ಕುಖ್ಯಾತ ಅಂತಾರಾಜ್ಯ ಕಳ್ಳತನ ಗ್ಯಾಂಗ್‌ ಪತ್ತೆ

| Published : Mar 26 2024, 01:00 AM IST / Updated: Mar 26 2024, 01:01 AM IST

ಸಾರಾಂಶ

ಮಧ್ಯಪ್ರದೇಶದ ರಾಜಗಡ ಜಿಲ್ಲೆಯ ಪಚೋರೆ ಎಂಬ ಪ್ರದೇಶದಲ್ಲಿ ಈ ಕಳ್ಳರ ಗುಂಪು ವಾಸಿಸುತ್ತಿದ್ದು, ಯಾವುದೇ ಪೊಲೀಸರಿಗೂ ಅಲ್ಲಿ ಬರದಂತೆ ಇಡೀ ಊರಿನ ಜನರು ತಮ್ಮ ಜನರನ್ನು ಕಾಪಾಡಿಕೊಳ್ಳುತ್ತಾರೆ.

ಧಾರವಾಡಈ ಕಳ್ಳರ ಗುಂಪಿಗೆ ಮದುವೆ ಮನೆಗಳೇ ಗುರಿ. ಅದರಲ್ಲೂ ಶ್ರೀಮಂತರ ಮದುವೆಗಳು ಎಲ್ಲಿ, ಯಾವಾಗ ಆಗುತ್ತವೆ ಎಂಬುದರ ಬಗ್ಗೆ ಮಾಹಿತಿ ಪಡೆದು ಯಾವುದೇ ಸುಳಿವಿಲ್ಲದೇ ಕರಾರುವಕ್ಕಾಗಿ ಕಳ್ಳತನ ಮಾಡುವುದನ್ನೇ ರೂಢಿಸಿಕೊಂಡಿದ್ದಾರೆ. ಅಂತಹ ಕುಖ್ಯಾತ ಅಂತಾರಾಜ್ಯ ಬ್ಯಾಂಡ್‌ ಬಾಜಾ ಬಾರಾತ ಗ್ಯಾಂಗ್‌ ಹುಬ್ಬಳ್ಳಿ-ಧಾರವಾಡ ಮಧ್ಯದ ಪ್ರತಿಷ್ಠಿತ ಹೋಟೆಲ್‌ನ ಮದುವೆ ಸಮಾರಂಭದಲ್ಲಿ ದೊಡ್ಡ ಮಟ್ಟದ ಕಳ್ಳತನವನ್ನು ಮಾಡಿ ಇದೀಗ ವಿದ್ಯಾಗಿರಿ ಪೊಲೀಸರ ಕೈಗೆ ಸಿಕ್ಕಿದೆ.

ಹುಬ್ಬಳ್ಳಿ ಅಧ್ಯಾಪಕರ ನಗರದ ಅರುಣಕುಮಾರ ಗಿರಿಯಾಪುರ ಅವರು ಓಶಿಯನ್ ಪರ್ಲ್ ರೆಸಾರ್ಟ್‌ನಲ್ಲಿ ಮಾ. 6ರಂದು ಏರ್ಪಡಿಸಿದ್ದ ಮದುವೆ ಸಮಾರಂಭದಲ್ಲಿ 964 ಗ್ರಾಂ ತೂಕದ ಚಿನ್ನದ ಆಭರಣಗಳ (ವಜ್ರ ಮಿಶ್ರಿತ) ಕಳುವಾಗಿದ್ದವು. ಕಳ್ಳತನ ಮಾಡಿದ ₹ 61.14 ಲಕ್ಷ ಮೌಲ್ಯದ ಅಷ್ಟೂ ಚಿನ್ನಾಭರಣ, ಕಳ್ಳತನಕ್ಕೆ ಬಳಸಿದ ಕಾರು ಹಾಗೂ ಕಳ್ಳತನ ಮಾಡಿದ ಬಾಲಕನನ್ನು ಹದಿನೈದು ದಿನಗಳಲ್ಲಿ ಬಂಧಿಸಿರುವ ಪೊಲೀಸರು, ಈ ಪ್ರಕರಣದಲ್ಲಿ ಬಾಗಿಯಾದ ಇನ್ನೂ ಮೂವರ ಪತ್ತೆಗಾಗಿ ಜಾಲ ಬೀಸಿದ್ದಾರೆ.ಏನಿದು ಪ್ರಕರಣ:

ಈ ಪ್ರಕರಣದ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್‌ ಆಯುಕ್ತರಾದ ರೇಣುಕಾ ಸುಕುಮಾರ, ಸಾಮಾನ್ಯ ಕಳ್ಳತನ ರೀತಿಯಲ್ಲಿಯೇ ಊಹಿಸಿದ್ದ ಈ ಪ್ರಕರಣ ನಮ್ಮನ್ನು ಮುಂಬೈ, ಗುಜರಾತಿನ ಅಹಮದಾಬಾದ್‌, ಉಜ್ಜೈನಿಗಳಲ್ಲಿ ತನಿಖೆ ನಡೆಸಿ ಕೊನೆಗೆ ಮಧ್ಯಪ್ರದೇಶ ವರೆಗೂ ಕರೆದೊಯ್ತು. ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡು ಎಸಿಪಿ ಬಸವರಾಜ ಬಿ.ಎಸ್‌. ವಿದ್ಯಾಗಿರಿ ಠಾಣೆ ಇನ್‌ಸ್ಪೆಕ್ಟರ್‌ ಸಂಗಮೇಶ ದಿಡಿಗನಾಳ ನೇತೃತ್ವದಲ್ಲಿ ತಂಡ ಕೆಲಸ ಮಾಡಿದೆ. ಹತ್ತು ದಿನಗಳ ಕಾಲ ಊರೂರು ಅಡ್ಡಾಡಿ ಶ್ರಮವಹಿಸಿ ಕಳುವಾದ ಚಿನ್ನದ ಜತೆಗೆ ಆರೋಪಿಯನ್ನು ಕರೆತಂದಿದ್ದಾರೆ. ಮಕ್ಕಳನ್ನು ಬಳಸಿ ಕಳ್ಳತನ ಮಾಡುವುದೇ ಈ ತಂಡದ ಪ್ರಮುಖ ಕೆಲಸ. ಮಕ್ಕಳು ಹಾಗೂ ಅವರ ಪಾಲಕರಿಗೆ ವರ್ಷಕ್ಕೆ ಹಣ ನೀಡುವ ಮೂಲಕ ಅವರನ್ನು ಬಳಸಿ ಮದುವೆ ಮನೆಗಳಲ್ಲಿಯೇ ಕಳ್ಳತನ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.ಮಧ್ಯಪ್ರದೇಶದ ರಾಜಗಡ ಜಿಲ್ಲೆಯ ಪಚೋರೆ ಎಂಬ ಪ್ರದೇಶದಲ್ಲಿ ಈ ಕಳ್ಳರ ಗುಂಪು ವಾಸಿಸುತ್ತಿದ್ದು, ಯಾವುದೇ ಪೊಲೀಸರಿಗೂ ಅಲ್ಲಿ ಬರದಂತೆ ಇಡೀ ಊರಿನ ಜನರು ತಮ್ಮ ಜನರನ್ನು ಕಾಪಾಡಿಕೊಳ್ಳುತ್ತಾರೆ. ನಮ್ಮ ತಂಡ ಒಂದು ಬಾರಿ ಒಳಗೆ ಹೋಗಿ ಕಷ್ಟಪಟ್ಟು ಹೊರ ಬಂದು ನಂತರ ಉಪಾಯದಿಂದ ಸ್ಥಳೀಯ ಪೊಲೀಸರ ಸಹಕಾರ ಪಡೆದು ಕಳ್ಳತನ ಮಾಡಿದ ಅಪ್ರಾಪ್ತ ಬಾಲಕನ ಮಾಹಿತಿ ಮೂಲಕ ಕಳ್ಳತನ ಮಾಡಿದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ದೇಶಾದ್ಯಂತ ದೊಡ್ಡ ದೊಡ್ಡ ಕಳ್ಳತನದ ಕೃತ್ಯಗಳಲ್ಲಿ ಈ ತಂಡದ ಸದಸ್ಯರು ಭಾಗಿಯಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

ಒಂದೇ ಸುಳಿವು:

ಬಾಲಕ ಚಿನ್ನಾಭರಣ ಬ್ಯಾಗ್ ಒಯ್ಯುವ ದೃಶ್ಯ ಮಾತ್ರ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಆ ದೃಶ್ಯದ ಆಧಾರದಲ್ಲೇ ತನಿಖೆ ನಡೆಸಿದ ವಿದ್ಯಾಗಿರಿ ಠಾಣೆ ಪೊಲೀಸರು, ತ್ವರಿತವಾಗಿ ಅದೂ ಕಳುವಾದ ಸಂಪೂರ್ಣ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ತಂಡದ ಕಾರ್ಯಕ್ಕೆ ಡಿಜಿ ಹಾಗೂ ಐಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ರೇಣುಕಾ ಸುಕುಮಾರ ತಿಳಿಸಿದರು. ಕಳ್ಳತನ ಬಯಲಿಗೆ ಎಳೆದ ತಂಡದಲ್ಲಿ ಪಿಎಸ್ ಪ್ರಮೋದ ಎಚ್.ಜಿ, ಬಾಬಾ ಎಂ., ಐ.ಐ. ಮದರಖಂಡಿ, ಎಂ.ಎಫ್. ನದಾಫ್, ಬಾಬು ಧುಮಾಳ, ಎಂ.ಸಿ. ಮಂಕಣಿ, ಬಿ.ಎಂ. ಪಟಾತ, ಆನಂದ ಬಡಿಗೇರ, ಮಹಾಂತೇಶ ವೈ.ಎಂ., ಲಕ್ಷ್ಮಣ ಲಮಾಣಿ, ಸಾಗರ ಕುಂಕುಮಗಾರ, ರಮೇಶ ಕೋತಂಬ್ರಿ, ಸಿಸಿಬಿ ವಿಭಾಗದ ದಯಾನಂದ ಗುಂಡಗೈ, ಶಿವಾನಂದ ಕೆಂಪೋಡಿ, ತಾಂತ್ರಿಕ ವಿಭಾಗದ ಎಂ.ಎಸ್. ಚಿಕ್ಕಮಠ, ಆರ್.ಕೆ. ಬಡಂಕರ, ಆರ್.ಎಸ್. ಗೋಮಪ್ಪನವರ ಸೇರಿ ಹಲವು ಕೆಲಸ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.