ಸಾರಾಂಶ
ಬ್ಯಾಡಗಿ ಪಟ್ಟಣದ ಬಿಇಎಸ್‌ಎಂ ಕಾಲೇಜಿನಲ್ಲಿ ತರಬೇತಿ ಪಡೆದ ಬಳಿಕ ತಮಿಳುನಾಡಿನ ರಾಮನಾಥಪುರಂನಲ್ಲಿ (ಪರಮಕುಡಿ) ಜ. 31ರಿಂದ ಆರಂಭವಾಗಲಿರುವ ಲಂಗಡಿ ನ್ಯಾಷನಲ್ಸ್‌ಗೆ ತೆರಳುತ್ತಿರುವ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಟಗಾರರಿಗೆ ಹಿರಿಯ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಉಮಾ ಭಜಂತ್ರಿ ಶುಭ ಕೋರಿದರು.
ಬ್ಯಾಡಗಿ: ಕ್ರೀಡೆಗಳು ಹವ್ಯಾಸಿಯಿಂದ ವೃತ್ತಿಪರವಾಗುತ್ತಿವೆ, ಸರ್ಕಾರ ಉದ್ಯೋಗದಲ್ಲಿ ಶೇ. 2 ಮೀಸಲಾತಿ ಕಲ್ಪಿಸಿದ್ದರೂ ಬೆರಳೆಣಿಕೆಯಷ್ಟು ಕ್ರೀಡಾಪಟುಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಉಮಾ ಭಜಂತ್ರಿ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಬಿಇಎಸ್‌ಎಂ ಕಾಲೇಜಿನಲ್ಲಿ ತರಬೇತಿ ಪಡೆದ ಬಳಿಕ ತಮಿಳುನಾಡಿನ ರಾಮನಾಥಪುರಂನಲ್ಲಿ (ಪರಮಕುಡಿ) ಜ. 31ರಿಂದ ಆರಂಭವಾಗಲಿರುವ ಲಂಗಡಿ ನ್ಯಾಷನಲ್ಸ್‌ಗೆ ತೆರಳುತ್ತಿರುವ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಟಗಾರರಿಗೆ ಶುಭ ಕೋರಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಕ್ರೀಡೆ ಅತ್ಯಂತ ಜನಪ್ರಿಯಗೊಳ್ಳುತ್ತಿದ್ದು, ದೇಶದ ಎರಡನೇ ಅತಿದೊಡ್ಡ ವೃತ್ತಿಪರ ಕ್ರೀಡೆಯಾಗಿ ಹೊರ ಹೊಮ್ಮುತ್ತಿದೆ. ಇನ್ನೊಂದೆಡೆ ಕಬಡ್ಡಿ ತರಬೇತುದಾರರಿಲ್ಲದೇ ಬಹುತೇಕ ಕ್ರೀಡಾಂಗಣಗಳು ಬಿಕೋ ಎನ್ನುತ್ತಿವೆ. ಕ್ರೀಡಾಪಟುಗಳ ತರಬೇತಿ ಅನುಕೂಲಕ್ಕಾಗಿ ಕಬಡ್ಡಿ ಮ್ಯಾಟ್‌ಗಳ ಕೊರತೆ ಎದ್ದು ಕಾಣುತ್ತಿದೆ. ಕ್ರೀಡಾಪಟುಗಳು ಪರವಾಗಿ ಗಟ್ಟಿ ಧ್ವನಿಯಾಗಿ ನಿಲ್ಲಲು ಯಾರೂ ಪ್ರಯತ್ನಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.ರಾಷ್ಟ್ರೀಯ ತೀರ್ಪುಗಾರ ಹಾಗೂ ಹಿರಿಯ ಕಬಡ್ಡಿ ಕ್ರೀಡಾಪಟು ಎಂ.ಆರ್. ಕೋಡಿಹಳ್ಳಿ ಮಾತನಾಡಿ, ದೇಶದ ಅಪ್ಪಟ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಪ್ರೋ ಕಬಡ್ಡಿ ಲೀಗ್ ಆವೃತ್ತಿಗಳು ಕಬಡ್ಡಿಯ ಜನಪ್ರಿಯತೆಯನ್ನು ವಿಶ್ವದ ಬಹಳಷ್ಟು ದೇಶಗಳಿಗೆ ತಲುಪಿಸಿವೆ. ಹೀಗಿರುವಾಗಿ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರ್ತಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದರು.
ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಗೌರವಾಧ್ಯಕ್ಷ ಗಂಗಣ್ಣ ಎಲಿ, ಹಿರಿಯ ರಾಷ್ಟ್ರೀಯ ಆಟಗಾರ್ತಿ ಅಕ್ಕಮ್ಮ ಮಾಳಗಿ, ಕೋಚ್ ಮಂಜುಳಾ ಭಜಂತ್ರಿ ಇದ್ದರು.