ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ನೌಕರರ ಕುಂದುಕೊರತೆ ಆಲಿಸಲು "ಸಾರಿಗೆ ಸ್ಪಂದನೆ " ಎಂಬ ಹೆಸರಿನಡಿ ಆನ್‌ಲೈನ್ ವ್ಯವಸ್ಥೆ ಮಾಡಿ ನೌಕರ ಸ್ನೇಹಿಯನ್ನಾಗಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಇದೀಗ ಅವರಲ್ಲಿ ಕರ್ತವ್ಯ ನಿಷ್ಠೆ, ದಕ್ಷತೆ ಮೂಡಿಸಲು ಎಲ್ಲ ವಿಭಾಗಗಳಲ್ಲಿ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುತ್ತಿದೆ. ಫೆ.1ರ ನಂತರ ಎಲ್ಲ ವಿಭಾಗಗಳಲ್ಲೂ ಬಯೋಮೆಟ್ರಿಕ್ ಬರಲಿದೆ. ಅದು ಕೂಡ ಕೇಂದ್ರೀಕೃತ ಬಯೋಮೆಟ್ರಿಕ್ ಅಳವಡಿಸುತ್ತಿರುವುದು ವಿಶೇಷ. ಈ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದೆ. ಸಾರಿಗೆ ಸಂಸ್ಥೆಯ ನಿಗಮಗಳ ವಿಭಾಗಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿರುವುದು ರಾಜ್ಯದಲ್ಲೇ ಇದೇ ಮೊದಲು.ಬಯೋಮೆಟ್ರಿಕ್ ಏಕೆ?
ವಾಯವ್ಯ ಸಾರಿಗೆಯಲ್ಲಿ ಈ ವರೆಗೂ ನೌಕರರ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಸಿಬ್ಬಂದಿ, ನೌಕರರ ವರ್ಗ ತಡವಾಗಿ ಬಂದರೂ ಯಾರೂ ಕೇಳುವಂತಿರಲಿಲ್ಲ. ಇದರಿಂದ ಕೆಲಸದಲ್ಲಿ ಸಾಕಷ್ಟು ವಿಳಂಬವಾಗುತ್ತಿತ್ತು. ಕೆಲ ನೌಕರರಂತೂ ಬೆಳಗ್ಗೆಯೇ ಕೆಲಸ ಅವಧಿಯಿದ್ದರೂ ಕೆಲಸಕ್ಕೆ ಹಾಜರಾಗುವುದು ಮಾತ್ರ ಮಧ್ಯಾಹ್ನದ ನಂತರವೇ ಆಗುತ್ತಿತ್ತು. ಕೆಲವರು ಕೆಲಸಕ್ಕೆ ಹಾಜರಾಗಿ ಮತ್ತೆ ಕಣ್ಮರೆಯಾಗುತ್ತಿದ್ದರು. ಇದರಿಂದಾಗಿ ಸಂಸ್ಥೆಯ ಕೆಲಸಗಳಲ್ಲಿ ಸಮಸ್ಯೆಯಾಗುತ್ತಿತ್ತು.ಹೇಗಾದರೂ ಮಾಡಿ ಆಡಳಿತದಲ್ಲಿ ಚುರುಕು ಮುಟ್ಟಿಸಬೇಕೆಂಬ ಉದ್ದೇಶದಿಂದ ಹಿರಿಯ ಅಧಿಕಾರಿಗಳೆಲ್ಲ ಸೇರಿಕೊಂಡು ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲು ಯೋಚಿಸಿದ್ದಾರೆ. ಬಯೋಮೆಟ್ರಿಕ್ ಅಳವಡಿಸಿದರೆ ಹೇಗೆ ಎಂಬ ಯೋಚನೆ ಬಂದಿದ್ದೆ ತಡ ಮಾಹಿತಿ ತಂತ್ರಜ್ಞಾನ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕೇಂದ್ರ ಕಚೇರಿಯಲ್ಲಿ ಅಕ್ಟೋಬರ್‌ನಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ವ್ಯವಸ್ಥೆಯ ನಿರ್ವಹಣೆ ಹಾಗೂ ವಿವಿಧ ರೀತಿಯ ವರದಿ ಪಡೆಯಲು ಸಂಬಂಧಪಟ್ಟವರಿಗೆ ತರಬೇತಿ ನೀಡಲಾಗಿದೆ.
ಇದರಿಂದ ಸಿಬ್ಬಂದಿ ತಡವಾಗಿ ಬರುವುದು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಎಷ್ಟೇ ಸಲ ಹೊರಹೋದರೂ, ಎಷ್ಟೇ ಸಲ ಒಳಬಂದರೂ ಬಯೋಮೆಟ್ರಿಕ್‌ನಲ್ಲಿ ನಮೂದಿಸಲೇಬೇಕಾಗುತ್ತಿದೆ. ಹೀಗಾಗಿ ವಿನಾಕಾರಣ ಕೆಲಸಕ್ಕೆ ಹಾಜರಾಗಿ ಹೊರಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ತಡವಾಗಿ ಬರುವವರ ಸಂಖ್ಯೆಯೂ ಕ್ಷೀಣಿಸಿದೆ.ಕೇಂದ್ರ ಕಚೇರಿಯಲ್ಲೇ 188 ಸಿಬ್ಬಂದಿಗಳಿದ್ದು ಅವರ ಪೈಕಿ ಪ್ರತಿದಿನ ಏನಿಲ್ಲವೆಂದರೂ 35-40 ಜನ ತಡವಾಗಿ ಬರುತ್ತಿದ್ದರಂತೆ. ಆದರೆ ಇದೀಗ ನೈಜ ಕಾರಣದಿಂದ 10-13 ಜನ ಮಾತ್ರ ತಡವಾಗಿ ಆಗಮಿಸುತ್ತಿದ್ದಾರಂತೆ. ಉಳಿದಂತೆ ಎಲ್ಲರೂ ಸಮಯಕ್ಕೆ ಸರಿಯಾಗಿಯೇ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆಡಳಿತದಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ.
ಹೀಗಾಗಿ, ನಿಗಮದ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ಚಿಕ್ಕೋಡಿ, ಉತ್ತರ ಕನ್ನಡ, ಹುಬ್ಬಳ್ಳಿ ಗ್ರಾಮಾಂತರ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಹೀಗೆ 6 ಜಿಲ್ಲೆಗಳ 9 ವಿಭಾಗಗಳಲ್ಲೂ ಬಯೋಮೆಟ್ರಿಕ್ ಅಳವಡಿಸಲು ಸಿದ್ಧತೆ ಮಾಡಿಕೊಂಡಿದೆ. ಫೆ.1ರಿಂದ ಎಲ್ಲ ವಿಭಾಗಗಳಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಬರಲಿದೆ.ಕೇಂದ್ರೀಕೃತ ಬಯೋಮೆಟ್ರಿಕ್: ಎಲ್ಲ ವಿಭಾಗಗಳಲ್ಲೂ ಬಯೋಮೆಟ್ರಿಕ್ ಅಳವಡಿಸಿದರೂ ಅದನ್ನು ಕೇಂದ್ರ ಕಚೇರಿಯಲ್ಲಿ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಕುಳಿತು ಪರಿಶೀಲನೆ ನಡೆಸಲು ಅವಕಾಶವಿದೆ. ಕೇಂದ್ರ ಕಚೇರಿ- 2, ಪ್ರಾದೇಶಿಕ ಕಾರ್ಯಾಗಾರ- 1, ಪ್ರಾದೇಶಿಕ ತರಬೇತಿ ಕೇಂದ್ರ- 1, ವಿಭಾಗಗಳಿಗೆ ಎರಡರಂತೆ ಒಟ್ಟು 9 ವಿಭಾಗಗಳಿಗೆ 18 ಸೇರಿದಂತೆ ಒಟ್ಟು 22 ಬಯೋಮೆಟ್ರಿಕ್ ಯಂತ್ರಗಳನ್ನು ಈಗಾಗಲೇ ಖರೀದಿಸಿದ್ದು, ಫೆ.1ರೊಳಗೆ ಅಳವಡಿಸಲಾಗುತ್ತಿದೆ. ಈ ಮೂಲಕ ಆಡಳಿತದಲ್ಲಿ ಇನ್ನಷ್ಟು ಚುರುಕುತನ ತರುವ ಉದ್ದೇಶ ನಿಗಮದ್ದು.
ರಾಜ್ಯದಲ್ಲೇ ಮೊದಲು: ಹಾಗೇ ನೋಡಿದರೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿಯ ಕೇಂದ್ರ ಕಚೇರಿಗಳಲ್ಲಿ ಮಾತ್ರ ಸದ್ಯ ಬಯೋಮೆಟ್ರಿಕ್ ವ್ಯವಸ್ಥೆ ಇದೆ. ಇನ್ನು ಕಲ್ಯಾಣ ಕರ್ನಾಟಕದಲ್ಲಿ ಕೇಂದ್ರ ಕಚೇರಿಯಲ್ಲೂ ಇಲ್ಲ. ಕೇಂದ್ರ ಕಚೇರಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಬಯೋಮೆಟ್ರಿಕ್ ಅಳವಡಿಸುತ್ತಿರುವುದು ರಾಜ್ಯದಲ್ಲೇ ಇದೇ ಮೊದಲು.ನೌಕರ ವರ್ಗ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಲಿ ಎಂಬ ಉದ್ದೇಶದಿಂದ ಬಯೋಮೆಟ್ರಿಕ್ ಅಳವಡಿಸಲಾಗುತ್ತಿದೆ. ಈಗಾಗಲೇ ಕೇಂದ್ರ ಕಚೇರಿಯಲ್ಲಿ ಅಳವಡಿಸಲಾಗಿದೆ. ವಿಭಾಗಗಳಲ್ಲಿ ಫೆ.1ರೊಳಗೆ ಅಳವಡಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ತಿಳಿಸಿದ್ದಾರೆ.
ವಿಭಾಗಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅಳವಡಿಸುತ್ತಿರುವುದು ಇದೇ ಮೊದಲು. ಕೇಂದ್ರ ಕಚೇರಿಯಲ್ಲಿ ಈಗಾಗಲೇ ಅಳವಡಿಸಲಾಗಿದೆ. ಇದರಿಂದ ಸಿಬ್ಬಂದಿಯಲ್ಲಿ ಶಿಸ್ತು, ಬದ್ಧತೆ ಬಂದಿದೆ. ಆಡಳಿತದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಚ್.ರಾಮನಗೌಡರ ತಿಳಿಸಿದ್ದಾರೆ.