ಸಾರಾಂಶ
ಕನ್ನಡಪ್ರಭ ವಾರ್ತ ಹಾಸನ
ಜಿಲ್ಲೆಯಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಯಾವುದೇ ರೀತಿಯಲ್ಲಿ ಮೋಸವಾಗದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓರಿಯೆಂಟಲ್ ವಿಮಾ ಕಂಪನಿಯ ಜಿಲ್ಲಾ ಸಂಯೋಜಕರು ರೈತರಿಂದ ಲಂಚ ಕೇಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಜೊತೆಗೆ ರೈತರಿಗೆ ಬೆದರಿಕೆ ಹಾಕಿ ಇಳುವರಿಯನ್ನು ನಾವು ಹೇಳಿದಂತೆ ಬರೆದುಕೊಡಿ ಎಂದು ಕೇಳುತ್ತಿರುವುದು ಕಂಡುಬಂದಿದೆ. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ವಿಮಾ ಏಜೆನ್ಸಿಯ ಜಿಲ್ಲಾ ಸಮನ್ವಯ ಅಧಿಕಾರಿಗೆ ಸೂಚಿಸಿದರು.
ವಿಮಾ ಏಜೆನ್ಸಿ ಅವರು ಯಾವ ಗ್ರಾಮಗಳಿಗೆ ಯಾವ ದಿನದಂದು ಯಾರು ಕರ್ತವ್ಯ ನಿರ್ವಹಿಸಲು ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ತಹಸೀಲ್ದಾರ್‌ಗಳಿಗೆ ನೀಡುವಂತೆ ನಿರ್ದೇಶನ ನೀಡಿದರು.ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ಥಳೀಯ ಸಮಸ್ಯೆಗಳನ್ನು ರೈತರು ಹೇಳುತ್ತಾರೆ ಎಂದರು. ಮುಂಗಾರು ಬೆಳೆಯ ಬಾಕಿ ಇರುವ ಬೆಳೆ ಕಟಾವು ಪ್ರಯೋಗಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವರದಿಯಾದ ಜನನ-ಮರಣಗಳ ಬಗ್ಗೆ ಗಮನಹರಿಸಿ ಸಕಾಲದಲ್ಲಿ ನೋಂದಣಿ ಮಾಡುವ ಮೂಲಕ ಶೇ.ನೂರರಷ್ಟು ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ೩೦ ದಿನದ ನಂತರ ಒಂದು ವರ್ಷದೊಳಿನವುಗಳಿಗೆ ಗ್ರಾಮ ಲೆಕ್ಕಾಧಿಕಾರಿ ವಿವರಗಳನ್ನು ಖಚಿತಪಡಿಸಿಕೊಂಡು ನೋಂದಣಿ ಮಾಡಿ ಪ್ರಮಾಣ ಪತ್ರ ನೀಡಬಹುದು ಒಂದು ವರ್ಷದ ನಂತರ ಕೋರ್ಟ್ ಆದೇಶ ಪಡೆದು ನೋಂದಣಿ ಪ್ರಮಾಣ ಪತ್ರ ನೀಡಬಹುದಾಗಿದೆ ಎಂದು ತಿಳಿಸಿದರು. ಆರಂಭಿಕ ಹಂತದಿಂದ ೨೦೧೪ರವರೆಗೆ ಜನನ-ಮರಣದ ದಾಖಲೆಗಳ ಮಾಹಿತಿಯನ್ನು ತಹಸೀಲ್ದಾರ್ ನೀಡುವಂತೆ ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಾಜಿಯಾ, ಜಂಟಿ ಕೃಷಿ ನಿರ್ದೇಶಕರಾದ ರಮೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಗಳ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
=====ಫೊಟೋ:
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.