ಸರ್ಕಾರದ ಆದೇಶದ ನಡುವೆಯೂ ರೈತರಿಗೆ ನೋಟಿಸ್‌

| Published : Apr 30 2025, 02:02 AM IST

ಸಾರಾಂಶ

ಶಿವಮೊಗ್ಗ: ಸರ್ಕಾರದ ಆದೇಶದ ಹೊರತಾಗಿಯೂ ಅರಣ್ಯ ಇಲಾಖೆಯವರು ಜಿಲ್ಲೆಯಲ್ಲಿ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ಪಕ್ಷಭೇದ ಮರೆತು ಜನಪ್ರತಿನಿಧಿಗಳು ಖಂಡಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ: ಸರ್ಕಾರದ ಆದೇಶದ ಹೊರತಾಗಿಯೂ ಅರಣ್ಯ ಇಲಾಖೆಯವರು ಜಿಲ್ಲೆಯಲ್ಲಿ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ಪಕ್ಷಭೇದ ಮರೆತು ಜನಪ್ರತಿನಿಧಿಗಳು ಖಂಡಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರದ ಜಿ.ಪಂ ಸಭಾಂಗಣದಲ್ಲಿ ಸಚಿವ ಮಧುಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಆರಂಭದಲ್ಲೇ ಶಾಸಕಿ ಶಾರದಾ ಪೂರ್ಯಾನಾಯ್ಕ್ ಈ ವಿಷಯ ಪ್ರಸ್ತಾಪಿಸಿ, ಒತ್ತುವರಿ ತೆರವುಗೊಳಿಸದಂತೆ ಯಾವುದೇ ರೈತರಿಗೂ ನೋಟಿಸ್ ನೀಡದಂತೆ ಹಿಂದಿನ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಿರ್ಣಯವನ್ನು ಮೀರಿ ರೈತರಿಗೆ ನೋಟಿಸ್ ನೀಡಲಾಗಿದೆ. ಹಾಗಾದರೆ ಕೆಡಿಪಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬೆಲೆ ಇಲ್ವಾ? ಸಚಿವರು ಮತ್ತು ಸರ್ಕಾರದ ಆದೇಶಕ್ಕೆ ಬೆಲೆ ಇಲ್ವಾ ? ಎಂದು ಪ್ರಶ್ನಿಸಿದರು.ಇದಕ್ಕೆ ಡಿಸಿಎಫ್‌ ಶಿವಶಂಕರ್ ಪ್ರತಿಕ್ರಿಯಿಸಿ, ಸರ್ಕಾರ ಹಾಗೂ ಸಚಿವರ ಸೂಚನೆ ಅನ್ವಯ ಹೊಸದಾಗಿ ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ನ್ಯಾಯಾಲಯದಿಂದ ಆದೇಶವಾದ ಪ್ರಕರಣಗಳಿಗೆ ಮಾತ್ರ ನೋಟಿಸ್ ಕೊಟ್ಟಿದ್ದೇವೆ ಎಂದು ಸಮಾಜಾಯಿಸಿ ನೀಡಿದರು.

ಇದಕ್ಕೆ ಕೆರಳಿದ ಶಾಸಕಿ ಶಾರದಾ ಪೂರ್ಯಾನಾಯ್ಕ್, ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ 2 ಸಾವಿರ ಜನ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. 60-70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಭೂಮಿ ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. ಸರ್ಕಾರದ ಆದೇಶ ಹಾಗೂ ಕೆಡಿಪಿ ಸಭೆ ನಿರ್ಣಯ ಉಲ್ಲಂಘಿಸಿ ನೋಟಿಸ್ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧುಬಂಗಾರಪ್ಪ, ನ್ಯಾಯಾಲಯದಲ್ಲಿ ಆದೇಶವಾದ ಪ್ರಕರಣಗಳನ್ನು ತೆರವುಗೊಳಿಸುವುದು ಅನಿವಾರ್ಯ. ಆದರೆ ಹೊಸದಾಗಿ ಜಮೀನು ತೆರವುಗೊಳಿಸುವಂತೆ ರೈತರಿಗೆ ನೋಟಿಸ್ ನೀಡಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶರಾವತಿ ಮತ್ತು ಬಗರ್‌ಹುಕುಂ ರೈತರ ಸಮಸ್ಯೆ ಬಗೆಹರಿಸುವ ಕುರಿತು ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ವೇಗವಾಗಿ ವಕ್ಫ್‌ ಆಸ್ತಿ ಬಗ್ಗೆ ಸರ್ವೆ ನಡೆಯುತ್ತಿಲ್ಲ ಯಾಕೆ:

ಜಿಲ್ಲೆಯಲ್ಲಿ ಎಲ್ಲಾ ದೇವಾಲಯಗಳ ಸರ್ವೆ ನಡೆಯುತ್ತಿದೆ. ಆದರೆ ಅದೇ ವೇಗದಲ್ಲಿ ವಕ್ಫ್‌ ಆಸ್ತಿ ಬಗ್ಗೆ ಸರ್ವೆ ನಡೆಯುತ್ತಿಲ್ಲ. ದೇವಸ್ಥಾನವನ್ನೇ ಗುರಿಯಾಗಿರಿಸಿರುವುದು ಯಾಕೆ ? ತಾರತಮ್ಯ ಯಾಕೆ ? ದೇವಾಲಯಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ಹಣ ಬಿಡುಗಡೆ ಆಗುತ್ತಿಲ್ಲ. ಬೇರೆ ಸಮುದಾಯದ ಮಂದಿರಗಳಿಗೆ ಆಗುತ್ತಿದೆ. ವಿಶೇಷ ಪ್ರಯತ್ನವು ಸಾಗುತ್ತಿದೆ. ಇದು ಸರಿಯಲ್ಲ ಎಂದು ಸಭೆಯಲ್ಲಿ ಶಾಸಕ ಎಸ್‌.ಎನ್.ಚನ್ನಬಸಪ್ಪ ಟೀಕಿಸಿದರು.

ಇದಕ್ಕೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ನಿರ್ದೇಶನಗಳ ಮೇರೆಗೆ ಎಲ್ಲಾ ದೇವಾಲಯಗಳ ಸರ್ವೇ ಮಾಡಿ ವರದಿ ನೀಡಬೇಕಿದ್ದು, ಶೇ.70ರಷ್ಟು ಕಾರ್ಯ ಮುಗಿದಿದೆ. ತಾರತಮ್ಯದ ಪ್ರಶ್ನೆ ಬರುವುದಿಲ್ಲ. ಸರ್ಕಾರದ ಆದೇಶ ಪಾಲಿಸುತ್ತಿದ್ದೇವೆ ಎಂದರು.

ಮಹಿಳಾ ಪ್ರಥಮ ದರ್ಜೆ ಕಾಲೇಜುಗೆ ನಗರ ಮಧ್ಯೆ ಇರುವ ಮೀನಾಕ್ಷಿ ಭವನದ ಪಕ್ಕದ ಕೆಪಿಎಸ್‌ಸಿ ಶಾಲಾ ವಠಾರದಲ್ಲಿ ಜಾಗ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಅದು ಪಾಲಿಕೆಗೆ ಸೇರಿದ ಜಾಗವಾಗಿದೆ. ಸಚಿವರು ಮಹಿಳೆಯರಿಗೆ ಪ್ರಾಶಸ್ತ್ಯ ನೀಡಬೇಕು. ಕಾಲೇಜಿಗೆ ಜಾಗ ನೀಡಿ ಎಂದು ಶಾಸಕ ಚನ್ನಬಸಪ್ಪ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಜಿಲ್ಲೆಗೆ ಇನ್ನೊಂದು ಸರ್ಕಾರಿ ಸುಸಜ್ಜಿತ ಶಾಲೆ ಮಂಜೂರಾಗಿದ್ದು, ಒಂದರಿಂದ ಪಿಯುವರೆಗೆ ಅವಕಾಶವಿದೆ. ಅದಕ್ಕಾಗಿ ಜಾಗ ಬೇಕಾಗಿರುವುದರಿಂದ ಕಾಲೇಜಿಗೆ ಅಲ್ಲಿ ಜಾಗ ನೀಡುವುದು ಕಷ್ಟವಾಗುತ್ತದೆ ಎಂದಾಗ. ಸ್ವಲ್ಪ ವಾಗ್ವಾದ ನಡೆಯಿತು. ಕೊನೆಗೂ ಎಲ್ಲರೂ ಸೇರಿ ಸ್ಥಳಕ್ಕೆ ತೆರಳಿ ಸರ್ಕಾರಿ ಶಾಲೆ ಹಾಗೂ ಮಹಿಳಾ ಕಾಲೇಜಿಗೆ ಸೂಕ್ತ ಜಾಗ ಹುಡುಕಲು ಸ್ಥಳ ಪರಿಶೀಲನೆ ಮಾಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್‌.ಅರುಣ್, ಡಾ.ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಪಂ ಸಿಇಒ ಹೇಮಂತ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.