ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪರಿಸರ ಪ್ರೇಮಿ ಹಾಗೂ ಸಮಾಜ ಸೇವಕ ಹನುಮೇಗೌಡ ಹಾಗೂ ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನ, ಶ್ರೀ ಲಕ್ಷ್ಮೀ ರಂಗನಾಥ ಎಜುಕೇಶನ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ತಾಲೂಕಿನ ಕೌಶಿಕ ಗ್ರಾ ಪಂ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನೆಡೆಯಿತು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಆರೋಗ್ಯದ ಮುಂದೆ ಬೇರೇನೂ ಮುಖ್ಯವಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳುವತ್ತ ಚಿತ್ತ ಹರಿಸಬೇಕಿದೆ ಎಂದರು.ಆರೋಗ್ಯ ತಪಾಸಣಾ ಶಿಬಿರಗಳು ಗ್ರಾಮೀಣ ಭಾಗದ ಜನರಿಗೆ ಹೆಚ್ಚೆಚ್ಚು ಉಪಯುಕ್ತವಾಗುತ್ತವೆ. ದೂರದ ಊರುಗಳಿಂದ ನಗರ ಭಾಗಕ್ಕೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗೀ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ನಡೆಯಬೇಕಿದೆ ಎಂದರು. ಬಹುತೇಕರು ಗಳಿಸಿದ್ದೆಲ್ಲವನ್ನು ಕೂಡಿಡುವ ಕೆಲಸಕ್ಕೆ ಮುಂದಾಗುತ್ತಾರೆ ಕೆಲವರು ಮಾತ್ರ ಸಮಾಜಮುಖಿಯಾಗಿ ಸೇವಾ ಮನೋಭಾವನೆ ಬೆಳೆಸಿಕೊಳ್ಳುತ್ತಾರೆ. ಅಂತವರು ಮಾತ್ರ ಜನರ ಮನಸ್ಸಿನಲ್ಲಿ ನೆಲೆ ನಿಲ್ಲುತ್ತಾರೆ ಎಂಬುದನ್ನು ಯಾರು ಮರೆಯಬಾರದು ಎಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವ ಹನುಮೇಗೌಡ ಹಾಗೂ ವಿವಿಧ ಸಂಘಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.
ರೋಟರಿ ಕ್ಲಬ್ ಆಫ್ ಸೆಂಟ್ರಲ್ ಅಧ್ಯಕ್ಷ ರೊ.ನಾಗೇಶ್ ಎಂ.ಡಿ ಮಾತನಾಡಿ, ರೋಟರಿ ಸದಾ ಸಮಾಜದ ಒಳಿತಿಗಾಗಿ ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿರುತ್ತದೆ. ರೋಟರಿ ಸಮಾಜದ ಒಳಿತಿಗಾಗಿ ಸಾಕಷ್ಟು ಕಾರ್ಯಗಳನ್ನು ಈವರೆಗೂ ಮಾಡಿದ್ದು, ರೋಟರಿಯ ಸೇವೆ ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು ಹಳ್ಳಿಗಳವರೆಗೂ ವ್ಯಾಪಿಸಿದೆ ಎಂದರು.ರೋಟರಿ ಎಂದರೆ ಸೇವೆ, ಸೇವೆಗಾಗಿ ರೋಟರಿ ಕುಟುಂಬ ಸದಾ ಸಿದ್ಧವಿರುತ್ತದೆ. ಪೋಲೀಯೋ ನಿರ್ಮೂಲನೆಯಿಂದ ಹಿಡಿದು ವಿವಿಧ ಕಾಲಘಟ್ಟಗಳಲ್ಲಿ ಎದುರಾಗಿರುವ ವಿಪತ್ತುಗಳ ಸಂದರ್ಭದಲ್ಲಿ ರೋಟರಿ ತನ್ನ ಸೇವೆಯನ್ನು ನೀಡುತ್ತಾ, ವಿವಿಧ ಸಂಘಸಂಸ್ಥೆಗಳಿಗೆ ಮಾದರಿಯಾಗಿ ಮುನ್ನಡೆದುಕೊಂಡು ಬಂದಿದೆ ಎಂದರು.ಪರಿಸರ ಪ್ರೇಮಿ ಹಾಗೂ ಸಮಾಜ ಸೇವಕ ಹನುಮೇಗೌಡ ಮಾತನಾಡಿ, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಕಾಂಕ್ಷೆ ಹೊಂದಿದ್ದೇನೆ. ದೂರದ ಆಂಧ್ರಪ್ರದೇಶದಲ್ಲಿ ಬೇಕರಿಗಳ ಉದ್ಯಮ ನಡೆಸುತ್ತಿರುವ ನಾನು ಹುಟ್ಟೂರಿಗೆ ನನ್ನ ಕೈಲಾದ ಸೇವೆ ಮಾಡಬೇಕೆಂಬ ಸದುದ್ದೇಶ ಹೊಂದಿ ಸುಮಾರು 500 ಗಿಡಗಳನ್ನು ನೆಟ್ಟು ಸುರಕ್ಷಿತವಾಗಿ ಬೆಳೆಸಲು ಕಬ್ಬಿಣದ ಗಾರ್ಡ್ ವ್ಯವಸ್ಥೆ, ಬೇಸಿಗೆಯಲ್ಲಿ ನೀರುಣಿಸಲು ಟ್ಯಾಂಕರ್ ವ್ಯವಸ್ಥೆ ಮಾಡಿದ್ದೇನೆ. ಜೊತೆಗೆ ಆರೋಗ್ಯ ತಪಾಸಣಾ ಶಿಬಿರದಂತಹ ಸಮಾಜ ಸೇವೆ ನನಗೆ ಧನ್ಯಾತಾಭಾವ ಮೂಡಿಸಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. 25ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಆದಿಚುಂಚನಗಿರಿ ಆಸ್ಪತ್ರೆ, ಜೀವಜ್ಯೋತಿ ಆಸ್ಪತ್ರೆ, ಅಮ್ಮ ಕಣ್ಣಿನ ಆಸ್ಪತ್ರೆ, ಪ್ರಸೂತಿ ಮತ್ತು ಸ್ತ್ರಿ ರೋಗ ತಜ್ಞ ವೈದ್ಯರ ಸಂಘದಿಂದ ತಪಾಸಣಾ ಶಿಬಿರ ನಡೆಸಲಾಯಿತು. 600ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಸನ ತಾಲೂಕು ಯೋಜನಾಧಿಕಾರಿ ಧನಂಜಯ್, ಶ್ರೀ ಲಕ್ಷ್ಮೀ ರಂಗನಾಥ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ನಾಗೇಂದ್ರ,ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಲಕ್ಷ್ಮೇಗೌಡ, ನಿವೃತ್ತ ಯೋಧರ ಸಂಘದ ಪದಾಧಿಕಾರಿಗಳು, ರೋಟರಿ ಕ್ಲಬ್ ಆಫ್ ಸೆಂಟ್ರಲ್ನ ಪದಾಧಿಕಾರಿಗಳು ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.