ಕನ್ನಡಪ್ರಭ ವಾರ್ತೆ ತುಮಕೂರು
ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್ ನಲ್ಲಿರುವ ಎಚ್ಎಎಲ್‌ಗೆ ಹೆಚ್ಚುವರಿ ಭೂಮಿಗಾಗಿ ರೈತರ ಫಲವತ್ತಾದ ಭೂಮಿ ಬದಲು, ಲಭ್ಯವಿರುವ ಸಾಮಾಜಿಕ ಅರಣ್ಯ, ಹುಲ್ಲುಬಂದಿ, ಗೋಮಾಳ ಜಮೀನು ಬಳಕೆ ಮಾಡುವಂತೆ ಹಾಲಪ್ಪ ಪ್ರತಿಷ್ಠಾನದ ನೇತೃತ್ವದಲ್ಲಿ ಮುರುಳೀಧರ ಹಾಲಪ್ಪ ಹಾಗೂ ತುಮುಲ್ ನಿರ್ದೇಶಕ ಭಾರತಿ ಶ್ರೀನಿವಾಸ್ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ನೂರಾರು ರೈತರೊಂದಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿದರು.ಕಳೆದ ಹತ್ತು ವರ್ಷಗಳ ಹಿಂದೆ ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್ ಬಳಿ 660 ಎಕರೆ ಪ್ರದೇಶದಲ್ಲಿ ಎಚ್.ಎ.ಎಲ್ ಹೆಲಿಕಾಪ್ಟರ್ ನಿರ್ಮಾಣ ಘಟಕ ಆರಂಭಗೊಂಡಿದೆ. ಇದರ ವಿಸ್ತರಣಾ ಘಟಕಕ್ಕೆ ಸುಮಾರು 400 ಎಕರೆಗೂ ಹೆಚ್ಚು ಜಾಗಬೇಕು ಎಂದು ಸರ್ಕಾರಕ್ಕೆ ಎಚ್.ಎ.ಎಲ್ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೆ.ಐ.ಎ.ಡಿ.ಬಿ. ಅಧಿಕಾರಿಗಳು ಘಟಕದ ಸುತ್ತಮುತ್ತಲ ಸುಮಾರು 457 ಎಕರೆ ಜಾಗ ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಇದರಲ್ಲಿ ರೈತರ ಸುಮಾರು 146 ಎಕರೆ ಫಲವತ್ತಾದ ಭೂಮಿಯೂ ಸೇರಿದೆ. ಭೂಮಿ ನೀಡಲು ನಿರಾಕರಿಸಿದ ರೈತರ ಮನವಿಗೆ ಸ್ಪಂದಿಸಿ ಶಾಸಕರು, ರೈತರ ಜಮೀನು ವಶ ಕೈಬಿಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ತಂದು,ಅಧಿಕಾರಿಗಳಿಗೆ ಲಿಖಿತ ಆದೇಶ ಮಾಡಿಸುವ ಕೆಲಸ ಮಾಡಿದ್ದರು.ಈ ಎಲ್ಲಾ ಘಟನೆ ಹಿನ್ನೆಲೆ ಕೆ.ಐ.ಎ.ಡಿ.ಬಿ ಅಧಿಕಾರಿಗಳು ರೈತರು ಹಾಗೂ ರೈತ ಮುಖಂಡರೊಂದಿಗೆ ರ್ಚೆ ನಡೆಸಲು ಆಹ್ವಾನ ನೀಡಿದ್ದರು. ಈ ವೇಳೆ ರೈತರ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಎಚ್.ಎ.ಎಲ್ ನೀಡಿದ ಭರವಸೆಯಂತೆ ರೈತರ ಮಕ್ಕಳಿಗೆ ಕಾಯಂ ಉದ್ಯೋಗ ನೀಡಿಲ್ಲ. ಗುತ್ತಿಗೆ ಆಧಾರದಲ್ಲಿ ಡಿ ದರ್ಜೆ ನೌಕರಿ ನೀಡಿದೆ. ಹಾಗಾಗಿ ರೈತರು ವಿಸ್ತರಣಾ ಘಟಕಕ್ಕೆ ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅದಲ್ಲದೆ ಎಚ್.ಎ.ಎಲ್ ಘಟಕಕ್ಕೆ ಹೊಂದಿಕೊಂಡಂತೆಯೇ ೨೦೦೦ ಎಕರೆ ಸಾಮಾಜಿಕ ಅರಣ್ಯ ಭೂಮಿ ಇದೆ. ಅದನ್ನು ಬಳಕೆ ಮಾಡಿಕೊಳ್ಳಬಹುದು ಎಂದರು.
ತುಮುಲ್ ನಿರ್ದೇಶಕರಾದ ಭಾರತಿ ಶ್ರೀನಿವಾಸ್ ಮಾತನಾಡಿ, ನಾವು ಸದಾ ಕಾಲ ರೈತರ ಪರವಾಗಿ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು. ಮುಖಂಡರಾದ ಗೋವಿಂದೇಗೌಡ, ರೈತ ಸಂಘದ ರಾಚಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.--------------------------
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.