- ಮಾಜಿ ಸಚಿವರ ಬ್ಲ್ಯಾಕ್ ಮೇಲ್ ಹೇಳಿಕೆಗಳಿಗೆ ಕಡಿವಾಣಕ್ಕೆ ಶಾಂತರಾಜ ಪಾಟೀಲ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆವಿಧಾನಸಭೆ 2028ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ತಾನೇ, ತನಗೆ ಟಿಕೆಟ್ ಸಿಗುತ್ತೆಂದು ಎಂ.ಪಿ. ರೇಣುಕಾಚಾರ್ಯ ಹೇಳಿರುವುದು ಹಾಸ್ಯಾಸ್ಪದವಾಗಿದೆ. ರೈತ ಯಾವ ರೀತಿ ಭೂಮಿ ಹದಗೊಳಿಸುತ್ತಾನೋ ಅದೇ ರೀತಿ ರೇಣುಕಾಚಾರ್ಯ ಮಾತ್ರವಲ್ಲ, ನಮ್ಮಂತಹ ಹಲವಾರು ಜನ ಪಕ್ಷವನ್ನು ಹದಗೊಳಿಸಿದ್ದೇವೆ. ನಾವೂ ಆಕಾಂಕ್ಷಿಗಳಿದ್ದೇವೆ ಎಂದು ಪಕ್ಷದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊನ್ನಾಳಿ ಹಿರಿಯ ಮುಖಂಡ ಶಾಂತರಾಜ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಗೆ ತಾವೇ ಅಭ್ಯರ್ಥಿಯೆಂದು ರೇಣುಕಾಚಾರ್ಯ ಹೇಳಿಕೊಂಡು ಸುತ್ತಾಡುತ್ತಿರುವುದು ಶಿಸ್ತಿನ ಪಕ್ಷ ಬಿಜೆಪಿಗೆ ಶೋಭೆ ತರುವುದಿಲ್ಲ. ಕ್ಷೇತ್ರಕ್ಕೆ ರೇಣುಕಾಚಾರ್ಯ ಅವರಿಗಿಂತ ಪಕ್ಷದಲ್ಲಿ ಹಿರಿಯರಾದ ಶಾಂತರಾಜ ಪಾಟೀಲ, ಎ.ಬಿ. ಹನುಮಂತಪ್ಪ ಅರಕೆರೆ, ಯಕ್ಕನಹಳ್ಳಿ ಜಗದೀಶ, ಕೆ.ವಿ.ಚನ್ನಪ್ಪ, ಎಂ.ಆರ್.ಮಹೇಶ ಸೇರಿದಂತೆ ಅನೇಕರು ಆಕಾಂಕ್ಷಿಗಳಿದ್ದೇವೆ ಎಂದರು.ಹೊನ್ನಾಳಿಗೆ ಯಾರೂ ಬರುವಂತಿಲ್ಲ, ನೋಡಿಕೊಳ್ಳುತ್ತೇನೆಂದೆಲ್ಲಾ ರೇಣುಕಾಚಾರ್ಯ ಹೇಳಿರುವುದು ಸರಿಯಲ್ಲ. ಹೀಗೆ ನೋಡಿಕೊಳ್ಳುತ್ತೇನೆ ಎಂದಿದ್ದು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗಾ? ಹೀಗೆ ಹೇಳಿಕೆ ನೀಡದಂತೆ ವರಿಷ್ಠರು ಕಿವಿಮಾತು ಹೇಳಲಿ. ನಮ್ಮದು ಲೀಡರ್ ಬೇಸ್ ಪಾರ್ಟಿ ಅಲ್ಲ, ಕೇಡರ್ ಬೇಸ್ ಪಾರ್ಟಿ. ನಾವೂ ಚುನಾವಣೆಗೆ ಸ್ಪರ್ಧಿಸಲು ಸರ್ವಶಕ್ತರಾಗಿದ್ದೇವೆ. ನಮ್ಮ ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ. ಇಂತಹ ಮಾತು ರೇಣುಕಾಚಾರ್ಯ ಅವರಿಂದ ಬರಲಿ. ಅದನ್ನು ಬಿಟ್ಟು ಯಾರೂ ಬರುವಂದಿಲ್ಲ, ನೋಡಿಕೊಳ್ಳುತ್ತೇನೆಂದೆಲ್ಲಾ ಹೇಳಿಕೆ ನೀಡಿರುವುದನ್ನು ತಕ್ಷಣ ಹಿಂಪಡೆಯಲಿ ಎಂದು ತಿಳಿಸಿದರು.
ಕೇವಲ ಒಬ್ಬ ವ್ಯಕ್ತಿಯಿಂದ ಪಕ್ಷವಲ್ಲ, ವ್ಯಕ್ತಿಯೊಬ್ಬರೇ ಪಕ್ಷ ಕಟ್ಟಲು ಸಾಧ್ಯವಿಲ್ಲ. ಆದರೆ, ತಾನೇ ಪಕ್ಷ ಕಟ್ಟಿದವರಂತೆ ಹೇಳಿಕೆಯನ್ನು ರೇಣುಕಾಚಾರ್ಯ ನೀಡುತ್ತಿದ್ದಾರೆ. ಹೊನ್ನಾಳಿ ಬಿಜೆಪಿ ಬಲಿಷ್ಠವಾಗಿದೆ ಎಂಬ ಹೇಳಿಕೆ ರೇಣುಕಾಚಾರ್ಯ ನೀಡಿದ್ದಾರೆ. ಆದರೆ, ಹೊನ್ನಾಳಿ ಬಿಜೆಪಿ ಸಹ ಮನೆಯೊಂದು ಮೂರು ಬಾಗಿಲು ಎಂಬಂತಿದೆ. ಸಂಘದ ಹಿನ್ನೆಲೆಯ ಅನೇಕ ಹಿರಿಯರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಯೋಗಾಯೋಗದಿಂದ 5 ಸಲ ಸ್ಪರ್ಧಿಸಿದ ರೇಣುಕಾಚಾರ್ಯ ಮೂರು ಸಲ ಗೆದ್ದು, ಒಮ್ಮೆ ಸಚಿವರಾಗಿ, ಮತ್ತೊಂದು ಸಲ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದವರು ಎಂದು ಅವರು ಹೇಳಿದರು.
ಹೊನ್ನಾಳಿ ಬಿಜೆಪಿ ಹೇಗೆ ಬಲಿಷ್ಟವಾಗಿದೆ ಎಂಬುದು ಕ್ಷೇತ್ರದ ಕಾರ್ಯಕರ್ತರಿಗೆ ಗೊತ್ತಿರುವ ಸಂಗತಿ. ಪಕ್ಷ ಬಯಸಿದರೆ ನಾವೂ ಆಕಾಂಕ್ಷಿಗಳ ಪೈಕಿ ಯಾರಾದರೂ ಸ್ಪರ್ಧಿಸಲು ಸಿದ್ಧರಿದ್ದೇವೆ. ಇದೆಲ್ಲಾ ಗೊತ್ತಿದ್ದರೂ ರೇಣುಕಾಚಾರ್ಯ ತಾನೊಬ್ಬನೇ ಆಕಾಂಕ್ಷಿ ಎಂಬ ಹೇಳಿಕೆ ನೀಡಿದ್ದನ್ನು ತಕ್ಷಣ ಹಿಂಪಡೆಯಬೇಕು. ಯಾವುದೇ ಒಂದು ಪಕ್ಷ ವ್ಯಕ್ತಿಯಿಂದಲ್ಲ, ಮುಖಂಡರು, ಕಾರ್ಯಕರ್ತರಿಂದ ಇರುತ್ತದೆ. ಆದರೆ, ರೇಣುಕಾಚಾರ್ಯ ಪಕ್ಷ ಸಂಘಟನೆ ತಮ್ಮಿಂದ, ಟಿಕೆಟ್ ಸಹ ತಮಗೆ ಎಂದೆಲ್ಲಾ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ ಎಂದು ತಾಕೀತು ಮಾಡಿದರು.
ನಾನು ನಾನೆಂದು ತಲೆ ಎತ್ತಿ ಬೆಳೆದ ಸಜ್ಜೆ ದವಸ ಧಾನ್ಯಗಳಿಂದ ಹೊರಗಿತ್ತು. ನಾವು ನಾವೆಂದು ತಲೆ ಬಾಗಿ ಬೆಳೆದ ಬತ್ತ ಪ್ರತಿಯೊಬ್ಬ ಮನುಕುಲದ ಉಣ್ಣುವ ಅನ್ನವಾಗಿತ್ತು. ಇದನ್ನು ರೇಣುಕಾಚಾರ್ಯ ಅರ್ಥೈಸಿಕೊಳ್ಳಬೇಕು. ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಹೊನ್ನಾಳಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಆಗಬೇಕೆಂಬುದನ್ನು ತೀರ್ಮಾನಿಸುತ್ತದೆ. ತನ್ನಂತೆಯೇ ಅನೇಕ ಆಕಾಂಕ್ಷಿಗಳು ಹೊನ್ನಾಳಿಯಲ್ಲೂ ಇದ್ದಾರೆಂದು ರೇಣುಕಾಚಾರ್ಯ ಹೇಳಿದ್ದರೆ ಘನತೆಯಾದರೂ ಹೆಚ್ಚುತ್ತಿತ್ತು. ಅದನ್ನು ಬಿಟ್ಟು ನನಗೂ ಗೊತ್ತು, ನಾನೂ ನೋಡುತ್ತೇನೆಂಬ ಬ್ಲ್ಯಾಕ್ ಮೇಲ್ ತಂತ್ರದ ಹೇಳಿಕೆ ಶೋಭೆ ತರದು ಎಂದು ಆಕ್ಷೇಪಿಸಿದರು.ಪಕ್ಷದ ಮುಖಂಡರಾದ ಎ.ಬಿ. ಹನುಮಂತಪ್ಪ ಅರಕೆರೆ, ಯಕ್ಕನಗಳ್ಳಿ ಜಗದೀಶ, ನೆಲಹೊನ್ನೆ ದೇವರಾಜ, ಮಾಸಡಿ ಸಿದ್ದೇಶ, ಯಕ್ಕನಹಳ್ಳಿ ಅವಿನಾಶ ಇತರರು ಇದ್ದರು.
- - -(ಕೋಟ್) ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಸತತ 13 ದಿನ ನಮಗೆ ವಹಿಸಿದ್ದ ವಾರ್ಡ್‌ಗಳಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪರ ಪ್ರಚಾರ, ಚುನಾವಣಾ ಕೆಲಸ ಮಾಡಿದ್ದೇವೆ. ನಮ್ಮ ಅಭ್ಯರ್ಥಿಯನ್ನು ನಾವ್ಯಾರೂ ಹೋಗಿ ಭೇಟಿ ಮಾಡಲಿಲ್ಲ. ನಮ್ಮ ಪಕ್ಷ, ನಮ್ಮ ಅಭ್ಯರ್ಥಿ ಗೆಲುವೇ ನಮ್ಮ ಗುರಿಯಾಗಿತ್ತು. ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷ ಐತಿಹಾಸಿಕ ಗೆಲುವು ಸಾಧಿಸಲಿದೆ.
- ಶಾಂತರಾಜ ಪಾಟೀಲ, ಬಿಜೆಪಿ ಮುಖಂಡ, ಹೊನ್ನಾಳಿ.- - -
-16ಕೆಡಿವಿಜಿ2, 3: ದಾವಣಗೆರೆಯಲ್ಲಿ ಗುರುವಾರ ಹೊನ್ನಾಳಿ ಬಿಜೆಪಿ ಮುಖಂಡರಾದ ಶಾಂತರಾಜ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.