡುವೆ ಪ್ರವಾಸದ ಖರ್ಚು-ವೆಚ್ಚ, ಆಗಿರುವ ಲಾಭದ ಬಗ್ಗೆ ಎರಡು ದಿನದಲ್ಲಿ ಸಾರ್ವಜನಿಕವಾಗಿ ಬಹಿರಂಗ ಪಡಿಸುವುದಾಗಿ ಮೇಯರ್ ಜ್ಯೋತಿ ಪಾಟೀಲ ಸ್ಪಷ್ಟಪಡಿಸಿದರು.
ಮೇಯರ್ ಜ್ಯೋತಿ ಪಾಟೀಲ ಹಾಗೂ ಆಯುಕ್ತ ಡಾ. ರುದ್ರೇಶ ಘಾಳಿ ನೇತೃತ್ವದಲ್ಲಿ 43 ಜನ ಪಾಲಿಕೆ ಸದಸ್ಯರು, 10 ಅಧಿಕಾರಿ ತಂಡ ಇಂದೋರ್, ಅಹ್ಮದಬಾದ್ ಸೇರಿದಂತೆ ವಿವಿಧೆಡೆ 5 ದಿನ ಪ್ರವಾಸಕ್ಕೆ ತೆರಳಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೊಳಗಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪಾಲಿಕೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಗಮನ ಸೆಳೆದ ಸದಸ್ಯ ತಿಪ್ಪಣ್ಣ ಮಜ್ಜಗಿ, ಪ್ರವಾಸದ ಉದ್ದೇಶವೇನು? ಖರ್ಚಾಗಿರುವುದೆಷ್ಟು? ಸಾರ್ವಜನಿಕರ ಎದುರಿಗೆ ಬಹಿರಂಗ ಪಡಿಸಿ? ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪಾಲಿಕೆ ಬಗ್ಗೆ ಅಪಸ್ವರ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಮಜ್ಜಗಿ ಅವರ ಪ್ರಶ್ನೆಗೆ ಉತ್ತರಿಸಿದ ಆಯುಕ್ತ ಡಾ. ರುದ್ರೇಶ ಘಾಳಿ, ಸ್ವಚ್ಛ ಭಾರತ-2ರಲ್ಲಿ ಮಾಹಿತಿ, ಸಾಮರ್ಥ್ಯ, ಅಭಿವೃದ್ಧಿ ಅಡಿಯಲ್ಲಿ ₹ 87 ಲಕ್ಷ ಅನುದಾನವಿದೆ. ಇದನ್ನು ಪ್ರವಾಸಕ್ಕೆ ಬಳಸಲು ಅವಕಾಶವಿದೆ. ಇದೇ ಅನುದಾನ ಬಳಸಿಕೊಂಡು ಪ್ರವಾಸಕ್ಕೆ ತೆರಳಲಾಗಿದೆ. ಆದರೆ ಎಷ್ಟು ಖರ್ಚಾಗಿದೆ ಎಂಬುದು ಇನ್ನು ಲೆಕ್ಕ ಹಾಕಿಲ್ಲ. ನಂತರ ತಿಳಿಸಲಾಗುವುದು. ಇಂದೋರ್, ಅಹ್ಮದಬಾದ್, ಉಜ್ಜೈನಿಗಳಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಅಧ್ಯಯನದಿಂದ ಪಾಲಿಕೆ ಸದಸ್ಯರಿಗೆ ಸಾಕಷ್ಟು ಅನುಕೂಲವಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ತ್ಯಾಜ್ಯವನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಎಂಬುದೆಲ್ಲವನ್ನು ಅಧ್ಯಯನ ನಡೆಸಲಾಗಿದೆ. ಅಲ್ಲಿನ ಅಧಿಕಾರಿ, ಸದಸ್ಯರೊಂದಿಗೆ ಸಂವಾದ ನಡೆಸಲಾಗಿದೆ ಎಂದು ತಿಳಿಸಿದರು.ರಾಮಪ್ಪ ಬಡಿಗೇರ್ ಮಾತನಾಡಿ, ಪ್ರವಾಸದಿಂದ ಸದಸ್ಯರಿಗೆ ಸಾಕಷ್ಟು ತಿಳಿವಳಿಕೆ ಬರುತ್ತದೆ. ಅಲ್ಲಿ ಯಾವ ರೀತಿ ವ್ಯವಸ್ಥೆ ಇದೆ. ಇಲ್ಲಿ ಏನೆಲ್ಲ ಬದಲಾವಣೆ ಮಾಡಿಕೊಳ್ಳಬಹುದು ಎಂಬುದರ ಅರಿವಾಗುತ್ತದೆ. ಅಲ್ಲಿ ಪೌರಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಇಲ್ಲಿ ಅಷ್ಟಿಲ್ಲ ಎಂದು ತಿಳಿಸಿದರು.
ಇನ್ನು ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ, ಮಾಧ್ಯಮಗಳಲ್ಲಿ ಪ್ರವಾಸದ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಬರೀ ಅಧ್ಯಯನ ಎಂದು ಪ್ರತಿವರ್ಷ ಪ್ರವಾಸ ಮಾಡಲಾಗುತ್ತದೆ. ಆದರೆ, ಫಲಿತಾಂಶ ಮಾತ್ರ ಶೂನ್ಯ ಎಂಬಂತಾಗಿದೆ. ಅಲ್ಲಿಂದ ಬಂದ ಮೇಲೆ ಯಾವುದೇ ಬಗೆಯ ಅನುಷ್ಠಾನವಾಗುವುದಿಲ್ಲ. ಹಿಂದೆಯೂ ಸಾಕಷ್ಟು ಸಲ ಸದಸ್ಯರು ಪ್ರವಾಸಕ್ಕೆ ಹೋಗಿ ಬಂದಿದ್ದುಂಟು,. ಆದರೆ ಪ್ರಯೋಜನವೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.ಸದಸ್ಯ ವೀರಣ್ಣ ಸವಡಿ ಮಾತನಾಡಿ, ಅನುಷ್ಠಾನವಾದಾಗ ಮಾತ್ರ ಪ್ರವಾಸದ ಉಪಯೋಗವಾಗುತ್ತದೆ. ಆದರೆ ಪಾಲಿಕೆಯಲ್ಲಿ ಯಾವುದೇ ಯೋಜನೆ ಸರಿಯಾಗಿ ಅನುಷ್ಠಾನವಾಗಲ್ಲ. ಯಾವುದೇ ಪಕ್ಷದ ಸರ್ಕಾರವಿದ್ದರೂ ನಮಗೆ ಅನುದಾನ ನೀಡುವುದಿಲ್ಲ. ರಾಜ್ಯ ಸರ್ಕಾರ ನಮಗೆ ಸ್ಪಂದಿಸುತ್ತಲೇ ಇಲ್ಲ. ಇಂದೋರ್‌ನಲ್ಲಿನ ಪರಿಸ್ಥಿತಿ ಇಲ್ಲಿ ಬರಬೇಕೆಂದರೆ ನಮ್ಮ ಕಡೆಯೂ ಇಚ್ಛಾಶಕ್ತಿ ಬೇಕು. ಸರ್ಕಾರವೂ ಸ್ಪಂದಿಸಬೇಕು ಎಂದರು.
ಕೊನೆಗೆ ಪ್ರವಾಸದ ಬಗ್ಗೆ ಖರ್ಚು-ವೆಚ್ಚ, ಅಧ್ಯಯನದಿಂದ ಆಗಿರುವ ಲಾಭ, ಅನುಷ್ಠಾನಗೊಳಿಸುವ ಬಗ್ಗೆಯೂ ಸಾರ್ವಜನಿಕರ ಮುಂದಿಡಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ಹೇಳುವ ಮೂಲಕ ಚರ್ಚೆಗೆ ಇತಿಶ್ರೀ ಹಾಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್, ಎರಡು ದಿನಗಳಲ್ಲಿ ಖರ್ಚು-ವೆಚ್ಚ ಬಹಿರಂಗಪಡಿಸುವುದಾಗಿ ಭರವಸೆ ನೀಡಿದರು. ಮಂಗಳವಾರ ಬೆಳಿಗ್ಗೆಯಷ್ಟೇ ಪ್ರವಾಸ ಮುಗಿಸಿಕೊಂಡು ಸದಸ್ಯರೆಲ್ಲರೂ ಸಾಮಾನ್ಯಸಭೆಗೆ ಆಗಮಿಸಿದ್ದರು.ಏಕಾಂಗಿ ಧರಣಿಈ ನಡುವೆ ಅತ್ತ ಪಾಲಿಕೆಯ ಸಾಮಾನ್ಯ ಸಭೆಯೊಳಗೆ ಪ್ರವಾಸದ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿದ್ದರೆ, ಸಭೆಯ ಹೊರಗೆ ಪಾಲಿಕೆ ಪ್ರಾಂಗಣದಲ್ಲಿ ಸದಸ್ಯರ ಪ್ರವಾಸ ಖಂಡಿಸಿ, ಇಂದೋರ್‌ದಲ್ಲಿ ಸದಸ್ಯರು ತೆಗೆಸಿಕೊಂಡ ಫೋಟೋ ಹಾಗೂ ಹುಬ್ಬಳ್ಳಿಯಲ್ಲಿನ ಕಸದ ರಾಶಿಯ ಫೋಟೋ ಹಿಡಿದು ಸಂಜೀವ ದುಮಕನಾಳ ಏಕಾಂಗಿಯಾಗಿ ಧರಣಿ ನಡೆಸಿದರು. ಈ ಮೂಲಕ ಸಾರ್ವಜನಿಕರ ಗಮನ ಸೆಳೆದರು. ನಗರದಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ, ಪಾಲಿಕೆ ಸದಸ್ಯರು ಅಧ್ಯಯನದ ನೆಪದಲ್ಲಿ ಮಜಾ ಮೋಜು ಮಾಡಿ ಬಂದಿದ್ದಾರೆ ಎಂದು ಟೀಕಿಸಿದರು. ಜತೆಗೆ ಕಸದ ರಾಶಿಯನ್ನು ಚೀಲದಲ್ಲಿ ತುಂಬಿಕೊಂಡು ಬಂದು ಪಾಲಿಕೆ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.