ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಕ್ಕೆ ಸೂಚನೆ: ಪೂನಂ

| Published : Apr 23 2024, 12:47 AM IST

ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಕ್ಕೆ ಸೂಚನೆ: ಪೂನಂ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತಕ್ಷೇತ್ರಗಳ ಎಆರ್‌ಒ ಮತ್ತು ಇತರೆ ಚುನಾವಣಾ ನಿಯೋಜಿತ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕರಾದ ಪೂನಂ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಮತದಾನ ನಡೆಯಲು ಅಗತ್ಯವಾದ ಎಲ್ಲ ಕ್ರಮ ಕಟ್ಟುನಿಟ್ಟಾಗಿ ಚುನಾವಣಾಧಿಕಾರಿಗಳು ಕೈಗೊಳ್ಳಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕರಾದ ಪೂನಂ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತಕ್ಷೇತ್ರಗಳ ಎಆರ್‌ಒ ಮತ್ತು ಇತರೆ ಚುನಾವಣಾ ನಿಯೋಜಿತ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಇತರೆ ತಂಡಗಳ ನೋಡಲ್ ಅಧಿಕಾರಿಗಳು ಸುಗಮವಾಗಿ ಮತದಾನ ಆಗುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಿಳಿಸಿದರು.

ಪ್ರತಿ ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಮತಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಮತ ಕ್ಷೇತ್ರಗಳ ಸೂಕ್ಷ್ಮತೆ ಅರಿತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ಚೆಕ್‌ಪೋಸ್ಟ್‌ಗಳಲ್ಲಿ ಎಚ್ಚರಿಕೆಯಿಂದ ತಪಾಸಣೆ ಕೈಗೊಳ್ಳಬೇಕು ಎಂದರು.

ಪ್ರತಿ ಮನೆ ಮನೆಗಳಿಗೆ ತೆರಳಿ ಮತದಾರರ ಮಾಹಿತಿ ಸ್ಲಿಪ್‌ ವಿತರಿಸಬೇಕು. ವಿಶೇಷವಾಗಿ ದೂರದ ಹಳ್ಳಿ/ಪ್ರದೇಶಗಳಲ್ಲಿ ಸಮರ್ಪಕವಾಗಿ ವಿತರಣೆ ಮಾಡಬೇಕು. ಮತದಾರರ ಮಾಹಿತಿ ಸ್ಲಿಪ್ ವಿತರಣೆ ವೇಳೆ ಮತದಾರರ ಬೂತ್ ಮತ್ತು ಇತರೆ ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಹೇಳಿದರು.

ಮತದಾನಕ್ಕೆ ಸಂಬಂಧಿಸಿದಂತೆ ಇವಿಎಂ, ಅಣಕು ಮತದಾನ, ಇವಿಎಂ ಡಾಟಾ, ಬ್ಯಾಟರಿ, ಯೂಸರ್ ಬಟನ್ ಬಳಕೆ ಸೇರಿ ಎಲ್ಲ ಮಾಹಿತಿ ಎಸ್‌ಓಪಿ ಯಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳು ಎಸ್‌ಓಪಿ ಸಮರ್ಪಕವಾಗಿ ಓದಿಕೊಳ್ಳಬೇಕೆಂದು ಸೂಚನೆ ನೀಡಿದ ಅವರು, ಎಲ್ಲ ಮತಕ್ಷೇತ್ರಗಳಲ್ಲಿ ಅಧಿಕಾರಿಗಳ ರಿಜಿಸ್ಟರ್ ಸೇರಿ ಇತರೆ ಮಾರ್ಗಸೂಚಿ ಅನುಸರಿಸಬೇಕು. ನಾನು ಭದ್ರಾವತಿ ಮತಕ್ಷೇತ್ರದಲ್ಲಿ ಸ್ಟ್ರಾಂಗ್ ರೂಂ, ವಲ್ನರಬಲ್, ಶ್ಯಾಡೋ ಮತಗಟ್ಟೆಗಳನ್ನು ಈಗಾಗಲೇ ಪರಿಶೀಲಿಸಿದ್ದು, ಇನ್ನುಳಿದ ಮತಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದರು.

ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್ ಮಾತನಾಡಿ, ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಜಾಗರೂಕತೆಯಿಂದ ಪರಿಶೀಲನೆ ನಡೆಸಬೇಕು. ಯಾವುದಾದರೂ ಚೆಕ್‌ಪೋಸ್ಟ್‌ಗೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ಅವಶ್ಯಕತೆ ಇದ್ದಲ್ಲಿ ತಿಳಿಸಬೇಕು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಎಫ್‌ಎಸ್‌ಟಿ, ಎಸ್‌ಎಸ್‌ಟಿ, ಇತರೆ ತಂಡಗಳು ಮತ್ತು ಸಮಿತಿಗಳ ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಉಪವಿಭಾಗಾಧಿಕಾರಿಗಳಾದ ಸತ್ಯನಾರಾಯಣ, ಯತೀಶ್, ಸಹಾಯಕ ಚುನಾವಣಾಧಿಕಾರಿಗಳು, ಚುನಾವಣಾ ನಿಯೋಜಿತ ಅಧಿಕಾರಿಗಳು ಹಾಜರಿದ್ದರು.