ಸಾರಾಂಶ
ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಕನಕಪುರ/ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಶೇಕಡ 75ಕ್ಕಿಂತ ಹೆಚ್ಚು ನಡೆದಿಯೇ ಇಲ್ಲ.
ಕ್ಷೇತ್ರದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಸ್ವೀಪ್ ಕಮಿಟಿ ಪ್ರತಿ ಚುನಾವಣೆಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳ ಹಮ್ಮಿಕೊಂಡು ಮತದಾರರಲ್ಲಿ ಅರಿವು ಮೂಡಿಸುತ್ತಲೇ ಬಂದಿದೆ. ಆದರೂ ಮತದಾನ ಪ್ರಮಾಣದಲ್ಲಿ ಮಾತ್ರ ಏರಿಕೆ ಕಾಣುತ್ತಲೇ ಇಲ್ಲ. ಈ ಬಾರಿಯೂ ಚುನಾವಣಾ ಸ್ವೀಪ್ ಕಮಿಟಿ ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯ ನಡೆದಿದೆ. ಮತದಾರ ಪ್ರಭುಗಳನ್ನು ಮತಗಟ್ಟೆಯತ್ತ ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಮುಂದುವರೆಸಿದ್ದಾರೆ.ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಅಸ್ತಿತ್ವಕ್ಕೆ ಬರುವ ಮುನ್ನ ಕನಕಪುರ ಲೋಕಸಭಾ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತು. ಈ ಕ್ಷೇತ್ರ 14 ಸಾರ್ವತ್ರಿಕ ಚುನಾವಣೆ ಹಾಗೂ 02 ಉಪಚುನಾವಣೆಗಳನ್ನು ಕಂಡಿದೆ. ಅತಿ ಹೆಚ್ಚಿನ ಮತದಾನ 1984ರಲ್ಲಿ ಶೇಕಡ 72.16 ಮತ್ತು ಅತಿ ಕಡಿಮೆ ಮತದಾನ 2004ರಲ್ಲಿ ಶೇಕಡ 57.61ರಷ್ಟು ಆಗಿತ್ತು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಹಿಂದಿನ ಬಾರಿಗೆ ಹೋಲಿಕೆ ಮಾಡಿದಲ್ಲಿ 2019ರಲ್ಲಿ ಶೇಕಡ 1.55ರಷ್ಟು ಕಡಿಮೆ ಮತದಾನ ನಡೆದಿದೆ. 2014ರಲ್ಲಿ ಶೇ.66.45 ರಷ್ಟು ಮತದಾನಗೊಂಡಿದ್ದರೆ, 2019ರಲ್ಲಿ ಶೇ.64.90ಕ್ಕೆ ಕುಸಿತಗೊಂಡಿದೆ. ಒಟ್ಟು ಶೇ.1.55ರಷ್ಟು ಕಡಿಮೆ ಮತದಾನ ಆಗಿದೆ.ಕಳೆದ ಚುನಾವಣೆಯಲ್ಲಿ 12,87,524 ಪುರುಷರು , 12,09,276 ಮಹಿಳಾ ಮತದಾರರು, 341 ಇತರೆ ಹಾಗೂ 317 ಸೇವಾ ಮತದಾರರು ಸೇರಿದಂತೆ ಒಟ್ಟು 24,97,458 ಮತದಾರರಿದ್ದರು. ಆದರೆ, ಇದರಲ್ಲಿ 831019 ಪುರುಷರು , 789565 ಮಹಿಳಾ ಮತದಾರರು, 39 ಇತರೆ ಮತದಾರರು ಸೇರಿ ಒಟ್ಟು 16,20,623 ಮತಗಳು ಚಲಾವಣೆಗೊಂಡಿದ್ದವು.
3 ಬಾರಿ ಶೇ.65 ರಿಂದ 75ರಷ್ಟು ಮತದಾನ :1967ರಲ್ಲಿ ನಡೆದ ಚೊಚ್ಚಲ ಚುನಾವಣೆಯಲ್ಲಿ ಕನಕಪುರ ಸಂಸತ್ ಕ್ಷೇತ್ರದಲ್ಲಿ 4,44,344 ಒಟ್ಟು ಮತದಾರರ ಪೈಕಿ 2,81,621 ಮತದಾರರು (ಶೇ.63.38) ತಮ್ಮ ಹಕ್ಕು ಚಲಾಯಿಸಿದ್ದರು. ಕನಕಪುರ ಕ್ಷೇತ್ರದಲ್ಲಿ 1984ರ ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತದಾನ ನಡೆದಿತ್ತು. 9,03,602 ಮತದಾರರ ಪೈಕಿ 6,52,044 ಮತದಾರರು (ಶೇ.72.15) ಮತ ಚಲಾಯಿಸಿದ್ದರು.
ಅತಿ ಕಡಿಮೆ ಮತದಾನ 2004ರ ಚುನಾವಣೆಯಲ್ಲಿ ನಡೆದಿತ್ತು. 26,95,484 ಮತದಾರರಲ್ಲಿ 15,52,416 ಮತದಾರರು (ಶೇ.57.61) ಹಕ್ಕು ಚಲಾವಣೆ ಮಾಡಿದ್ದರು. 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. 2009ರ ಸಂಸತ್ ಚುನಾವಣೆಯಲ್ಲಿ ಶೇ.57.92 ಹಾಗೂ 2014ರ ಚುನಾವಣೆಯಲ್ಲಿ ಶೇ.66.45ರಷ್ಟು ಮತದಾನ ನಡೆದಿತ್ತು.ಈವರೆಗೆ ಕ್ಷೇತ್ರದಲ್ಲಿ ಶೇಕಡ 55 ರಿಂದ 60ರಷ್ಟು ಮತದಾನ 3 ಬಾರಿ ನಡೆದಿದ್ದರೆ, ಶೇಕಡ 60 ರಿಂದ 65ರಷ್ಟು ಮತದಾನ 7 ಬಾರಿ ಹಾಗೂ ಶೇಕಡ 65 ರಿಂದ 75ರಷ್ಟು ಮತದಾನ 3 ಬಾರಿ ನಡೆದಿದೆ. 8ನೇ ಬಾರಿಗೆ 2019ರಲ್ಲಿ ಶೇಕಡ 64.90ರಷ್ಟು ಮತದಾನ ಆಗಿದೆ.
ಮತದಾನದ ದಿನ ಗೊತ್ತಾಗಲಿದೆ:18ನೇ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ.100ರಷ್ಟು ಮತದಾನ ಸಾಧ್ಯವಾಗದಿದ್ದರು ಶೇ 80ರಷ್ಟನ್ನು ಸಾಧಿಸುವ ಗುರಿಯನ್ನು ಚುನಾವಣಾ ಸ್ವೀಪ್ ಕಮಿಟಿ ಹೊಂದಿದೆ. ಚುನಾವಣೆಯಲ್ಲಿ ಮುಕ್ತವಾಗಿ ಮತ ಚಲಾಯಿಸುವ ಹಾಗೂ ಮತದಾನ ಮಾಡಿಸುವ ಬಗ್ಗೆ ''''''''ಪ್ರಮಾಣ'''''''' ಮಾಡಿಸಿಕೊಳ್ಳಲಾಗುತ್ತಿದೆ.
ಅಲ್ಲದೆ, ರಂಗೋಲಿ ಸ್ಪರ್ಧೆ, ಮಹಿಳಾ ಜಾಥಾ ,ಪಂಜಿನ ಮೆರವಣಿಗೆ , ಬೈಕ್ ಜಾಥಾ , ಮ್ಯಾರಥಾನ್ , ರಸಪ್ರಶ್ನೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಕ್ರಾಯಕ್ರಮಗಳ ಪ್ರಭಾವ ಜನರ ಮೇಲೆ ಎಷ್ಟರ ಮಟ್ಟಿಗೆ ಬೀರಿದೆ ಎಂಬುದು ಮತದಾನದ ದಿನ ಗೊತ್ತಾಗಲಿದೆ.ಬಾಕ್ಸ್ .............ಆ ಚುನಾವಣೆ ಫಲಿತಾಂಶ ಏನಾಯಿತು?
ಅತಿ ಹೆಚ್ಚು ಮತದಾನ (ಶೇ.72.16) ನಡೆದಿದ್ದ 1984ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ವಿ.ಚಂದ್ರಶೇಖರ ಮೂರ್ತಿಯವರು ಪ್ರತಿಸ್ಪರ್ಧಿ ಜನತಾ ಪಕ್ಷದ ಪಿಜಿಆರ್ ಸಿಂಧ್ಯಾ ಅವರನ್ನು ಮಣಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಇನ್ನು 2004ರಲ್ಲಿ ಅತಿ ಕಡಿಮೆ ಮತದಾನ (ಶೇ.57.61)ವಾಗಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ತೇಜಸ್ವಿನಿ ರಮೇಶ್ ಎದುರು ಬಿಜೆಪಿ ಅಭ್ಯರ್ಥಿ ರಾಮಚಂದ್ರೇಗೌಡ ಪರಾಭವಗೊಂಡರೆ, ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್‌ನಿಂದ ಸ್ಪರ್ಧಿಸಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.