ಕನ್ನಡಪ್ರಭ ವಾರ್ತೆ ಬೆಂಗಳೂರು
ಗೆಜೆಟೆಡ್ ಪ್ರೊಬೇಷನರ್ಸ್ 319 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಎ ಮಟ್ಟದ 117 ಹುದ್ದೆಗಳು ಹಾಗೂ ಗ್ರೂಪ್ ಬಿ ಮಟ್ಟದ 202 ಹುದ್ದೆಗಳಿಗೆ ಆ.1ರಿಂದ ಆ.31ರವರೆಗೆ ಅರ್ಜಿ ಸಲ್ಲಿಸಬಹುದು.ಮೀಸಲಾತಿ ಕಾರಣದಿಂದ ನೇಮಕಾತಿ ವಿಳಂಬವಾಗಿರುವ ಕಾರಣ ಅರ್ಜಿ ಸಲ್ಲಿಕೆಯ ಗರಿಷ್ಠ ವಯೋಮಿತಿ ಹೆಚ್ಚಿಸಲಾಗಿದ್ದು, ಸಾಮಾನ್ಯ ಅಭ್ಯರ್ಥಿಗಳಿಗೆ 40, ಹಿಂದುಳಿದ ವರ್ಗಗಳಿಗೆ 43 ಹಾಗೂ ಎಸ್‌ಸಿ, ಎಸ್ಟಿ ಅಭ್ಯರ್ಥಿಗಳಿಗೆ 45 ವರ್ಷ ನಿಗದಿಪಡಿಸಲಾಗಿದೆ.ಉಳಿಕೆ ಮೂಲ ವೃಂದದಲ್ಲಿ 297 ಹುದ್ದೆಗಳು, ಹೈದ್ರಬಾದ್ ಕರ್ನಾಟಕ ವೃಂದ 22 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 39 ಹುದ್ದೆಗಳು, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು 50 ಹುದ್ದೆಗಳು, ತಹಸೀಲ್ದಾರ್ 25, ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯ ನಿರ್ವಾಹಕ ಅಧಿಕಾರಿ 15 ಹುದ್ದೆಗಳು, ವಾಣಿಜ್ಯ ತೆರಿಗೆ ಆಯುಕ್ತರು 74, ಸಹಕಾರ ಸಂಘಗಳ ಸಹಾಯಕ ನಿಬಂಧಕರು 21, ನಗರಾಭಿವೃದ್ಧಿ ಇಲಾಖೆ ಮುಖ್ಯಾಧಿಕಾರಿ 20, ಸಹಾಯಕ ಖಜಾನೆ ಅಧಿಕಾರಿ 12, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು 12 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು 5 ಬಾರಿ ಈಗಾಗಲೇ ಪೂರ್ವಭಾವಿ ಪರೀಕ್ಷೆ ಬರೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅದೇ ರೀತಿ ಒಬಿಸಿ ಅಭ್ಯರ್ಥಿಗಳು 7 ಬಾರಿ ಬರೆದಿದ್ದರೆ ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ. ಎಸ್‌ಸಿ, ಎಸ್ಟಿ ಅಭ್ಯರ್ಥಿಗಳಿಗೆ ಪ್ರಯತ್ನಗಳ ಮಿತಿ ಇಲ್ಲ.ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ ಮಾದರಿಯ 200 ಅಂಕಗಳ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶ್ನೆಗೆ 2 ಅಂಕಗಳು ಇರುತ್ತವೆ. ತಪ್ಪು ಉತ್ತರಕ್ಕೆ 0.25 ಅಂಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.ಯುಪಿಎಸ್ಸಿ ಮಾದರಿಯಲ್ಲಿ ವೇಳಾಪಟ್ಟಿ ಪ್ರಕಾರವೇ ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.ವೇಳಾಪಟ್ಟಿ ಪ್ರಕಾರ ಪರೀಕ್ಷೆ ಗುರಿ
ನ.15ರಂದು ಪೂರ್ವಭಾವಿ ಪರೀಕ್ಷೆ ನಡೆಸಿ ಡಿ.15ರಂದು ಫಲಿತಾಂಶ ಪ್ರಕಟಿಸಲು ಕೆಪಿಎಸ್‌ಸಿ ವೇಳಾಪಟ್ಟಿ ಹಾಕಿಕೊಂಡಿದೆ. ಅದೇ ರೀತಿ 2027ರ ಫೆ.12ರಿಂದ ಫೆ.18ರವರೆಗೆ ಮುಖ್ಯ ಪರೀಕ್ಷೆ ನಡೆಸಿ ಏ.27ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಮೇ 10ರಿಂದ 31ರ ವರೆಗೆ ಸಂದರ್ಶನ ನಡೆಸಿ ಜೂ.5ರಂದು ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.
