ಫ್ರೂಟ್ಸ್ ಮಾದರಿಯಲ್ಲಿ ಆಧಾರ ಕಾರ್ಡ, ಪಹಣಿ ಲಿಂಕ್‌ಗೆ ಸೂಚನೆ

| Published : Feb 01 2024, 02:04 AM IST

ಸಾರಾಂಶ

ಹಣ ದುರ್ಬಳಕೆ ಹಾಗೂ ಅಕ್ರಮ ಪ್ರಕರಣಗಳನ್ನು ನಿಯಂತ್ರಿಸಲು ಫ್ರೂಟ್ಸ್ ಮಾದರಿಯಲ್ಲೇ ಆಧಾರ್ ಕಾರ್ಡ್ ಮತ್ತು ಪಹಣಿ ಲಿಂಕ್ ಮಾಡುವ ಕೆಲಸ ಆರಂಭವಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಣ ದುರ್ಬಳಕೆ ಹಾಗೂ ಅಕ್ರಮ ಪ್ರಕರಣಗಳನ್ನು ನಿಯಂತ್ರಿಸಲು ಫ್ರೂಟ್ಸ್ ಮಾದರಿಯಲ್ಲೇ ಆಧಾರ್ ಕಾರ್ಡ್ ಮತ್ತು ಪಹಣಿ ಲಿಂಕ್ ಮಾಡುವ ಕೆಲಸ ಆರಂಭವಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರೈತರಿಗೆ ಬರ ಪರಿಹಾರವನ್ನು ಶೀಘ್ರ ಮತ್ತು ಪಾರದರ್ಶಕವಾಗಿ ನೀಡಲು ಫ್ರೂಟ್ಸ್ ನವೀಕರಣಕ್ಕೆ ಸೂಚಿಸಲಾಗಿತ್ತು. ಶೇ.80 ರಷ್ಟು ಗುರಿ ನೀಡಲಾಗಿತ್ತು. ಬೆಳಗಾವಿ ಜಿಲ್ಲೆ ಈ ಗುರಿಯನ್ನು ಪೂರೈಸಿರುವುದು ಸಂತಸದ ವಿಚಾರ ಎಂದರು.

ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಳೆದ ಎರಡು ತಿಂಗಳಿನಿಂದ ಆಂದೋಲನ ಮಾದರಿಯಲ್ಲಿ ಫ್ರೂಟ್ಸ್ ದತ್ತಾಂಶ ನವೀಕರಣಕ್ಕೆ ಕೆಲಸ ಮಾಡಿದ್ದೀರಿ. ಆದರೆ, ಆಧಾರ್ ಮತ್ತು ಪಹಣಿ ಲಿಂಕ್ ಗೂ ಎಲ್ಲಾ ಅಧಿಕಾರಿಗಳೂ ಇದೇ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕು‌ ಎಂದರು.

ಹಲವು ಜಿಲ್ಲೆಗಳಲ್ಲಿ ಯಾರದ್ದೋ ಭೂಮಿಗೆ ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿಗೆ ಪರಿಹಾರ ನೀಡಿರುವ, ಯಾವುದೋ ಜಿಲ್ಲೆಯ ರೈತರ ಪರಿಹಾರ ಹಣ ಮತ್ತ್ಯಾವುದೋ ಜಿಲ್ಲೆಯ ರೈತರಿಗೆ ನೀಡಿರುವ, ಹಣ ದುರುಪಯೋಗವಾಗಿರುವ ಹಲವು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಆಧಾರ್ ಮತ್ತು ಪಹಣಿ ಲಿಂಕ್ ಮಾಡುವ ಮೂಲಕ ಮಾತ್ರ ಇಂತಹ ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯ ಎಂದರು.

ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವು ಮಾಡಿಕೊಡಲಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 164 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಈವರೆಗೆ 114 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪೈಕಿ 93 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 30 ಗ್ರಾಮಗಳು ಬಾಕಿ ಉಳಿದಿದ್ದು, 20 ಗ್ರಾಮಗಳು ವಾಪಾಸ್ ಬಂದಿವೆ. ಇದಕ್ಕೆ ಕಾರಣವೇನು? ಎಂದು ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಬೆಳಗಾವಿ ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆಯಾಗಿದ್ದು, ಇಷ್ಟು ದೊಡ್ಡ ಜಿಲ್ಲೆಗೆ 164 ತುಂಬಾ ಸಣ್ಣ ಸಂಖ್ಯೆ. ಜಿಲ್ಲೆಯಲ್ಲಿ ಯಾವ ಜನವಸತಿ ಪ್ರದೇಶ ಕಂದಾಯ ಗ್ರಾಮಗಳಾಗಲು ಅರ್ಹ ಎಂಬ ಮಾಹಿತಿ ಗ್ರಾಮ ಲೆಕ್ಕಾಧಿಕಾರಿಗೆ ಇರುತ್ತದೆ. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್ ಜೊತೆಗೆ ಚರ್ಚಿಸಿ ಮತ್ತಷ್ಟು ತಾಂಡಾ, ಹಟ್ಟಿ,‌ ಗೊಲ್ಲರಹಟ್ಟಿಗಳನ್ನು ಗುರುತಿಸಿ ಪ್ರಸ್ತಾವನೆ ಕಳುಹಿಸಿ ಎಂದು ತಾಕೀತು ಮಾಡಿದರು.

ಕಂದಾಯ ಗ್ರಾಮ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಂತೆ ಜನರಿಗೆ ಹಕ್ಕು ಪತ್ರ ನೀಡುವ ಕೆಲಸವಾಗಬೇಕು. ಈ ಬಾರಿ ಡಿಜಿಟಲ್‌ ಹಕ್ಕು ಪತ್ರ ನೀಡಲು ಉದ್ದೇಶಿಸಿದ್ದು, ಹಕ್ಕುಪತ್ರದ ಜೊತೆಗೆ ಅವರಿಗೆ ನೋಂದಣಿಯೂ ಮಾಡಿಕೊಡಬೇಕು. ಫಲಾನುಭವಿಗಳು ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಬಾರದು ಎಂದು ಸೂಚಿಸಿದರು.

ಬೆಳಗಾವಿ ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿರುವ ಹಲವು ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ತಹಸೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಟ ವಕಾಲತ್ತನ್ನೂ ಸಹ ಸಲ್ಲಿಸಿಲ್ಲ. ವಕಾಲತ್ತು ಸಲ್ಲಿಸಲು ಏನ್ರೀ ಸಮಸ್ಯೆ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.

ಕಳೆದ ಜುಲೈ ತಿಂಗಳಿನಿಂದ ಸತತ ಸೂಚನೆ ನೀಡಿದ ನಂತರವೂ ಬೆಳಗಾವಿ ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಸೀಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾ‌ಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ.

ತಹಶೀಲ್ದಾರ್-ಎಸಿ ಕೋರ್ಟ್ ಕೇಸ್: ಸಚಿವರು ಗರಂ

ತಹಸೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿನ ಎಲ್ಲಾ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಕಳೆದ ಜುಲೈ ನಿಂದ‌‌‌ ಸೂಚಿಸುತ್ತಿದ್ದರೂ ಅಧಿಕ ಸಂಖ್ಯೆಯ ಪ್ರಕರಣಗಳ ಬಾಕಿ ಏಕೆ? ಎಂದು ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.

ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಬೆಳಗಾವಿಯ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನವಾಗಿದೆ ಎಂದು ವರದಿ ನೀಡಿದ್ದೀರಿ. ಇ-ಆಫೀಸನ್ನು ನಾವು ಶೋಕಿಗೆ ಜಾರಿ ಮಾಡಿಲ್ಲ. ಸರ್ಕಾರಿ ಸೇವೆ ಜನರಿಗೆ ಶೀಘ್ರವಾಗಿ ನೀಡುವ ಉದ್ದೇಶದಿಂದ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ತಹಸೀಲ್ದಾರ್‌ಗಳೂ ಇನ್ಮುಂದೆ ಇ-ಆಫೀಸ್ ಮೂಲಕವೇ ಕಡತಗಳ ವಿಲೇವಾರಿ ನಡೆಸಬೇಕು. ಭೌತಿಕ ಕಡತಗಳನ್ನು ಸ್ವೀಕರಿಸಬಾರದು. ಟಪಾಲು ವಿಭಾಗದಲ್ಲೇ ಇ-ಆಫೀಸ್ ಬಳಕೆಯಾಗಬೇಕು. ಶೇ. 80ಕ್ಕೂ ಹೆಚ್ಚು ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ನಡೆಸದ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಭೆಯಲ್ಲಿ ಶಾಸಕ ರಾಜು ಕಾಗೆ, ಕಂದಾಯ ಆಯುಕ್ತ ಪಿ.‌ಸುನೀಲ್ ಕುಮಾರ್, ಭೂಮಾಪನ ಹಾಗೂ ಭೂ ದಾಖಲೆಗಳ ಇಲಾಖೆಯ ಆಯುಕ್ತ ಮಂಜುನಾಥ್, ಜಿಲ್ಲಾಧಿಕಾರಿ ನಿತೇಶ ಪಾಟೀಲ ಉಪಸ್ಥಿತರಿದ್ದರು.