ಕಾರ್ಖಾನೆಯಲ್ಲಿ ಒಂದೇ ಒಂದು ಪೈಸೆ ಲೋಪವಾಗಿಲ್ಲ

| Published : Sep 24 2024, 01:53 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಶ್ರೀ ಭೀಮಾಶಂಕರ ಹೆಸರಿನಲ್ಲಿ ಸ್ಥಾಪಿಸಿದ ಕಾರ್ಖಾನೆಯಲ್ಲಿ ಒಂದೇ ಒಂದು ಪೈಸೆ ಲೋಪವಾಗಿಲ್ಲ, ವಂಚನೆಯಾಗಿಲ್ಲ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಖಾನೆ ಸ್ಥಾಪಿಸಲಾಗಿದೆ. ಇಲ್ಲಿ ಯಾವುದೇ ಮೋಸ, ವಂಚನೆ ಆಗಿಲ್ಲ. ರೈತರ ಜತೆ ಚೆಲ್ಲಾಟ ಆಡಿದರೆ ಭಗವಂತನೇ ನೋಡಿಕೊಳ್ಳಲಿ ಎಂದು ಶಾಸಕ, ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶ್ರೀ ಭೀಮಾಶಂಕರ ಹೆಸರಿನಲ್ಲಿ ಸ್ಥಾಪಿಸಿದ ಕಾರ್ಖಾನೆಯಲ್ಲಿ ಒಂದೇ ಒಂದು ಪೈಸೆ ಲೋಪವಾಗಿಲ್ಲ, ವಂಚನೆಯಾಗಿಲ್ಲ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಖಾನೆ ಸ್ಥಾಪಿಸಲಾಗಿದೆ. ಇಲ್ಲಿ ಯಾವುದೇ ಮೋಸ, ವಂಚನೆ ಆಗಿಲ್ಲ. ರೈತರ ಜತೆ ಚೆಲ್ಲಾಟ ಆಡಿದರೆ ಭಗವಂತನೇ ನೋಡಿಕೊಳ್ಳಲಿ ಎಂದು ಶಾಸಕ, ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮರಗೂರ ಆರನೇ ವರ್ಷದ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ ಕಾರ್ಖಾನೆ ಸ್ಥಾಪಿಸಲಾಗಿದೆ ವಿನಃ ಲಾಭಕ್ಕಾಗಿ ಅಲ್ಲ. ಇಲ್ಲಿಯವರೆಗೂ ಸರ್ಕಾರ ಕಬ್ಬಿನ ಬೆಲೆ ಘೋಷಣೆ ಮಾಡಿದ್ದಕ್ಕಿಂತ ಹೆಚ್ಚುವರಿಯಾಗಿ ಕಬ್ಬಿನ ಬೆಲೆಯನ್ನು ರೈತರಿಗೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಖಾನೆ 16,596 ಜನ ರೈತರ ಆಸ್ತಿಯಾಗಿದೆ. ಇಲ್ಲಿ ಯಾರೂ ರಾಜಕಾರಣ ಮಾಡಬೇಡಿ. ರಾಜಕಾರಣ ಏನಿದ್ದರೂ ಕಾರ್ಖಾನೆ ದ್ವಾರ ಬಾಗಿಲು ಹೊರಗೆ ನಡೆಯಲಿ. ನನ್ನ ಮೇಲೆ ದ್ವೇಷ, ಅಸೂಯೆ ಇದ್ದರೆ ಚುನಾವಣೆ ಬಂದಾಗ ಜನರು ತೀರ್ಮಾನಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಕಳೆದ 40 ವರ್ಷಗಳಿಂದ ಶಾಪಗ್ರಸ್ತವಾಗಿದ್ದ ಈ ಕಾರ್ಖಾನೆಯನ್ನು 2013ರಲ್ಲಿ ಶಾಸಕನಾದ ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕ ಸಚಿವರ ಸಹಕಾರದಿಂದ ಪುನರುಜ್ಜೀವನ ಕಂಡಿದೆ. ರಾಜ್ಯದ ಇತಿಹಾಸದಲ್ಲೇ ಸಹಕಾರ ರಂಗಕ್ಕೆ ಅತೀ ಹೆಚ್ಚು ಹಣಕಾಸಿನ ನೆರವನ್ನು ನೀಡಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಎಂದು ಹೇಳಿದ ಅವರು, ರೈತ ದೇಶದ ಬೆನ್ನೆಲುಬು. ಇವರ ಬದುಕಿಗೆ ಆಧಾರವಾಗಿ ಈ ಕಾರ್ಖಾನೆ ಕಟ್ಟಬೇಕು ಎಂಬ ನಾಯಕರು ಹಾಗೂ ನಮ್ಮ ಅನೇಕ ಪೂರ್ವಜರ ಕನಸಾಗಿತ್ತು. ಹೀಗಾಗಿ ಈಗ 6ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಇಂದು ಕಾರ್ಖಾನೆ ರೈತರ ಆಸ್ತಿಯಾಗಿ ಆಕಾಶದೇತ್ತರಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರು.

ಈ ಭಾಗದಲ್ಲಿ ಕಬ್ಬಿನ ಇಳುವರಿ ಸರಿಯಾಗಿ ಬರುವುದಿಲ್ಲ. ಮ್ಯಾಚುರಿಟಿ ಕಬ್ಬು ಕಳಿಸದೆ ಇರುವುದು ಒಂದು ಕಾರಣ ಇರಬಹುದು. ಮಹಾರಾಷ್ಟ್ರದಲ್ಲಿನ ಕಬ್ಬು 13.1/2 ಹೆಚ್ಚುವರಿ ರಿಕವರಿ ಬರುತ್ತದೆ. ಹೀಗಾಗಿ ಅಲ್ಲಿನ ಕಬ್ಬಿಗೆ ಹೆಚ್ಚಿನ ದರ ನಿಗದಿಯಾಗುತ್ತದೆ. ಆದರೆ, ಇಲ್ಲಿ ಅಷ್ಟು ಬರುವುದಿಲ್ಲ ಎಂದರು.

ಕಾರ್ಖಾನೆ ಲಾಭದಲ್ಲಿ ಇಲ್ಲ. ರೈತರ ಕಬ್ಬಿನ ಬಿಲ್‌ ಹಾಗೂ ಬ್ಯಾಂಕಿನ ಸಾಲ ಪ್ರತಿವರ್ಷ ತುಂಬಲಾಗುತ್ತಿದೆ. ಇದರಿಂದ ಆಡಳಿತಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಸುಮಾರು 5 ಲಕ್ಷದವರೆಗೆ ಕಬ್ಬು ಕ್ರಷ್‌ ಮಾಡಿದರೆ ಮಾತ್ರ ಸರಿದೂಗಿಸಲು ಸಾಧ್ಯ ಎಂದ ಅವರು, ಕಾರ್ಖಾನೆಗೆ ರೈತರು ಹೆಚ್ಚುವರಿಯಾಗಿ ಕಬ್ಬು ಕಳಿಸಬೇಕು. ಈ ಮೂಲಕ ಈ ಕಾರ್ಖಾನೆ ನಿಮ್ಮ ಆಸ್ತಿ ಉಳಿಸಿಕೊಳ್ಳುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ರೈತರಲ್ಲಿ ಮನವಿ ಮಾಡಿದರು.

ಈ ವೇಳೆ ರೈತ ಮುಖಂಡ ಗುರುನಾಥ ಬಗಲಿ ಹಾಗೂ ನಿರ್ದೇಶಕ ಎಂ.ಆರ್ ಪಾಟೀಲ ಮಾತನಾಡಿದರು. ಸಹಕಾರಿ ಶ್ರೀಮಂತ ಇಂಡಿ ಮಾತನಾಡಿದರು. ಈ ವೇಳೆ ನಿರ್ದೇಶಕರಾದ ಎಂ.ಆರ್ ಪಾಟೀಲ, ಬಿ.ಎಂ.ಕೋರೆ, ಸಿದ್ದಣ್ಣಾ ಬಿರಾದಾರ, ಜೆಟ್ಟೆಪ್ಪ ರವಳಿ, ವಿಶ್ವನಾಥ ಬಿರಾದಾರ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ರೇವಗೊಂಡಪ್ಪಗೌಡ ಪಾಟೀಲ, ಬಸವರಾಜ ಧನಶ್ರೀ, ಲಲಿತಾ ನಡಗೇರಿ, ದುಂಡಪ್ಪ ಖೇಡ, ಸರೋಜಿನಿ ಪಾಟೀಲ, ಮ್ಯಾನೇಜಿಂಗ್ ಡೈರೆಕ್ಟರ್ ಭಾಗ್ಯಶ್ರೀ ಎಸ್.ಕೆ, ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹಾಜರಿದ್ದರು.

------------

ಕೋಟ್‌....

ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಹಿಂದಿನ ಸರ್ಕಾರ ಚಾಲನೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿಸಲು ಸಮಗ್ರ ನೀರಾವರಿಗಾಗಿ ₹3 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಬಹುತೇಕ ಪ್ರದೇಶ ನೀರಾವರಿಯಾಗಿದ್ದು, ರೈತರು ಕಬ್ಬು ಬೆಳೆದು ಮುಂದಿನ ದಿನಗಳಲ್ಲಿ ಅವರು ಆರ್ಥಿಕ ಸ್ಥಿತಿವಂತರಾಗುತ್ತಾರೆ.

-ಯಶವಂತರಾಯಗೌಡ ಪಾಟೀಲ, ಶಾಸಕ ಹಾಗೂ ಕಾರ್ಖಾನೆ ಅಧ್ಯಕ್ಷ