ನ.3ರಿಂದ ರಾಜ್ಯಮಟ್ಟದ ಯುರಾಲಜಿ ತಜ್ಞರ ವಾರ್ಷಿಕ ಮಹಾಸಮ್ಮೇಳನ
KannadaprabhaNewsNetwork | Published : Nov 01 2023, 01:02 AM IST
ನ.3ರಿಂದ ರಾಜ್ಯಮಟ್ಟದ ಯುರಾಲಜಿ ತಜ್ಞರ ವಾರ್ಷಿಕ ಮಹಾಸಮ್ಮೇಳನ
ಸಾರಾಂಶ
ಹೃದ್ರೋಗ ತಜ್ಞ ಡಾ.ವಿವೇಕ್ ಜವಳಿ ಸಮಾವೇಶ ಉದ್ಘಾಟಿಸುವರು
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕರ್ನಾಟಕ ಯುರಾಲಜಿ ಅಸೋಸಿಯೇಶನ್ ಮತ್ತು ಶಿವಮೊಗ್ಗ ಯುರಾಲಜಿ ತಜ್ಞರ ಸಂಘದ ಸಹಯೋಗದೊಂದಿಗೆ ನ. 3ರಿಂದ 5ವರೆಗೆ ಶಿವಮೊಗ್ಗ ಕಿಮ್ಮನೆ ಗಾಲ್ಫ್‌ನಲ್ಲಿ ರಾಜ್ಯಮಟ್ಟದ 28ನೇ ಯುರಾಲಜಿ ತಜ್ಞರ ವಾರ್ಷಿಕ ಮಹಾಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಯುರಾಲಜಿ ತಜ್ಞರ ಸಂಘದ ಅಧ್ಯಕ್ಷ ಡಾ. ಧನ್ಯಕುಮಾರ್ ಹೇಳಿದರು. ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೃದ್ರೋಗ ತಜ್ಞ ಡಾ.ವಿವೇಕ್ ಜವಳಿ ಸಮಾವೇಶ ಉದ್ಘಾಟಿಸುವರು. ಸುಮಾರು 300 ಮೂತ್ರಶಾಸ್ತ್ರ ತಜ್ಞರು ಇದರಲ್ಲಿ ಭಾಗವಹಿಸುವರು. ಕಿಡ್ನಿ ಮತ್ತು ಮೂತ್ರರೋಗಗಳ ಚಿಕಿತ್ಸೆಯಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಗಳ ಬಗ್ಗೆ ತಜ್ಞರು ವಿಚಾರ ಮಂಡಿಸುವರು ಎಂದರು. 1996ರಲ್ಲಿ ಕರ್ನಾಟಕ ಯುರಾಲಜಿ ಅಸೋಸಿಯೇಶನ್ ಅರಂಭಗೊಂಡಿದೆ. ಅದರ ರೂಪುರೇಶೆ ತಯಾರಾದದ್ದು ಮತ್ತು ಮೊಟ್ಟಮೊದಲ ಸಮ್ಮೇಳನ ನಡೆಸಿದ್ದು ಸಹ ಶಿವಮೊಗ್ಗದಲ್ಲೇ. 25ನೇ ವರ್ಷದ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈಗ 28ನೇ ವರ್ಷದ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ ಎಂದರು. ಶಿವಮೊಗ್ಗ ಯುರಾಲಜಿ ಸಂಘದ ಕಾರ್ಯದರ್ಶಿ ಡಾ.ಜಗದೀಶ ಮಾತನಾಡಿ, ಸಮ್ಮೇಳನಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬರುವ ಅತಿಥಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಲು ಸಮಿತಿ ರಚಿಸಲಾಗಿದೆ. ಯಶಸ್ವಿಯಾಗಿ ಸಮ್ಮೇಳನ ನಡೆಸುವ ಜೊತೆಗೆ ಉತ್ತಮ ಆತಿಥ್ಯವನ್ನು ಸಹ ನೀಡಲಾಗುವುದು ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಖಜಾಂಚಿ ಡಾ.ಪ್ರದೀಪ್, ಡಾ.ರಾಜೀವ್ ಪಾಂಡುರಂಗಿ, ಡಾ.ಪ್ರಭು ಕೊಣ್ಣೂರು, ಡಾ.ಪ್ರಶಾಂತ್ ಭಟ್ಟ, ಡಾ.ರಾಕೇಶ್ ಬಿಸ್ಲಳ್ಳಿ ಹಾಜರಿದ್ದರು.