ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೊದ್ದೂರು ಗ್ರಾಮ ಪಂಚಾಯಿತಿ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ ಅಧ್ಯಕ್ಷತೆಯಲ್ಲಿ ಗುರುವಾರ ಹೊದ್ದೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರು ಮಾಹಿತಿ ನೀಡಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಬಗ್ಗೆ ವಿವರಿಸಿದರು. ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ
ಇದ್ದು ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧ್ಯಕ್ಷರು ಸೂಚನೆ ನೀಡಿದರು. ವಿದ್ಯುತ್ ಸಮಸ್ಯೆ ಕುರಿತು ಸಸ್ಕ್ ಮೂರ್ನಾಡು ಅಭಿಯಂತರರು ಮಾಹಿತಿ ನೀಡಿದರು, ಪಂಚಾಯತಿ ವ್ಯಾಪ್ತಿಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಅಪಾಯಕಾರಿ ಸ್ಥಿತಿಯಲ್ಲಿ ಇರುವ ಬಗ್ಗೆ ಸದಸ್ಯ ಹಮೀದ್ ಮೊನ್ನಪ್ಪ, ಟೈನಿ ಗಮನ ಸೆಳೆದರು.ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಭಿಯಂತರ ರಘು ಮಾಹಿತಿ ನೀಡಿದರು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮುತುವರ್ಜಿಯಿಂದ ಹೊದ್ದೂರು ಗ್ರಾಮ ಪಂಚಾಯತಿಗೆ ರು. 1.70 ಕೋಟಿ ಮೌಲ್ಯದ ವಿವಿಧ ರಸ್ತೆ ಕಾಮಗಾರಿಗಳು ಮಂಜೂರಾಗಿವೆ ಹಾಗೂ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧ್ಯಕ್ಷ ಹಂಸ ಮಾಹಿತಿ ನೀಡಿದರು.ಹೊದ್ದೂರು ಕಬಡಕೇರಿ ಸರ್ವೆ ನಂಬರ್ 77/2 ಹಾಗೂ 88/1ಆಶ್ರಯ ನಿವೇಶನ ಯೋಜನೆ ಅಡಿಯಲ್ಲಿ 60 ಫಲಾನುಭವಿಗಳನ್ನು
ಆಯ್ಕೆ ಮಾಡಲಾಯಿತು. ಪಂಚಾಯಿತಿ ವ್ಯಾಪ್ತಿಯ ಅನುದಾನ ರಹಿತ ಶಾಲೆಗಳ ಕಟ್ಟಡ ತೆರಿಗೆ ಬೇರೆಗ್ರಾಮ ಪಂಚಾಯಿತಿಗಳಿಗಿಂತಲೂ ಹೆಚ್ಚುವರಿಯಾಗಿ ವಿಧಿಸುತ್ತಿರುವ ಬಗ್ಗೆ ಗ್ರಾಮಸ್ಥ ಮೊಹಮ್ಮದ್ ಸಭೆಯ ಗಮನ ಸೆಳೆದರು. ಈ ಕುರಿತು ಪಿಡಿಒ ಅಬ್ದುಲ್ಲಾ ಮಾಹಿತಿ ನೀಡಿ, ಗ್ರಾಮ ಪಂಚಾಯಿತಿ ತೆರಿಗೆ ನಿಯಮಾವಳಿಗಳ
ಪ್ರಕಾರ ಈ ಹಿಂದಿನಂತೆ ತೆರಿಗೆ ವಸೂಲಿ ಮಾಡುತ್ತಿದ್ದುಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ನಿಯಮ 202 ರ ಅನ್ವಯ ಮೇಲ್ಮನವಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು
ಈ ಬಗ್ಗೆ ಮುಂದಿನ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಟೆಕಾಡು ಮತ್ತು ಹೊದವಾಡ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಪೂರಕ ಸ್ಮಾರ್ಟ್ ಟಿ.ವಿ. ಹಾಗೂ ಪಂಚಾಯತಿ ವ್ಯಾಪ್ತಿಯ 12 ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಸ್ನೇಹಿ ಪೀಠೋಪಕರಣಗಳು ಹಾಗೂ ಅಂಗನವಾಡಿ
ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಗ್ರಾಮಸಭೆಯಲ್ಲಿ ವಿತರಿಸಲಾಯಿತು. ಪಂಚಾಯತಿ ಉಪಾಧ್ಯಕ್ಷ ಅನುರಾಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ ಮೊನ್ನಪ್ಪ, ಪಂಚಾಯಿತಿ ಸದಸ್ಯರಾದ ಎಂ.ಬಿ.ಹಮೀದ್,ಕಡ್ಲೆರ ಟೈನಿ, ಪಾರ್ವತಿ, ಕೆ.ಆರ್.ಅನಿತಾ, ಲಕ್ಷ್ಮಿ, ಮೈದು, ಚೌರಿರ ಅನಿತಾ, ಚೌರೀರ ನವೀನ್, ಸರಸು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.