ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರು
ನಗರೋತ್ಥಾನ ಫೇಸ್ 4 ಯೋಜನೆಯಡಿಯಲ್ಲಿ ಮಂಜೂರುಗೊಂಡಿರುವ ಎಲ್ಲಾ ಕಾಮಗಾರಿಗಳು ಮುಂದಿನ ಒಂದು ತಿಂಗಳ ಒಳಗಾಗಿ ಪೂರ್ಣಗೊಳ್ಳಬೇಕು. ಬಳಿಕ ನಗರಸಭೆಯ ಸರ್ವ ಸದಸ್ಯರ ಸಭೆಯಲ್ಲಿ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡಬೇಕು ಎಂದು ಸಂಬಂಧಿಸಿದ ಎಂಜಿನಿಯರ್‌ಗಳಿಗೆ ನಗರಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಲಾಯಿತು. ನಗರೋತ್ಥಾನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭಾ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.ಸಭೆಯಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ರಸ್ತೆ, ಚರಂಡಿ, ಫೂಟ್‌ಪಾತ್ ಮೊದಲಾದವುಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ನಗರೋತ್ಥಾನದಲ್ಲಿ ಮಂಜೂರುಗೊಂಡಿರುವ ಒಟ್ಟು 162 ಮಂಜೂರಾದ ಕೆಲಸಗಳಲ್ಲಿ 113 ಪೂರ್ಣಗೊಂಡಿದೆ. 31 ಪ್ರಗತಿಯಲ್ಲಿದೆ ಹಾಗೂ 18 ಕಾಮಗಾರಿಗಳು ಆರಂಭಗೊಳ್ಳಬೇಕಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.ಸದಸ್ಯ ಕೆ. ಜೀವಂಧರ್ ಜೈನ್ ಮಾತನಾಡಿ ಶ್ರೀಧರ ಭಟ್ ಬಿಲ್ಡಿಂಗ್ ಬಳಿಯಿಂದ ಕಲ್ಲಿಮಾರ್, ಪರ್ಲಡ್ಕಕ್ಕೆ ಸಂಪೂರ್ಣ ಹದೆಗಟ್ಟಿರುವ ರಸ್ತೆಯನ್ನು ಪ್ರಗತಿಯಲ್ಲಿದೆ ಎನ್ನುವಂತಿಲ್ಲ. ತಕ್ಷಣ ಇದರ ಅಭಿವೃದ್ಧಿ ಕೆಲಸ ಆರಂಭಿಸಬೇಕು. ಜನವರಿ ಅನಂತರ ಜಾತ್ರೆ, ಮಳೆ ಸೇರಿದಂತೆ ಅಡಚಣೆ ಆಗುತ್ತದೆ. ತಕ್ಷಣವೇ ಡಾಮರು ಕೆಲಸ ಆರಂಭಿಸಬೇಕು ಎಂದು ಆಗ್ರಹಿಸಿದರು. ನಾಳೆಯಿಂದಲೇ ಈ ಕೆಲಸ ಆರಂಭಿಸಲಾಗುವುದು ಎಂದು ಎಂಜಿನಿಯರ್ ತಿಳಿಸಿದರು.ಬೊಳುವಾರು-ಮಂಜಲ್ಪಡ್ಪು ಸೇರಿದಂತೆ ನಗರದ ಮುಖ್ಯ ರಸ್ತೆಯನ್ನು ತಕ್ಷಣ ಸಮರ್ಪಕಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು. ಕಾಮಗಾರಿಗೆ ವೇಗ ನೀಡುವ ಪ್ರಯತ್ನ ನಡೆಸಲಾಗುತ್ತಿದೆ. ಡಾಮರು ಕಾಮಗಾರಿ ನಡೆಸುವ 1 ತಂಡ, ಕಾಂಕ್ರೀಟ್ ಸಂಬಂಧಿ ಕೆಲಸ ನಿರ್ವಹಿಸುವ 4 ತಂಡ ಸೇರಿ ಒಟ್ಟು 5 ತಂಡಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆ. ಜೀವಂಧರ್ ಜೈನ್ ಅವರು ಕಾಮಗಾರಿ ನಿರ್ವಹಿಸುವ 5 ಕಡೆಗಳಿಗೂ ಎಂಜಿನಿಯರ್, ಅಧಿಕಾರಿಗಳು ತೆರಳಿ ಫೊಟೋ ಕಳುಹಿಸಿದಲ್ಲಿ ಮುಂದಿನ ಸಭೆಯಲ್ಲಿ ಮಾತನಾಡಲು ನಮಗೆ ಧೈರ್ಯ ಬರುತ್ತದೆ ಎಂದು ತಿಳಿಸಿದರು.ನಗರದ ಕೋರ್ಟು ರಸ್ತೆಯನ್ನು ಕಾಂಕ್ರೀಟ್ ಲೇಯರ್ ಕಾಮಗಾರಿ ಆರಂಭಿಸಲಾಗುವುದು ಎಂದು ಎಂಜಿನಿಯರ್ ಮಾಹಿತಿ ನೀಡಿದರು. ಇದು ಪೂರ್ತಿಗೊಳ್ಳಲು ಹಾಗೂ ಸಂಚಾರ ಮರು ಸ್ಥಾಪಿಸಲು ಸಮಯ ಹಿಡಿಯುವುದರಿಂದ ಆ ರಸ್ತೆಯ ವರ್ತಕರಲ್ಲಿ ಮಾತುಕತೆ ನಡೆಸಿ ವಿನಂತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾಮೆತ್ತಡ್ಕ ಮಕ್ಕಳ ಪಾರ್ಕ್ ನಿರ್ಮಾಣ ಹಾಗೂ ಸೌಕರ್ಯ ಒದಗಿಸುವ ವಿಚಾರದಲ್ಲಿ ಕಳಪೆ ಕಾಮಗಾರಿ ನಡೆಸುವುದು ಸರಿಯಲ್ಲ. ಇಂತಹ ಮಕ್ಕಳಾಟ ಆಡುವುದು ಬೇಡ ಎಂದು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು. ಸಾಮೆತ್ತಡ್ಲದ ಮಕ್ಕಳ ಪಾರ್ಕ್ ನಿರ್ಮಿಸಿ ಪೂರಕ ಸೌಕರ್ಯ ಒದಗಿಸಿಲ್ಲ. ನೀರಿನ ಟ್ಯಾಂಕ್ ಕೂಡ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಮೃತ ನಗರೋತ್ಥಾನ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ ನಡೆಸಿದವರಿಗೆ ಕೆಲಸ ಪೂರ್ತಿಯಾದರೂ ಹಣ ಪಾವತಿಸಿಲ್ಲ. ಚಿನ್ನ ಅಡವಿಟ್ಟು, ಅಂಗಡಿಗಳಿಂದ ಸಾಲವಾಗಿ ಸಾಮಗ್ರಿಗಳನ್ನು ಪಡೆದುಕೊಂಡವರ ಸ್ಥಿತಿ ಏನಾಗಬೇಕು. ಬಾಕಿ ಉಳಿದಿರುವ 98 ಮಂದಿಯ ಪರಿಸ್ಥಿತಿಯೂ ಇದೇ ರೀತಿ ಇದೆ. ಅವರಷ್ಟಕ್ಕೇ ಇದ್ದವರನ್ನು ನಾವು ಕಡೆದು ಸಾಲ ಮಾಡಿಸಿದ ಸ್ಥಿತಿ ನಿರ್ಮಾಣವಾಗಿದೆ ಎಂದು ಜೀವಂಧರ್ ಜೈನ್, ಅಧ್ಯಕ್ಷೆ ಲೀಲಾವತಿ, ಭಾಮಿ ಅಶೋಕ್ ಶೆಣೈ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನುದಾನ ಬಿಡುಗಡೆ ಮಾಡಲು ಒತ್ತಡ ಹೇರುವಂತೆ ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಜಿಲ್ಲಾ ಯೋಜನಾ ನಿರ್ದೇಶಕ ಪುರಂದರ ಅವರು ಕಳೆದ ಜನವರಿಯಲ್ಲಿ ಅನುದಾನ ಬಿಡುಗಡೆಗೊಂಡ ಬಳಿಕ ಉಳಿದವರಿಗೆ ಬಿಡುಗಡೆಯಾಗಿಲ್ಲ. ಈ ಕುರಿತು ಡಿ.ಸಿ.ಯವರಿಗೆ 2 ಬಾರಿ ಪತ್ರ ಬರೆಯಲಾಗಿದೆ. ವೈಯಕ್ತಿಕ ಕಾಮಗಾರಿ ನಡೆಸಿದವರಿಗೆ ಸುಮಾರು 70 ಲಕ್ಷ ಹಣ ಬಾಕಿಯಾಗಿದೆ ಎಂದು ಮಾಹಿತಿ ನೀಡಿದರು.ನಗರಸಭಾ ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಜಿಲ್ಲಾ ಯೋಜನಾ ನಿರ್ದೇಶಕ ಪುರಂದರ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು.ಎಂಜಿನಿಯರ್ ಭರತ್, ನಂದಕುಮಾರ್, ಜಲಸಿರಿಯ ಎಂಜಿನಿಯರ್‌ಗಳು ಸಭೆಯಲ್ಲಿ ಮಾಹಿತಿ ನೀಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.