ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ಜಿಲ್ಲೆಯಲ್ಲಿ ಶೇ. 81.61 ಮತದಾನ

| Published : Jun 04 2024, 12:30 AM IST

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ಜಿಲ್ಲೆಯಲ್ಲಿ ಶೇ. 81.61 ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಈಶಾನ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಶೇ. 81.61 ರಷ್ಟು ಮತದಾನವಾಗಿದೆ.

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ । 24 ಮತದಾನ ಕೇಂದ್ರದಲ್ಲಿ ಮತದಾನ

ಮತದಾನದಿಂದ ದೂರ ಉಳಿದ ಶೇ.19 ರಷ್ಟು ಪದವೀಧರರು

13,743 ಪದವೀಧರ ಮತದಾರರಲ್ಲಿ ಹಕ್ಕು ಚಲಾಯಿಸಿದ 11202 ಜನರುಕನ್ನಡಪ್ರಭ ವಾರ್ತೆ ಕೊಪ್ಪಳ

ಈಶಾನ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಶೇ. 81.61 ರಷ್ಟು ಮತದಾನವಾಗಿದ್ದು, ಇನ್ನು ಶೇ. 18.39ರಷ್ಟು ಪದವೀಧರ ಮತದಾರರು ಮತದಾನದಿಂದ ದೂರ ಉಳಿದಿದ್ದು ಅಚ್ಚರಿಗೆ ಕಾರಣವಾಗಿದೆ.

ಜಿಲ್ಲೆಯಲ್ಲಿ 24 ಮತಗಟ್ಟೆಗಳಲ್ಲಿ 13,743 ಮತದಾರರ ಪೈಕಿ 11202 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಮತಗಟ್ಟೆಯಲ್ಲಿ ತಹಸೀಲ್ದಾರ ಮತ್ತು ರಾಜಕೀಯ ಪಕ್ಷಗಳ ಮುಖಂಡರ ನಡುವೆ ನಡೆದ ವಾಕ್ಸಮರ ಹೊರತುಪಡಿಸಿ, ಉಳಿದೆಡೆ ಶಾಂತಿಯುತವಾಗಿ ಮತದಾನವಾಗಿದೆ.

ಪದವೀಧರರು ಬೆಳಗ್ಗೆಯಿಂದಲೇ ಮತದಾನ ಕೇಂದ್ರದತ್ತ ಆಗಮಿಸಿ ಮತಚಲಾಯಿಸಿದ್ದರಿಂದ ಮತದಾನ ಮಧ್ಯಾಹ್ನದ ವೇಳೆಗೆ ಶೇಕಡಾ 40- 50 ಆಯಿತು. ಇನ್ನು ಕೆಲ ಕೇಂದ್ರಗಳಲ್ಲಿ ಶೇ. 60-70 ರಷ್ಟು ಆಯಿತು. ಇದಾದ ಮೇಲೆ ಮತದಾನ ನಿಧಾನಗೊಂಡು, ಸಂಜೆ ನಾಲ್ಕು ಗಂಟೆಯ ವೇಳೆಯಲ್ಲಿ ತುರುಸುಗೊಂಡು, ಮತದಾನ ಶೇ. 81.61ರಷ್ಟು ಮತದಾನವಾಗಿದೆ.

ದೂರ ಉಳಿದಿದ್ಯಾಕೆ:

ಶೇಕಡಾ 18ರಷ್ಟು ಪದವೀಧರ ಮತಾದರರು ದೂರ ಉಳಿದಿದ್ದು ಅಚ್ಚರಿಗೆ ಕಾರಣವಾಯಿತು. ಸಾಮಾನ್ಯ ಚುನಾವಣೆಯಲ್ಲೇ ಶೇ. 70-80ರಷ್ಟು ಮತದಾನ ಆಗುವಾಗ ವಿದ್ಯಾವಂತರಾದ ಪದವೀಧರರ ಮತದಾನ ಹೆಚ್ಚಾಗಬೇಕಿತ್ತು ಎನ್ನುವ ಮಾತು ಕೇಳಿ ಬಂದಿತು.ಹಣದ ಹೊಳೆ:

ಅಚ್ಚರಿ ಎಂದರೆ ಪದವೀಧರರು ಮತದಾನ ಮಾಡುವ ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿದಾಡಿತು. ಪ್ರತಿ ಮತಕ್ಕೂ ₹600 ನಿಗದಿ ಮಾಡಿ ಪಾರ್ಟಿಯೊಂದು ಹಂಚಿಕೆ ಮಾಡಿದರೆ, ಮತ್ತೊಂದು ಪಕ್ಷವೂ ₹ 500-600 ಹಂಚಿಕೆ ಮಾಡಿತು ಎನ್ನಲಾಗುತ್ತಿದೆ. ಸರ್ಕಾರಿ ಉಪನ್ಯಾಸಕರು ಸಹ ಕೊಡುವ ಬಿಡಿಗಾಸು ಇಸಿದುಕೊಂಡು ಮತದಾನ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಯಿತು. ಲಕ್ಷ ಲಕ್ಷ ವೇತನ ಪಡೆಯುವವರು ಎಂಜಲು ಕಾಸಿಗೆ ಆಸೆಪಟ್ಟಿದ್ದು ಮಾತ್ರ ಪ್ರಜಾಪ್ರಭುತ್ವ ಮತ್ತು ಚುನಾವಣೆಯನ್ನು ಅಣಕಿಸುವಂತೆ ಕಂಡಿತು. ಇದ್ಯಾವುದು ಕದ್ದು, ಮುಚ್ಚಿ ನಡೆದಿಲ್ಲ, ಮತದಾನ ಕೇಂದ್ರದ ಸುತ್ತಲು ಹಣ ಹಂಚುತ್ತಿರುವುದು ಕಂಡುಬಂದಿತು.