ಮಂಡ್ಯ ಚುನಾವಣೆ ಬಗ್ಗೆ ಹೆಚ್ಚು ಯೋಚಿಸಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

| Published : Apr 28 2024, 01:16 AM IST

ಸಾರಾಂಶ

ಕಾಂಗ್ರೆಸ್‌ನವರು ಎಷ್ಟೇ ಅಪಪ್ರಚಾರ ಮತ್ತು ಮತದಾರರಿಗೆ ಆಮಿಷ ನೀಡಿದರೂ ಸಹ ಅದನ್ನು ಲೆಕ್ಕಿಸದೇ ಯೋಗ್ಯರಿಗೆ ಮತ ನೀಡಿದ್ದಾರೆಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎಂಬ ಭೀತಿಯಿಂದ ಗ್ಯಾರಂಟಿಗಳನ್ನು ನೀಡುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಈಗಾಗಲೇ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಮಂಡ್ಯ ಕ್ಷೇತ್ರದ ಚುನಾವಣೆ ಬಗ್ಗೆ ನಾನು ಯೋಚನೆಯೇ ಮಾಡಿಲ್ಲ. ಏಕೆಂದರೆ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಕಾರ್ಯಕರ್ತರು, ಅಭಿಮಾನಿಗಳು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇತ್ತು ಎಂದು ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಕೆ.ಎಂ.ದೊಡ್ಡಿ ಸಂತೋಷ್‌ ತಮ್ಮಣ್ಣರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯ ಕ್ಷೇತ್ರದ ಚುನಾವಣೆಯ ಬಗ್ಗೆ ಹೆಚ್ಚು ಗಮನಕೊಟ್ಟಿಲ್ಲ. ನನ್ನ ಗೆಲುವಿನ ಬಗ್ಗೆ ಕ್ಷೇತ್ರದ ಜನರೇ ತೀರ್ಮಾನಿಸುತ್ತಾರೆಂಬ ನಂಬಿಕೆ ನನ್ನಲ್ಲಿದೆ. ಹಾಗಾಗಿ ಉಳಿದ 13 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರವನ್ನು ನಾನು ಕೈಗೊಂಡಿದ್ದೆ ಎಂದರು.

ಕಾಂಗ್ರೆಸ್‌ನವರು ಎಷ್ಟೇ ಅಪಪ್ರಚಾರ ಮತ್ತು ಮತದಾರರಿಗೆ ಆಮಿಷ ನೀಡಿದರೂ ಸಹ ಅದನ್ನು ಲೆಕ್ಕಿಸದೇ ಯೋಗ್ಯರಿಗೆ ಮತ ನೀಡಿದ್ದಾರೆಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎಂಬ ಭೀತಿಯಿಂದ ಗ್ಯಾರಂಟಿಗಳನ್ನು ನೀಡುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಈಗಾಗಲೇ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ನ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ ಚುನಾವಣೆಗಿಂತಲೂ ಈ ಬಾರಿ ಉತ್ತಮ ಮತದಾನವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಜಯಗಳಿಸುತ್ತಾರೆ. ಇದರಿಂದ ಕಾಂಗ್ರೆಸ್ ನಾಯಕರು ಈಗಾಗಲೇ ಹತಾಶರಾಗಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪುತ್ರ ಸಂತೋಷ್‌ ತಮ್ಮಣ್ಣ, ಕವಿತಾ ಸಂತೋಷ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಾದನಾಯಕನಹಳ್ಳಿ ರಾಜಣ್ಣ ಸೇರಿ ಹಲವರಿದ್ದರು.