ಸಾರಾಂಶ
ಬಿಜೆಪಿ ಅವಧಿಯಲ್ಲೂ ರೈತರಿಗೆ ವಕ್ಫ್‌ನಿಂದ ಕಂದಾಯ ಇಲಾಖೆಯಿಂದ ನೋಟಿಸ್‌ಗಳು ಬಂದಿದ್ದವು. ಕೆಲವು ಕಡೆ ನೋಟಿಸ್ ಕೊಡದೆಯೇ ರೈತರ ಪಹಣಿಯ 11ನೇ ಕಾಲಂನಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ನಮೂದಿಸಲಾಗಿತ್ತು ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಎಂ.ಸಿ.ಮುಲ್ಲಾ ಪ್ರಶ್ನಿಸಿದರು.
ವಿಜಯಪುರ : ಬಿಜೆಪಿ ಅವಧಿಯಲ್ಲೂ ರೈತರಿಗೆ ಇದೇ ರೀತಿ ವಕ್ಫ್‌ನಿಂದ ಕಂದಾಯ ಇಲಾಖೆಯಿಂದ ನೋಟಿಸ್‌ಗಳು ಬಂದಿದ್ದವು. ಅಲ್ಲದೆ ಕೆಲವು ಕಡೆ ನೋಟಿಸ್ ಕೊಡದೆಯೇ ರೈತರ ಪಹಣಿಯ 11ನೇ ಕಾಲಂನಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ನಮೂದಿಸಲಾಗಿತ್ತು. ಇದಕ್ಕೆ ಯಾರು ಹೊಣೆ ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಎಂ.ಸಿ.ಮುಲ್ಲಾ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಿನ ಸರ್ಕಾರ ಕೆಲವರಿಗೆ ನೋಟಿಸ್ ನೀಡಿದೆ. ಕೆಲವರಿಗೆ ನೋಟಿಸ್ ನೀಡದೆ ರೈತರ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಿಸಿದೆ. ಇದನ್ನು ರಾಜಕೀಯ ಮಾಡುತ್ತಿರುವ ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ಪ್ರತಿಭಟನಾನಿರತ ರೈತರ ಬಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಂದರು. ಹೀಗೆ ಬಂದು ಕೇವಲ ರಾಜಕೀಯ ಮಾಡಿ ಹಿಂದೂ ಮುಸ್ಲಿಂ ಎಂದು ಬಿಂಬಿಸಲು ಬಂದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ಹಲವು ಪಹಣಿಗಳಲ್ಲಿ ವಕ್ಫ್ ಹೆಸರು ಎಂಟ್ರಿ ಮಾಡಿದ್ದಾರೆ. ಇವರಿಗೆ ನಿಜವಾಗಿ ರೈತರ ಬಗ್ಗೆ ಕಾಳಜಿ ಇದ್ದಿದ್ದರೇ ಇವರು ಏಕೆ ಹಾಗೆ ಮಾಡಬೇಕಿತ್ತು ಎಂದರು.
ವಕ್ಫ್ ವಿವಾದಕ್ಕೆ ಡಿಸಿ ನೇತೃತ್ವದಲ್ಲಿ ಟಾಸ್ಕಫೋರ್ಸ್ ಕಮಿಟಿ ಮಾಡಲಾಗಿದೆ ಎಂದು ಹೇಳಿದ್ದಾರೆ. ರೈತರು ಹೋರಾಟಕ್ಕೆ ಇಳಿದ ತಕ್ಷಣ 44 ರೈತರ ಪಹಣಿಯ 11ನೇ ಕಾಲಂನಲ್ಲಿದ್ದ ಕರ್ನಾಟಕ ವಕ್ಫ್ ಬೋರ್ಡ್ ಹೆಸರು ತೆಗೆಯಲಾಗಿದೆ. ಆದರೆ, 2018-2019ರಲ್ಲಿ ನೋಟಿಸ್ ನೀಡದೆಯೇ ತಾಲೂಕಿನ ಜಂಬಗಿ ಮತ್ತು ನಾಗಠಾಣ ಸೇರಿದಂತೆ ಹಲವರ ಪಹಣಿಯಲ್ಲಿ ವಕ್ಫ್ ಎಂದು ದಾಖಲಿಸಲಾಗಿದೆ. ಅದನ್ನೂ ಸಹ ತೆಗೆದುಹಾಕಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಡಾ.ಅಬೂಬಕ್ಕರ ಮುಲ್ಲಾ, ಶಹಜಾನ್ ಮುಲ್ಲಾ, ನಬಿ ಮುಲ್ಲಾ, ಬಂದೇನವಾಜ್ ಮುಲ್ಲಾ, ಎಸ್.ಇ.ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.