ಹೊಸತನದ ಹುಡುಕಾಟದಿಂದ ದೂರ ಉಳಿದಿಲ್ಲ; ಗೋವಿಂದವಾಡ

| Published : May 22 2025, 11:48 PM IST

ಸಾರಾಂಶ

Not far from the search for innovation

ಕಲಾವಿದನ ಕನವರಿಕೆ; ಚಿತ್ರಕಲಾವಿದ ಮಂಜುನಾಥ ಜೊತೆ ಮಾತುಕತೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಬಳ್ಳಾರಿ

ಚಿತ್ರಕಲೆ ಬದುಕು ನೀಡಿದೆ. ಒಂದಷ್ಟು ಹೆಸರು ನೀಡಿದೆ. ಹಾಗಂತ ನಾನು ಹೊಸತನದ ಹುಡುಕಾಟದಿಂದ ದೂರ ಉಳಿದಿಲ್ಲ ಎಂದು ಚಿತ್ರಕಲಾವಿದ, ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಮಂಜುನಾಥ ಗೋವಿಂದವಾಡ ತಿಳಿಸಿದರು.

ಇಲ್ಲಿನ ಸ್ನೇಹಸಂಪುಟ ಸಭಾಂಗಣದಲ್ಲಿ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಹಮ್ಮಿಕೊಂಡಿದ್ದ ಮಂಜುನಾಥ ಗೋವಿಂದವಾಡ ಅವರೊಂದಿಗೆ ಮಾತುಕತೆಯ "ಕಲಾವಿದನ ಕನವರಿಕೆ " ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿತ್ರಕಲಾ ಬದುಕಿಗೆ ಬರಲು ನನ್ನ ತಾತ ಜಾಲಿಬೆಂಚೆ ದೊಡ್ಡಬಸವಾರ್ಯ ಗವಾಯಿಗಳೇ ಕಾರಣ. ಅವರ ಪ್ರೇರಣೆಯೇ ನನ್ನನ್ನು ಈವರೆಗೆ ತಂದು ನಿಲ್ಲಿಸಿದೆ. ನನ್ನ ತಾತ ದೊಡ್ಡಬಸವಾರ್ಯ ರಾಜ್ಯಮಟ್ಟದ ದೊಡ್ಡ ಕಲಾವಿದರಾಗಿದ್ದರು. ಅವರ ಆಶ್ರಯದಲ್ಲಿಯೇ ಬೆಳೆದ ನನಗೆ ಸಂಗೀತ ಆಸಕ್ತಿಯ ಜೊತೆಗೆ ಚಿತ್ರಕಲೆಯ ನಂಟು ಬೆಳೆಯಿತು. ಹವ್ಯಾಸಕ್ಕಾಗಿ ಶುರುಗೊಳಿಸಿದ ಚಿತ್ರಕಲೆ, ಮುಂದೊಂದು ದಿನ ಇದೇ ಬದುಕಿಗೆ ಆಸರೆಯಾಗಿ ನಿಲ್ಲುತ್ತದೆ ಎಂದು ಭಾವಿಸಿರಲಿಲ್ಲ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿದ್ದ ಚೋರನೂರು ಕೊಟ್ರಪ್ಪ ನನ್ನನ್ನು ಮೊದಲು ಗುರುತಿಸಿದವರು. ಕಾರ್ಯಕ್ರಮಗಳ ವೇದಿಕೆ ನಿರ್ಮಿಸಲು ಅವಕಾಶ ಮಾಡಿಕೊಟ್ಟರು. ಕೊಟ್ರಪ್ಪನವರು ಸೇರಿದಂತೆ ಅನೇಕರು ಸಹಕಾರ ನೀಡಿದ ಪರಿಣಾಮವಾಗಿಯೇ ಹಂಪಿ ಉತ್ಸವದಲ್ಲಿ 10 ವೇದಿಕೆಯನ್ನು ನಿರ್ಮಿಸಲು ಸಾಧ್ಯವಾಯಿತು. ಚಿತ್ರಕಲೆಯ ಅನೇಕ ಪ್ರಕಾರಗಳನ್ನು ಮೈಗೂಡಿಸಿಕೊಂಡು ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಲಾವಿದರಿಗೆ ಕಷ್ಟಗಳು ಬರುವುದು ಸಹಜ. ಎಲ್ಲವನ್ನು ನುಂಗಿಕೊಂಡೇ ಹೋಗಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರಿತು, ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಚಿಂತಕ ಕಲ್ಲುಕಂಬ ಪಂಪಾಪತಿ ಮಾತನಾಡಿ, ಕಲಾವಿದ ಮಂಜುನಾಥ ಗೋವಿಂದವಾಡ ಬಳ್ಳಾರಿ ಜಿಲ್ಲೆಯ ಆಸ್ತಿಯಿದ್ದಂತೆ. ಇಂತಹ ಕಲಾವಿದರನ್ನು ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿ. ಒಳ್ಳೆಯದನ್ನು ಜನರಿಗೆ ತಿಳಿಸಬೇಕು. ನಮ್ಮ ಪರಿಸರದಲ್ಲಾಗುವ ಒಳಿತು ಕಾರ್ಯಗಳನ್ನು ಜನಸಮುದಾಯಕ್ಕೆ ಮುಟ್ಟಿಸಬೇಕು ಎಂದು ಹೇಳಿದರು.

ಎಂ.ಪಿ. ಪ್ರಕಾಶ್ ಅವರು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಬಳ್ಳಾರಿ ಜಿಲ್ಲೆ ಸೇರಿದಂತೆ ನಾಡಿನ ಅನೇಕ ಕಲಾವಿದರನ್ನು ತಾವೇ ಗುರುತಿಸಿ ರಾಜ್ಯೋತ್ಸವದಂತಹ ಪ್ರಶಸ್ತಿ ನೀಡಿ ಗೌರವಿಸುವ ದೊಡ್ಡ ಪರಿಪಾಠ ಮೈಗೂಡಿಸಿಕೊಂಡಿದ್ದರು. ಬಳ್ಳಾರಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರನಂತಿದ್ದ ಪ್ರಕಾಶ್ ಅವರಿಂದಾಗಿಯೇ ಬಳ್ಳಾರಿ ನಗರದಲ್ಲಿ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣ ಸಾಧ್ಯವಾಯಿತು ಎಂದು ಸ್ಮರಿಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ ಅವರು ಕಲಾವಿದ ಮಂಜುನಾಥ ಗೋವಿಂದವಾಡ ಅವರ ಚಿತ್ರಕಲೆಯ ಕುರಿತು ಪ್ರಶಂಸಿದರಲ್ಲದೆ, ಗೋವಿಂದವಾಡ ಅವರು ವೇದಿಕೆಯನ್ನು ನಿರ್ಮಾಣ ಶುರುಗೊಳಿಸಿದ ಬಳಿಕ ಪ್ರತಿಯೊಂದು ಕಾರ್ಯಕ್ರಮವೂ ಸಹ ರಾಜ್ಯಮಟ್ಟದ ಕಾರ್ಯಕ್ರಮಗಳಂತೆ ಅದ್ಧೂರಿಗೊಂಡವು.

ಕಲಾವಿದ ಗೋವಿಂದವಾಡ ಕಮರ್ಷಿಯಲ್ ಆಗಿ ಬದಲಾಗಬೇಕು. ಕಲಾವಿದ ಕಮರ್ಷಿಯಲ್ ಆದರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಕಲೆಯಲ್ಲಿ ವ್ಯವಹಾರಿಕತೆಯನ್ನು ಕಂಡುಕೊಳ್ಳದೆ ಅನೇಕ ಕಲಾವಿದರು ತೀವ್ರ ಸಂಕಷ್ಟ ಎದುರಿಸುತ್ತಿರುವುದನ್ನು ನಾವು ಸಮಾಜದಲ್ಲಿ ಕಾಣುತ್ತಿದ್ದೇವೆ. ಕಲಾವಿದ ಬದುಕು ಉತ್ತಮವಾಗಿರಬೇಕು ಎಂದಾದರೆ ವೃತ್ತಿಯ ನೈಪುಣ್ಯತೆಯ ಜೊತೆಗೆ ವ್ಯವಹಾರಿಕನಾಗಿ ಬದಲಾಗಬೇಕು ಎಂದು ಸಲಹೆ ನೀಡಿದರು.

ಅನ್ನಪೂರ್ಣ ಪ್ರಕಾಶನದ ಮುಖ್ಯಸ್ಥ ಸಿರಿಗೇರಿ ಎರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ತೃಪ್ತಿಶ್ರೀ ಕಾರ್ಯಕ್ರಮ ನಿರ್ವಹಿಸಿದರು. ರೈತ ಹೋರಾಟಗಾರ ಪುರುಷೋತ್ತಮಗೌಡ, ಅನಂತಪುರ ಕನ್ನಡ ಶಿಕ್ಷಕರ ಸಂಘದ ಗಿರಿಜಾಪತಿ, ಅಮಾತಿ ಬಸವರಾಜ್, ಬಂಡ್ರಾಳು ಮೃತ್ಯುಂಜಯಸ್ವಾಮಿ, ಬಾದಾಮಿ ಶಿವಲಿಂಗನಾಯಕ, ಶ್ರೀಶೈಲ, ಪ್ರಕಾಶಕ ಸಿ.ಮಂಜುನಾಥ ಸೇರಿದಂತೆ ನಗರದ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.