ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಪೀಠಾರೋಹಣ ವಾರ್ಷಿಕೋತ್ಸವದ ಅಂಗವಾಗಿ ಶಿವಾನುಭವ ಗೋಷ್ಠಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಇಂದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುತ್ತಿದ್ದೇವೆ. ಆದರೆ, ಸಂಸ್ಕಾರ ಭರಿತ ಶಿಕ್ಷಣ ನೀಡುತ್ತಿಲ್ಲ ಎಂದು ಮೂಲೆಗದ್ದೆ ಶ್ರೀ ಸದಾಶಿವ ಶಿವಯೋಗಾಶ್ರಮದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಶ್ರೀ ಬಸವ ತತ್ವ ಪೀಠದ ಪೀಠಾಧ್ಯಕ್ಷ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಪೀಠಾರೋಹಣಕ್ಕೆ 6ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಬಸವ ಮಂದಿರದಲ್ಲಿ ಆಯೋಜಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ-ಲಕ್ಷ ಹಣ ಕೊಟ್ಟು ರೆಸಿಡೆನ್ಷಿಯಲ್ ಶಾಲೆಗಳಲ್ಲಿ ಓದಿಸಲಾಗುತ್ತದೆ. ಆದರೆ, ಸಂಸ್ಕೃತಿ, ಮಠಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಹಿಂದೆ ಶಿಕ್ಷಣ ಕಡಿಮೆ ಇತ್ತು. ಸಂಸ್ಕಾರ ಜಾಸ್ತಿ ಇತ್ತು. ನಮ್ಮ ಹಿರಿಯರು ಹೋಗುವಾಗ ನಮಗೆ ಎಷ್ಟು ಆಸ್ತಿ ಬಿಟ್ಟು ಹೋಗಿದ್ದಾರೆ ಎನ್ನುವುದಕ್ಕಿಂತ ಸಂಸ್ಕಾರ ಬಿಟ್ಟು ಹೋಗಿದ್ದಾರೆ. ಸಂಸ್ಕಾರದ ಆಸ್ತಿ ಹಿಂದೆ ದೊಡ್ಡದಾಗಿತ್ತು ಎಂದು ಹೇಳಿದರು.
ಒಟ್ಟು ಕುಟುಂಬದಲ್ಲಿ ಬೆಳೆಯುವ ಮಕ್ಕಳಿಗೆ ತಂದೆ-ತಾಯಿಗಿಂತ ಹಿರಿಯರು ಜೀವನದ ಪಾಠ ಕಲಿಸುತ್ತಿದ್ದರು. ಅದು ನಿಜವಾದ ಸಂಸ್ಕಾರ. ಕಾಲ ಬದಲಾ ದಂತೆ ಕ್ರಮೆಣ ಬದಲಾದ ವಾತಾವರಣದಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬರಲಾಯಿತು. ಸಂಸ್ಕಾರ ಎಷ್ಟಿದ್ದರೇನು ಪರವಾಗಿಲ್ಲ, ಶಿಕ್ಷಣ ಇದ್ದರೆ ಗೌರವ ಕೊಟ್ಟೇಕೊಡುತ್ತಾರೆ. ಈ ರೀತಿ ಮನಸ್ಥಿತಿಯಲ್ಲಿ ವಾತಾವರಣ ಬದಲಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೋಮಿಯೋಪತಿ ವೈದ್ಯ, ನಾಡೋಜ ಡಾ.ಬಿ.ಟಿ. ರುದ್ರೇಶ್ ಮಾತನಾಡಿ, ಯಾವುದೇ ಕಾರಣ ಇಲ್ಲದೆ ದ್ವೇಷಿಸುವವರ ಸಂಖ್ಯೆ ಜಾಸ್ತಿ ಇರುತ್ತದೆ. ವೈಯಕ್ತಿಕ ಚಾರಿತ್ರ್ಯ ಇಲ್ಲದಿದ್ದರೆ ನಿನ್ನನ್ನು ಯಾರೂ ನೋಡದೆ ಇದ್ದಾಗ ನೀನು ಹೇಗೆ ನಡೆದು ಕೊಳ್ಳುತ್ತೀಯ ಎಂಬುದು ನಡತೆಯಲ್ಲಿ ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಶ್ರೀ ಬಸವ ತತ್ವ ಪೀಠದ ಪೀಠಾಧ್ಯಕ್ಷ ಪೀಠಾರೋಹಣಕ್ಕೆ 6ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಅವರಿಗೆ ಪುಷ್ಪವೃಷ್ಟಿ ಸುರಿಸುವ ಮೂಲಕ ಅಭಿನಂದಿಸಲಾಯಿತು. ಈ ವೇಳೆ ಅಕ್ಕಿ ಆಲೂರು ಶ್ರೀ ಚೆನ್ನವೀರೇಶ್ವರ ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ ಸೇರಿದಂತೆ ಮೊದಲಾದವರಿದ್ದರು.-- ಕೋಟ್ ---
ಬಹಳಷ್ಟು ಮಂದಿ ನೈತಿಕರು ಎನ್ನುತ್ತೇವೆ. ಈ ಮಾತನ್ನು ಎದುರಿಗೆ ಇದ್ದವರು ಹೇಳಬೇಕಾಗಿಲ್ಲ. ನಮ್ಮ ಆತ್ಮಸಾಕ್ಷಿ ಹೇಳಬೇಕು. ನಿಜವಾದ ನೈತಿಕರು ಅಂದರೆ ಜಗತ್ತು ನಮ್ಮನ್ನು ನೋಡುತ್ತಿಲ್ಲ. ನಾವು ಮಾಡುತ್ತಿರುವುದು ಯಾರಿಗೂ ಕಾಣುತ್ತಿಲ್ಲ ಎನ್ನುವ ಸಂದರ್ಭವೇ ನೈತಿಕತೆ.-ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ, ಶ್ರೀ ಬಸವ ತತ್ವ ಪೀಠ, ಚಿಕ್ಕಮಗಳೂರು