ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ನವೆಂಬರ್‌ 6 ಕೊನೆಯ ದಿನ

| Published : Oct 26 2025, 02:00 AM IST

ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ನವೆಂಬರ್‌ 6 ಕೊನೆಯ ದಿನ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರಾಗಲು ಪದವೀಧರರು ಹೊಸ ನೊಂದಣಿದಾರರ ಜೊತೆಗೆ, ಹಿಂದೆ ಮತದಾರರಾದವರು ಕೂಡ ಮರು ನೋಂದಣಿಯೂ ಕಡ್ಡಾಯ, ನವೆಂಬರ್ 6 ನೋಂದಣಿಗೆ ಅಂತಿಮ ದಿನ ಎಂದು ಹಾನಗಲ್ಲ ತಹಸೀಲ್ದಾರ ಎಸ್.ರೇಣುಕಾ ತಿಳಿಸಿದರು.

ಹಾನಗಲ್ಲ: ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರಾಗಲು ಪದವೀಧರರು ಹೊಸ ನೊಂದಣಿದಾರರ ಜೊತೆಗೆ, ಹಿಂದೆ ಮತದಾರರಾದವರು ಕೂಡ ಮರು ನೋಂದಣಿಯೂ ಕಡ್ಡಾಯ, ನವೆಂಬರ್ 6 ನೋಂದಣಿಗೆ ಅಂತಿಮ ದಿನ ಎಂದು ಹಾನಗಲ್ಲ ತಹಸೀಲ್ದಾರ ಎಸ್.ರೇಣುಕಾ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಹಾನಗಲ್ಲ ತಾಲೂಕಿನಲ್ಲಿ 3128 ಪದವೀಧರ ಮತದಾರರಿದ್ದರು, ಈವರೆಗೆ ತಾಲೂಕಿನಲ್ಲಿ 78 ಪದವೀಧರರು ನೋಂದಾವಣೆ ಮಾಡಿದ್ದು, 952 ಪದವೀಧರರು ಅರ್ಜಿ ಪಡೆದಿದ್ದಾರೆ. ಪದವಿ ಪಡೆದು ಬರುವ ನವೆಂಬರ್ 1, 2025ಕ್ಕೆ 3 ವರ್ಷ ಪೂರೈಸಿದವರು ಮಾತ್ರ ನೋಂದಣಿಗೆ ಅರ್ಹರು. ತಹಸೀಲ್ದಾರ ಕಛೇರಿಯಲ್ಲಿ ಅರ್ಜಿ ನಮೂನೆಗಳು ಲಭ್ಯ. ಭರ್ತಿ ಮಾಡಿದ ಅರ್ಜಿಗಳನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸ್ವಯಂ ಹಾಗೂ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಕಡ್ಡಾಯ. ಅಲ್ಲದೆ ಇಲಾಖೆಯ ಮುಖ್ಯಸ್ಥರಿಂದಲೂ ದೃಢೀಕರಿಸಿ ಅರ್ಜಿ ಸಲ್ಲಿಸಬಹುದು. ತಪ್ಪು ಮಾಹಿತಿ ನೀಡಿ ನೋಂದಣಿಗೆ ಮುಂದಾದರೆ ಕ್ರಮ ಜರುಗಿಸಬೇಕಾಗುತ್ತದೆ. ಇಲಾಖೆ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿನ ಪದವೀಧರರ ಅರ್ಜಿಗಳನ್ನು ಪಡೆದು ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ನೀಡಬಹುದು. ಕುಟುಂಬದ ಸದಸ್ಯರೆಲ್ಲರ ಅರ್ಜಿ ನಮೂನೆಗಳನ್ನು ಕೂಡ ಅಧಿಕೃತ ದಾಖಲೆಗಳನೊಂದಿಗೆ ಸಲ್ಲಿಸಬಹುದು. ಪದವಿ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ ಕಾರ್ಡ, ವೋಟರ್ ಐಡಿ, ಪಾಸ್‌ಪೋರ್ಟ ಅಳತೆ ಫೋಟೊ, ರೇಶನ್ ಕಾರ್ಡ್‌ ಝರಾಕ್ಸ್ ಪ್ರತಿಯೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಪ್ರಕ್ರಿಯೆಯ ನಿಯೋಜಿತ ಅಧಿಕಾರಿಗಳಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿಯ ದೂರವಾಣಿ ಸಂಖ್ಯೆ 08379-262241 ಹಾಗೂ 9844444269, 9740090877 ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಎಸ್.ರೇಣುಕಾ ತಿಳಿಸಿದರು.ಕಂದಾಯ ಗ್ರಾಮ:ಹಾನಗಲ್ಲ ತಾಲೂಕಿನಲ್ಲಿ 135 ಹೊಸ ಕಂದಾಯ ಗ್ರಾಮಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅಕ್ಟೋಬರ್ 27 ರಂದು ಕೆಲವರಕೊಪ್ಪ ಹಾಗೂ ಉಪ್ಪಣಸಿ ಹೊಸ ಕಂದಾಯ ಗ್ರಾಮಗಳ 819 ಕುಟುಂಬಗಳಿಗೆ ಅಧಿಕೃತ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ತಹಸೀಲ್ದಾರ ಎಸ್.ರೇಣುಕಮ್ಮ ತಿಳಿಸಿದರು.ಇ-ಸೊತ್ತು, ಖರೀದಿ ಹಕ್ಕು ಪತ್ರ ಸೇರಿದಂತೆ ಮನೆ ಕಟ್ಟಿಕೊಂಡವರಿಗೆ ಅಧಿಕೃತ ದಾಖಲೆಗಳನ್ನು ಒದಗಿಸಲಾಗುತ್ತದೆ. ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರೂ ಕೂಡ ಇವರಿಗೆ ಅಧಿಕೃತ ದಾಖಲೆಗಳಿರಲಿಲ್ಲ. ಇಂತಹ 8600 ಅರ್ಜಿಗಳು ತಾಲೂಕಿನಲ್ಲಿವೆ. ಇವುಗಳ ಡಿಜಟಲೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಈ ಎಲ್ಲರಿಗೂ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಸದ್ಯದಲ್ಲೆ ಆಲದಕಟ್ಟಿ ಹಾಗೂ ಬಿಂಗಾಪೂರ ಹೊಸ ಗ್ರಾಮಗಳನ್ನು ಘೋಷಣೆ ಮಾಡಿ ಹಕ್ಕು ಪತ್ರ ನೀಡಲಾಗುತ್ತದೆ. ದಾಖಲೆ ಇಲ್ಲದ 13 ಸಾವಿರ ಮನೆಗಳನ್ನು ಗುರುತಿಸಲಾಗಿದ್ದು ಎಲ್ಲ ಮನೆಗಳಿಗೆ ಕಾನೂನು ರೀತಿಯಲ್ಲಿ ಹಕ್ಕು ಪತ್ರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಂದಾಜು 30 ರಿಂದ 20 ವರ್ಷಗಳ ಕಾಲದಿಂದ ಈ ಜಾಗೆಗಳಲ್ಲಿ ವಸತಿ ಮಾಡಿಕೊಂಡಿದ್ದರೂ ಕೂಡ ಇವರಿಗೆ ಹಕ್ಕು ಪತ್ರ ನೀಡಲಾಗಿರಲಿಲ್ಲ. ಮೂಲ ಊರಿನಿಂದ ಒಂದು ಕಿಮೀ ಗಿಂತ ದೂರದಲ್ಲಿರುವ ಇಂತಹ ವಸತಿಗಳಿಗೆ ಹೊಸ ಗ್ರಾಮಗಳೆಂದು ಗುರುತಿಸಲಾಗುತ್ತಿದೆ. ಮೂಲ ಗ್ರಾಮದಿಂದ 1 ಕಿಮೀಗಿಂತ ಕಡಿಮೆ ಅಂತರದಲ್ಲಿರುವ ಇಂತಹ ಗ್ರಾಮಗಳಿಗೆ ಉಪಗ್ರಾಮ ಎಂದು ಹೆಸರಿಸಲಾಗುತ್ತದೆ. ಸೋಮವಾರ ಅಕ್ಟೋಬರ್ 27ರಂದು ನಡೆಯುವ ಹಕ್ಕು ಪತ್ರ ನೀಡುವ ಕಾರ್ಯಕ್ರಮದಲ್ಲಿ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹಾಗೂ ಜಿಲ್ಲಾಧಿಕಾರಿಗಳು ಪಾಲ್ಗೊಳ್ಳುವರು ಎಂದು ಎಸ್.ರೇಣುಕಾ ತಿಳಿಸಿದರು.