15ನೇ ಹಣಕಾಸಿನಲ್ಲಿ ಪ್ರತಿವರ್ಷ ಸುಮಾರು ₹30 ಲಕ್ಷ ಅನುದಾನ ಗ್ರಾಪಂಗಳಿಗೆ ಬರುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಬಿಡಿಕಾಸು ಇಲ್ಲದೆ ಸಂಪೂರ್ಣ ಪಂಚಾಯಿತಿ ವ್ಯವಸ್ಥೆಯೇ ಹದಗೆಟ್ಟಂತಾಗಿದೆ.

ಜೋಯಿಡಾ: ತಾಲೂಕು ಕೇಂದ್ರವಾದ ಜೋಯಿಡಾ ಗ್ರಾಪಂ ಭರಿಸಬೇಕಿದ್ದ ₹94 ಲಕ್ಷ ವಿದ್ಯುತ್ ಬಿಲ್ ತುಂಬುವಂತೆ ಹೆಸ್ಕಾಂ ನೋಟಿಸ್ ನೀಡಿದೆ. ಬಿಲ್‌ ಪಾವತಿಸದಿದ್ದರೆ ವಿದ್ಯುತ್ ಕಡಿತದ ಎಚ್ಚರಿಕೆ ನೀಡಲಾಗಿದೆ. ವಿದ್ಯುತ್ ಕಡಿತವಾದರೆ ಕುಡಿಯುವ ನೀರಿಲ್ಲದೆ, ಕಗ್ಗತ್ತಲು ಆವರಿಸುವ ಭೀತಿ ಎದುರಾಗಿದೆ.

ಕಳೆದ ಎರಡು ವರ್ಷಗಳಿಂದ ಗ್ರಾಪಂಗಳಿಗೆ ಕೇಂದ್ರದ ೧೫ನೇ ಹಣಕಾಸು ಯೋಜನೆ ಅನುದಾನವಿಲ್ಲದೆ ಅಭಿವೃದ್ಧಿ ಕಾಮಗಾರಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಹಣವಿಲ್ಲವಾಗಿ ಸಂಕಷ್ಟ ಎದುರಿಸುತ್ತಿದೆ. ಈ ಮಧ್ಯೆ ವಿದ್ಯುತ್ ಬಿಲ್ ನೋಟಿಸ್ ಅಭಿವೃದ್ಧಿ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.

ಕಳೆದೆರಡು ವರ್ಷಗಳಿಂದ ಸಾರ್ವಜನಿಕ ಕುಡಿಯುವ ನೀರು, ಸ್ವಚ್ಛತೆ ನಿರ್ವಹಣೆಯಂಥ ತಾತ್ಕಾಲಿಕ ಸಮಸ್ಯೆ ಪರಿಹಾರಕ್ಕೆ ಅಭಿವೃದ್ಧಿ ಅಧಿಕಾರಿಗಳು ತಮ್ಮ ಸ್ವಂತ ಹಣ ವಿನಿಯೋಗಿಸುತ್ತಾ ಬಂದಿದ್ದಾರೆ. ಆದರೆ ಲಕ್ಷಾಂತರ ರು. ಬಾಕಿ ಇರುವ ಹೆಸ್ಕಾಂ ಬಿಲ್, ಸ್ವಚ್ಛತಾಕರ್ಮಿಗಳು ಹಾಗೂ ಅನುದಾನಿತ ಪಂಚಾಯಿತಿ ಸಿಬ್ಬಂದಿ ವೇತನ ನಿರ್ವಹಣೆ ಕಷ್ಟಸಾಧ್ಯವಾಗಿದೆ.

15ನೇ ಹಣಕಾಸಿನಲ್ಲಿ ಪ್ರತಿವರ್ಷ ಸುಮಾರು ₹30 ಲಕ್ಷ ಅನುದಾನ ಗ್ರಾಪಂಗಳಿಗೆ ಬರುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಬಿಡಿಕಾಸು ಇಲ್ಲದೆ ಸಂಪೂರ್ಣ ಪಂಚಾಯಿತಿ ವ್ಯವಸ್ಥೆಯೇ ಹದಗೆಟ್ಟಂತಾಗಿದೆ.

ಸಿಬ್ಬಂದಿಗೆ ವೇತನವಿಲ್ಲ: ನಿತ್ಯ ಸ್ವಚ್ಛತಾ ಕರ್ಮಿಗಳಿಗೆ ಕಳೆದ ಐದಾರು ತಿಂಗಳಿಂದ, ಪಂಚಾಯಿತಿ ಕಂಪ್ಯೂಟರ್ ಆಪರೇಟರ್, ವಾಟರ್ ಮನ್ ಸೇರಿದಂತೆ ಇತರ ಐದಾರು ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಲು ಅನುದಾನವಿಲ್ಲ.

ವಿದ್ಯುತ್ ಕಡಿತವಾದರೆ ಜೋಯಿಡಾ ಆಡಳಿತವೇ ಸ್ಥಗಿತವಾಗಲಿದೆ. ಗ್ರಾಪಂಗೆ ವಿದ್ಯುತ್ ಕಡಿತವಾದರೆ ಸಾರ್ವಜನಿಕ ಕುಡಿಯುವ ನೀರಿನ ಸರಬರಾಜು ಬಂದಾಗಲಿದೆ. ಕಂಪ್ಯೂಟರ್, ಅಂತರ್ಜಾಲ ಇಲ್ಲದೆ, ಕಚೇರಿ ಕಾರ್ಯ ನಿಂತು, ಪಂಚಾಯಿತಿ ಆಡಳಿತ ವ್ಯವಸ್ಥೆ ಸ್ಥಗಿತಗೊಳ್ಳಲಿದೆ.

ಜನಪ್ರತಿನಿಧಿಗಳಿಲ್ಲದೆ ಅತಂತ್ರ: ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದ ಇಂದಿನ ಪರಿಸ್ಥಿತಿಯಲ್ಲಿ ಹಣಕಾಸಿನ ಸಮಸ್ಯೆಗೆ ಅಭಿವೃದ್ಧಿ ಅಧಿಕಾರಿಗಳು ಏಕಾಂಗಿಯಾಗಿ ಹೋರಾಟ ಮಾಡುವುದು ಅಸಾಧ್ಯದ ಮಾತಾಗಿದೆ. ಆರ್ಥಿಕ ನೆರವಿಲ್ಲದೆ ಪಂಚಾಯತ್ ಪಂಚಾಯತ್ ಆಡಳಿತ ಅತಂತ್ರವಾದಂತಾಗಿದೆ.

ಜಿಲ್ಲಾಧಿಕಾರಿಗಳು, ಜಿಪಂ ಮು.ಕಾ.ನಿ. ಅಧಿಕಾರಿಗಳು, ಜೋಯಿಡಾ ಪಂಚಾಯಿತಿಯ ಸಂದಿಗ್ಧ ಪರಿಸ್ಥಿತಿಗೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಮೂಲಕ ಸಾರ್ವಜನಿಕ ಆಡಳಿತಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.