ಸಾಲ ಮರುಪಾವತಿಗೆ ನೋಟಿಸ್‌: ರೈತ ಸಂಘ ಪ್ರತಿಭಟನೆ

| Published : Jan 30 2024, 02:02 AM IST

ಸಾರಾಂಶ

ಗ್ರಾಮೀಣ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಮಾಡುವಂತೆ ನ್ಯಾಯಾಲಯದ ಮೂಲಕ ನೋಟಿಸ್ ಜಾರಿಗೊಳಿಸುತ್ತಿದೆ. ಕೋರ್ಟ್ ನೋಟಿಸ್‌ಗಳಿಂದ ರೈತರು ಆತಂಕಗೊಂಡಿದ್ದಾರೆ.

ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಪಡೆದ ರೈತರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಇಲ್ಲಿನ ಗಾಂಧಿನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಆರ್. ಮಾಧವ ರೆಡ್ಡಿ ಕರೂರು ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ರೈತರು ಅತಿವೃಷ್ಟಿ- ಅನಾವೃಷ್ಟಿಯಿಂದಾಗಿ ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ಸಿಗದೆ ಒದ್ದಾಡುತ್ತಿದ್ದಾರೆ. ಪ್ರಸಕ್ತ ವರ್ಷ ತೀವ್ರ ಬರ ಎದುರಾಗಿದ್ದು, ಸರ್ಕಾರ ಸಹ ಬರಗಾಲ ಘೋಷಣೆ ಮಾಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಗ್ರಾಮೀಣ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಮಾಡುವಂತೆ ನ್ಯಾಯಾಲಯದ ಮೂಲಕ ನೋಟಿಸ್ ಜಾರಿಗೊಳಿಸುತ್ತಿದೆ. ಕೋರ್ಟ್ ನೋಟಿಸ್‌ಗಳಿಂದ ರೈತರು ಆತಂಕಗೊಂಡಿದ್ದಾರೆ. ಬ್ಯಾಂಕ್‌ನಿಂದ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ, ಸುಸ್ತಿಬಡ್ಡಿ ಎಂದು ನಾಲ್ಕೈದು ಪಟ್ಟು ಹಣ ಪಾವತಿಸಲು ರೈತರಿಗೆ ಕಷ್ಟಸಾಧ್ಯವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಬಡ್ಡಿಯನ್ನು ವಿಧಿಸದೆ, ಒಂದೇ ಬಾರಿ ತೀರುವಳಿ(ಒಟಿಎಸ್‌) ಸ್ಕೀಂ ಅನ್ನು ಜಾರಿಗೊಳಿಸಬೇಕು. ಉಳಿದ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಈಗಾಗಲೇ ರೈತರು ಪಡೆದ ಸಾಲದ ಅಸಲಿನ ಮೇಲೆ ಶೇ. 10ರಷ್ಟು ಪಾವತಿಸಲು ಹಮ್ಮಿಕೊಂಡಿದ್ದ ಸಾಲ ಮರುಪಾವತಿ ಮೇಳದಂತೆ ಗ್ರಾಮೀಣ ಬ್ಯಾಂಕ್ ಸಲ ಆಯೋಜಿಸಿ, ರೈತರನ್ನು ಸಾಲದಿಂದ ಮುಕ್ತಗೊಳಿಸಬೇಕು. ರೈತರ ಹಿತ ಕಾಯುವ ಸಂಬಂಧ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಕೆಲಹೊತ್ತು ಪ್ರತಿಭಟನಾ ಧರಣಿ ನಡೆಸಿದರಲ್ಲದೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಚಾಗನೂರು- ಸಿರಿವಾರ ರೈತ ಹೋರಾಟ ಸಮಿತಿಯ ಮುಖಂಡ ಹಾಗೂ ಹಿರಿಯ ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ರೈತ ಮುಖಂಡರಾದ ಕೆ. ಬಸವರೆಡ್ಡಿ, ಜಿ. ಪಂಪಾಪತಿ, ತಿಮ್ಮನಗೌಡ, ವಿ. ರಾಜಶೇಖರ ರೆಡ್ಡಿ, ಎ. ಗಾದಿಲಿಂಗಪ್ಪ, ಎಂ. ಬಸವನಗೌಡ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.