ಸಾರಾಂಶ
ದೇಶದಲ್ಲಿ ದೇಶಪ್ರೇಮಕ್ಕಿಂತ ಜಾತಿಪ್ರೇಮ ಹೆಚ್ಚಾಗಿದ್ದು, ಇದನ್ನು ಬಿಟ್ಟು ನಾವೆಲ್ಲರೂ ಭಾರತೀಯರು ಎಂಬುದನ್ನು ಮನಗಾಣಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು. ಅರಕಲಗೂಡು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
75 ನೇ ಗಣರಾಜ್ಯೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಕಲಗೂಡುದೇಶದಲ್ಲಿ ದೇಶಪ್ರೇಮಕ್ಕಿಂತ ಜಾತಿಪ್ರೇಮ ಹೆಚ್ಚಾಗಿದ್ದು, ಇದನ್ನು ಬಿಟ್ಟು ನಾವೆಲ್ಲರೂ ಭಾರತೀಯರು ಎಂಬುದನ್ನು ಮನಗಾಣಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಮಾದರಿ ಸಂವಿಧಾನವಾಗಿದ್ದು, ಎಲ್ಲಾ ಭಾಷೆ, ಧರ್ಮವನ್ನು ಒಳಗೊಂಡ ಭಾರತದಲ್ಲಿ ನಾವೆಲ್ಲರೂ ಒಟ್ಟಾಗಿ ಹೋಗಬೇಕು. ಸಮಾನತೆಯಿಂದ ಇರಬೇಕು. ನಾವೆಲ್ಲ ಭಾರತೀಯರು ಎಂಬ ಉದ್ದೇಶದಿಂದ ಇರಬೇಕೆಂದು ಸಂವಿಧಾನ ಬರೆದಿದ್ದು, ಅದನ್ನು ಪಾಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಶಾಸಕಾಂಗ, ಕಾರ್ಯಂಗ ನ್ಯಾಯಾಂಗ, ಪತ್ರಿಕಾಂಗ ಎಲ್ಲವನ್ನು ಒಳಗೊಂಡಂತೆ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದ್ದೆವಾ ಎಂಬುವ ಕುರಿತು ಯೋಚಿಸಬೇಕು. ಹಿಂದೆ ದೇಶದ ಬಗ್ಗೆ ಹೆಮ್ಮೆಯಿತ್ತು. ಇಂದು ಶಾಸಕಾಂಗ, ಕಾರ್ಯಂಗ ನ್ಯಾಯಾಂಗ ಎಲ್ಲದರಲ್ಲೂ ಜಾತೀಯತೆ ಹೆಚ್ಚಾಗಿದೆ. ಮತ್ತೆ ಒಳ್ಳೆಯ ವಾತಾವರಣ ಮರುಕಳಿಸಬೇಕಾದರೆ ನಾವೆಲ್ಲ ಭಾರತೀಯರು ಎಂಬುದನ್ನು ಅರಿತು ಒಂದಾಗಿ ದೇಶವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಕ್ಕಳು ವಿದ್ಯೆ ಕಲಿತಾಗ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ತಹಸೀಲ್ದಾರ್ ಬಸವರೆಡಪ್ಪ ರೋಣದ ಅವರು ಧ್ವಜಾರೋಹಣ ನೆರವೇರಿಸಿದರು. ಇಒ ಡಾ. ಅಶೋಕ್, ಆರಕ್ಷಕ ವೃತ್ತ ನಿರೀಕ್ಷಕ ರಘುಪತಿ, ಬಿಇಒ ದೇವರಾಜ್, ಪಪಂ ಮುಖ್ಯಾಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾoವಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಮತ್ತಿತರಿದ್ದರು.ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.