ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026ರ (ಎಸ್‌ಐಆರ್) ಕರಡು ಮತದಾರರ ಪಟ್ಟಿ ಪ್ರಕಟಣೆ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧ್ಯಕ್ಷತೆಯಲ್ಲಿ ಸೆ. 9ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.
ಕೊಪ್ಪಳ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026ರ (ಎಸ್‌ಐಆರ್) ಕರಡು ಮತದಾರರ ಪಟ್ಟಿ ಪ್ರಕಟಣೆ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧ್ಯಕ್ಷತೆಯಲ್ಲಿ ಸೆ. 9ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2026 ಅಕ್ಟೋಬರ್ 1ರ ಅರ್ಹತಾ ದಿನಾಂಕ ಆಧರಿಸಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದರ ಅಂಗವಾಗಿ ಕರಡು ಮತದಾರರ ಪಟ್ಟಿಯನ್ನು ಆ. 24ರಂದು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆ. 24ರಿಂದ ಸೆ. 23ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಅ. 27ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ ಜಿಲ್ಲೆಯ ಎಲ್ಲ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿದ್ದಾರೆ. ಜಿಲ್ಲೆಯ ಒಟ್ಟು 11,90,214 ಮತದಾರರ ಪೈಕಿ 10,41,388 ಮತದಾರರ (ಶೇ. 87.50) ವಿವರಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದರು.
ಕರಡು ಪಟ್ಟಿಯ ಅಂಕಿ-ಅಂಶ: ಪ್ರಕಟಿತ ಕರಡು ಮತದಾರರ ಪಟ್ಟಿಯಲ್ಲಿ 5,19,142 ಪುರುಷರು, 5,22,189 ಮಹಿಳೆಯರು ಹಾಗೂ 57 ಇತರ ಮತದಾರರು ಸೇರಿದಂತೆ ಒಟ್ಟು 10,41,388 ಮತದಾರರಿದ್ದಾರೆ. ಜಿಲ್ಲೆಯಲ್ಲಿ 1,200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳ ತರ್ಕಬದ್ಧೀಕರಣ (ರ್ಯಾಷನಲೈಸೇಷನ್) ಪ್ರಕ್ರಿಯೆ ನಡೆಸಲಾಗಿದ್ದು, ಹೊಸದಾಗಿ 37 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಮತಗಟ್ಟೆಗಳ ಸಂಖ್ಯೆ 1,315ರಿಂದ 1,352ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.ನೋಟಿಸ್ ಜಾರಿ ಮತ್ತು ವಿಚಾರಣೆ: ಹಿಂದಿನ ಸಮಗ್ರ ಪರಿಷ್ಕರಣೆಯ ಮಾಹಿತಿಯನ್ನು ನೀಡದ, ಮಾಹಿತಿ ತಾಳೆಯಾಗದ ಹಾಗೂ ಲೋಪದೋಷಗಳು ಕಂಡುಬಂದಿರುವ 14,401 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆಗಾಗಿ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಇಆರ್‌ಒ/ಎಇಆರ್‌ಒ ಕಚೇರಿಗಳು ಹಾಗೂ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಜಿಲ್ಲಾ ಆಡಳಿತದ ವೆಬ್‌ಸೈಟ್‌ನಲ್ಲೂ ಪಟ್ಟಿ ಲಭ್ಯವಿದೆ. ಹೆಸರು ಸೇರ್ಪಡೆಗೆ ನಮೂನೆ–6, ಹೆಸರು ತೆಗೆದುಹಾಕಲು ನಮೂನೆ–7 ಹಾಗೂ ಹೆಸರು/ವಿಳಾಸ ತಿದ್ದುಪಡಿ ಅಥವಾ ಸ್ಥಳಾಂತರಕ್ಕೆ ನಮೂನೆ–8ರ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಚುನಾವಣಾ ತಹಸೀಲ್ದಾರ್ ರವಿ ವಸ್ತ್ರದ್, ಜಿಲ್ಲೆಯ ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣ ಇಟ್ಟಂಗಿ ಉಪಸ್ಥಿತರಿದ್ದರು.