ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಕಡೆಗಣನೆ: ಶಾಸಕ ಗಣೇಶ್

| Published : Nov 24 2025, 03:00 AM IST

ಸಾರಾಂಶ

ದೊಡ್ಡಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಕುರುಗೋಡು: ಇಲ್ಲಿನ ಸಿರಿಗನ್ನಡ ಯುವಕ ಸಂಘದ ಬೆಳ್ಳಿ ಮಹೋತ್ಸವ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ಅಲಂಕೃತ ರಥದಲ್ಲಿ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಜರುಗಿತು.

ದೊಡ್ಡಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ನಂದಿಧ್ವಜ, ಸಮಾಳ, ರಾಮ್ಡೋಲ್, ತಾಸಿರಾಮ್, ಡೊಳ್ಳು, ಕಂಸಾಳೆ ವಾಧ್ಯಗಳು ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು.

ರಥ ಸಾಗಿದ್ದ ದಾರಿಯುದ್ದಕ್ಕೂ ಎರಡು ರಸ್ತೆಯ ಬದಿಯಲ್ಲಿ ನೆರೆದಿದ್ದ ಜನರು ಮೆರವಣಿಗೆ ಸೊಬಗು ಕಣ್ತುಂಬಿಕೊಂಡರು. ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಪೋಷಕರು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿವೆ ಎನ್ನುವುದು ಬೇಸರದ ಸಂಗತಿಯಾಗಿದೆ. ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗದ ಪರಿಣಾಮ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತಿಲ್ಲ. ಉದ್ಯೋಗ ಅರಸಿ ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಜನಪರ ಪರಕಾಳಜಿ ಇರುವ ಯುವಕಸಂಘಗಳು ದೀರ್ಘಕಾಲ ಕ್ರಿಯಾಶೀಲವಾಗಿರುತ್ತವೆ ಎನ್ನುವುದಕ್ಕೆ ಸಿರಿಗನ್ನಡ ಯುವಕ ಸಂಘ ಉತ್ತಮ ನಿದರ್ಶನವಾಗಿದೆ. ಜನಪರ ಕಾರ್ಯಕ್ರಮ ಮತ್ತು ಜನರ ನೋವುನಲಿವುಗಳಿಗೆ ಸ್ಪಂದಿಸುವ ಕಾರ್ಯ ಮುಂದುವರೆಯಲಿ ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ಡಿಪ್ಲೋಮಾ ಕಾಲೇಜಿಲ್ಲ. ವಿದ್ಯಾರ್ಥಿಗಳು ನಿತ್ಯ ಎರಡು ಕಿ.ಮೀ ನಡೆದು ಪಿಯುಸಿ ಮತ್ತು ಡಿಗ್ರಿ ಕಾಲೇಜಿಗೆ ಹೋಗಬೇಕಿದೆ. ಹೀಗಾಗಿ ಅವರಿಗೆ ಸಾರಿಗೆ ವ್ಯವಸ್ಥೆ ಮಾಡುವಂತೆ ಸಂಘದಿಂದ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕ ಗಣೇಶ್ ಕುರುಗೋಡಿನಲ್ಲಿ ಜಾಗದ ಕೊರತೆಯಿಂದ ಅಭಿವೃದ್ಧಿ ಕಾರ್ಯಕ್ಕೆ ಅಡಚಣೆಯಾಗಿದೆ. ದಾನಿಗಳು ಜಾಗ ನೀಡಿದರೆ ಅವರಿಗೆ ಸರ್ಕಾರದಿಂದ ಉತ್ತಮ ಬೆಲೆ ಕೊಡಿಸಲಾಗುವುದು. ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಟ್ಟೂರು ಸಂಸ್ಥಾನ ಶಾಖಾ ವಿರಕ್ತಮಠದ ನಿರಂಜನ ಪ್ರಭು ಮಹಾಸ್ವಾಮಿ ಮಾತನಾಡಿ, ನಾಡು-ನುಡಿ ವಿಷಯದಲ್ಲಿ ಸಮಸ್ಯೆ ತಲೆದೂರಿದಾಗ ಎಲ್ಲರೂ ಒಂದಾಗಿ ರಕ್ಷಣೆಗೆ ಮುಂದಾಗಬೇಕು. ಕರ್ನಾಟಕ್ಕಾಗಿ ಕತ್ತಿ ಹಿಡಿದು ಹೋರಾಟ ಮಾಡಬೇಕಿಲ್ಲ. ಮಕ್ಕಳನ್ನು ದುಶ್ಚಟದಿಂದ ದೂರಾಗಿಸಿದರೆ ಉತ್ತಮ ನಾಡು ಕಟ್ಟಿದಂತೆ ಛತ್ರಪತಿ ಶಿವಾಜಿ ಮಹಾರಾಜನಿಗೆ ಆಶ್ರಯ ನೀಡಿದ ನಾಡು ನಮ್ಮದು. ಇಲ್ಲಿನ ಹೋರಾಟ ಸಂಪತ್ತು, ಸಂಸ್ಕೃತಿ, ಆಚರ, ವಿಚಾರ ವಿಶೇಷವಾಗಿದೆ. ಜತೆಗೆ ಈ ಮಣ್ಣಿನಲ್ಲಿ ಹುಟ್ಟಿರುವ ಅನೇಕ ಸಾಧಕರು ಎಲ್ಲರ ಬದುಕಿಗೆ ಪ್ರೇರಣೆಯಾಗಿದ್ದಾರೆ. ಆದರೆ ಹೆಸರಿಗಾಗಿ ಮಾತ್ರ ರಾಜ್ಯೋತ್ಸವ ಆಗಬಾರದು ನಾಡು, ನುಡಿಯನ್ನು ನಿತ್ಯ ಆರಾಧಿಸುವಂತಾಗಬೇಕು ಎಂದರು.

ಸಂಘದ ಅಧ್ಯಕ್ಷ ಬಿ.ವೀರಭದ್ರಗೌಡ ಮಾತನಾಡಿ, ಜನಪರ ಹೋರಾಟ ರೂಪಿಸುವ ಮೂಲಕ ಸಂಘ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದೆ. ಜತೆಗೆ ಸದಾ ಧ್ವನಿ ಇಲ್ಲದವರ ಪರ ಕೆಲಸ ಮಾಡಲಾಗುವುದು ಎಂದರು.

ಸಂಘದ ಕಾರ್ಯಾಧ್ಯಕ್ಷರಾಗಿ ಕೆ.ವಿರೂಪಾಕ್ಷಿಗೌಡ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತನಾಡಿದರು.

ಸಿಪಿಐ ವಿಶ್ವನಾಥ ಹಿದೇಗೌಡರ್, ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನಾಳ್ ಚನ್ನಬಸವ, ಪುರಸಭೆ ಅಧ್ಯಕ್ಷ ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಸಂಘದ ಪದಾಧಿಕಾರಿಗಳಾದ ಕೆ.ಎಸ್.ಹಸನ್ ಬಾಷಾ, ಕೆ.ಲೋಕೇಶ, ಎಸ್.ನಾಗರಾಜ, ಎನ್.ಷಣ್ಮುಖ, ಜೆ.ರಮೇಶ್, ಬುಟ್ಟಾ ಮಲ್ಲಿಕಾರ್ಜುನ, ಚಂದ್ರು, ಎಸ್.ಕೆ. ನಾಗರಾಜ, ಕೆ.ನರಸಪ್ಪ ಯಾದವ್, ವಿ.ಎಸ್. ಚಕ್ರವರ್ತಿ ಮತ್ತು ಎಸ್.ಸಿದ್ದನಗೌಡ ಇದ್ದರು.

ಫೆಬ್ರುವರಿಯಲ್ಲಿ ಕುರುಗೋಡು ಉತ್ಸವ

ಕಳೆದ ವರ್ಷ ಕಂಪ್ಲಿ ಉತ್ಸವ ಆಯೋಜಿಸಲಾಗಿತ್ತು. ಈ ವರ್ಷ ಐತಿಹಾಸಿಕ ಮಹತ್ವ ಹೊಂದಿರುವ ಪಟ್ಟಣದಲ್ಲಿ ಕುರುಗೋಡು ಉತ್ಸವ ಆಯೋಜಿಸಲು ಸರ್ಕಾರದ ಗಮನಕ್ಕೆ ತರಲಾಗುವುದು. ಉತ್ಸವದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಭರವಸೆ ನೀಡಿದರು.

ಕುರುಗೋಡು ಪಟ್ಟಣದ ಸಿರಿಗನ್ನಡ ಯುವಕ ಸಂಘದ ಬೆಳ್ಳಿಮಹೋತ್ಸವ ಉದ್ಘಾಟಿಸಿದ ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು.