- ದುಗ್ಗಮ್ಮ ಗುಡಿಯಲ್ಲಿ ಆಭರಣ ಕಳವು । ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ದಾಖಲು - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಐದಾರು ಐಟಂ ಕಾಣೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ, ಉತ್ತರ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಆರೋಪ ಮಾಡಿರುವ ಯಶವಂತ ರಾವ್‌ಗೆ ಬೇರೆ ಕೆಲಸ ಇಲ್ಲವಾ? ಜನರು ನೋಡುವಷ್ಟು ನೋಡುತ್ತಾರೆ. ಎಲ್ಲದಕ್ಕೂ ನೀತಿ, ಧರ್ಮ ಇರುತ್ತದೆ. ಅದನ್ನು ಬಿಟ್ಟು ಹೋಗಬಾರದು ಎಂದರು.ದೇವಸ್ಥಾನದಲ್ಲಿ ಚಿನ್ನಾಭರಣಗಳನ್ನು ಪೂಜಾರಿ ಕಳ್ಳತನ ಮಾಡಿದ್ದಾನೆಂಬ ಸುದ್ದಿ ಬಂದಿತು. ಹಾಗಾಗಿ, ಟ್ರಸ್ಟ್ ನವರೆಲ್ಲರೂ ಸೇರಿ ಸಭೆ ಮಾಡಿದ್ದೆವು. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಬಳಿಕ ಗೊತ್ತಾಗುತ್ತದೆ. ಇದರಲ್ಲಿ ರಾಜಕೀಯ ತರುವುದು ಏನಿದೆ ಎಂದು ಯಶವಂತ ರಾವ್ ವಿರುದ್ಧ ಕಿಡಿಕಾರಿದರು.
ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಅಧಿಕಾರಿಗಳೂ ತನಿಖೆ ಕೈಗೊಂಡಿದ್ದಾರೆ. ದೂರನ್ನೇ ಕೊಡದಿದ್ರೆ ಪೊಲೀಸರು ಹೇಗೆ ತನಿಖೆ ಮಾಡುತ್ತಾರೆ? ದೇವಸ್ಥಾನದಲ್ಲಿ ಐದಾರು ಐಟಂಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದು, ಪೂಜಾರಿಯನ್ನೂ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಟ್ರಸ್ಟ್‌ಗೆ ಪ್ರಭಾರ ಕಾರ್ಯದರ್ಶಿ ಇದ್ದಾರೆ. ಅವರು ಹೇಳಿದರೆ ಟ್ರಸ್ಟ್‌ಗೆ ಕಾರ್ಯದರ್ಶಿ ನೇಮಕ ಮಾಡಬೇಕಾ? ಎಲ್ಲದಕ್ಕೂ ರೀತಿ, ನೀತಿ ಇರುತ್ತದೆ. ಗುಡಿಗಳನ್ನು ಉದ್ಧಾರ ಮಾಡುವುದನ್ನು ಕಲಿಯೋಣ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ದೇವಸ್ಥಾನದಲ್ಲಿ ಒಡವೆ ಕಳ್ಳತನ ಮಾಡಿದ್ದ ಪೂಜಾರಿಯನ್ನು ಕರೆಸಿ, ಕೇಳಿದ್ದೇವೆ. ಮುಂಚೆಯಿಂದಲೂ ಭಕ್ತರು ಕೊಟ್ಟ ಚಿನ್ನಾಭರಣವನ್ನು ಕರಗಿಸಿ, ಗಟ್ಟಿ ಮಾಡಿಟ್ಟಿದ್ದಾರೆ. ಪೂಜಾರಿಗಳು ಕೆಲವು ತಿಂಗಳ ಬಳಿಕ ಬದಲಾವಣೆ ಆಗುತ್ತಿರುತ್ತಾರೆ. ಪೂಜಾರಿಗಳು ಪೂಜಾರಿಕೆಯನ್ನು ಹಸ್ತಾಂತರ ಮಾಡುವಾಗ 6 ಐಟಂಗಳು ಸಿಕ್ಕಿಲ್ಲ ಅನ್ನುತ್ತಿದ್ದಾರೆ. ಹಾಗಾಗಿ, ಅವು ಯಾವುದು ಅಂತಾ ತೆಗೆದುಕೊಂಡು ಬರುವಂತೆ ಹೇಳಿದ್ದೇವೆ ಎಂದು ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
- - -(ಬಾಕ್ಸ್)
* ಸಂಪುಟದ ಬಗ್ಗೆ ಸಭೆ ಮಾಡಿ, ಬಳಿಕ ತೀರ್ಮಾನ: ಎಸ್ಸೆಸ್ಸೆಂ- ಮಂತ್ರಿ ಸ್ಥಾನ ಆಕಾಂಕ್ಷಿ ಅಂತಲ್ಲ, ಕಾಂಗ್ರೆಸ್ ಕಾರ್ಯಕರ್ತನಾಗಿ ಇರುತ್ತೇನೆ ದಾವಣಗೆರೆ: ರಾಜ್ಯ ಸಚಿವ ವಿಸ್ತರಣೆ ಬಗ್ಗೆ ಜು.28ರಂದು ಸಭೆ ಮಾಡಿದ ನಂತರ ನಿರ್ಧಾರ ಮಾಡುತ್ತಾರಂತೆ. ಸಭೆಗೆ ನಮಗೇನೂ ಕರೆದಿಲ್ಲಪ್ಪಾ ಎಂದು ದಾವಣಗೆರೆ ಉತ್ತರ ಕ್ಷೇತ್ರ ಶಾಸಕ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಬಗ್ಗೆಯೇ ಮಂಗಳವಾರ ಸಭೆ ಮಾಡಿದ ನಂತರ ನಿರ್ಧಾರ ಮಾಡುತ್ತಾರೆಂಬ ಮಾಹಿತಿ ಇದೆ. ನಮಗೇನೂ ಸಭೆಗೆ ಕರೆದಿಲ್ಲಪ್ಪಾ ಎಂದರು.ಹೈಕಮಾಂಡ್‌ನಿಂದ ಯಾರಿಗೆ ದೂರವಾಣಿ ಕರೆ ಮಾಡಿದ್ದಾರೋ ನನಗಂತೂ ಗೊತ್ತಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಪ್ರಶ್ನೆ ಇಲ್ಲ. ನಮಗೇನೂ ಆಗಲೇಬೇಕೆಂದೇನೂ ಇಲ್ಲ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ನಾನು. ಪಕ್ಷದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ನಾನು ಸಚಿವನಿದ್ದಾಗಲೇ ಪಟ್ಟಿ ಬಾಕಿ ಇತ್ತು. ಅದರ ಪ್ರಕಾರವೇ ಈಗ ವರ್ಗಾವಣೆಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.- - -
-27ಕೆಡಿವಿಜಿ3: ಎಸ್.ಎಸ್.ಮಲ್ಲಿಕಾರ್ಜುನ