ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ದಲಿತ ಸೇನೆಯ ಹುಲಿಕುಂಟೆ ಆನಂದ್

| Published : Jan 27 2024, 01:22 AM IST

ಸಾರಾಂಶ

ಕೆಜಿಎಫ್ ಜಿಲ್ಲೆಯ ಪೊಲೀಸ್ ಠಾಣೆಗಳ ಸರಹದ್ದು ಅವೈಜ್ಞಾನಿಕವಾಗಿದ್ದು, ೧೦೦ ಮೀ, ೨೦೦ ಮೀ ಹತ್ತಿರವಿರುವ ಠಾಣೆಗಳನ್ನು ಬಿಟ್ಟು ದೂರು ಕೊಡಲು ೧೦ ಕಿಮೀ ದೂರ ಹೋಗುವ ಪರಿಸ್ಥಿತಿ ಸಾರ್ವಜನಿಕರಿಗೆ ಬಂದೊದಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ದಲಿತ ಕೇರಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟವನ್ನು ಬಾರ್ ಮಾಲೀಕರೇ ಚಿಲ್ಲರೆ ಅಂಗಡಿಗಳ ಮೂಲಕ ಮಾರಿ ದಲಿತರನ್ನು ಕುಡಿತದ ಚಟಕ್ಕೆ ತಳ್ಳುತ್ತಿದ್ದಾರೆ, ಅಕ್ರಮ ಮದ್ಯ ಮಾರುತ್ತಿರುವ ಬಾರ್‌ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸೂಲಿಕುಂಟೆ ಆನಂದ್ ಒತ್ತಾಯಿಸಿದರು.

ಕೆಜಿಎಫ್ ಪೊಲೀಸ್ ಜಿಲ್ಲೆಯ ಪಜಾ /ಪಪಂಗಡದವರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಕೆಜಿಎಫ್ ಜಿಲ್ಲೆಯ ಪೊಲೀಸ್ ಠಾಣೆಗಳ ಸರಹದ್ದು ಅವೈಜ್ಞಾನಿಕವಾಗಿದ್ದು, ೧೦೦ ಮೀ, ೨೦೦ ಮೀ ಹತ್ತಿರವಿರುವ ಠಾಣೆಗಳನ್ನು ಬಿಟ್ಟು ದೂರು ಕೊಡಲು ೧೦ ಕಿಮೀ ದೂರ ಹೋಗುವ ಪರಿಸ್ಥಿತಿ ಸಾರ್ವಜನಿಕರಿಗೆ ಬಂದೊದಗಿದೆ, ಕೂಡಲೇ ಪೊಲೀಸ್ ಠಾಣೆಗಳ ಸರಹದ್ದು ಬದಲಾಯಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕುಂದು ಕೊರತೆಗಳ ಸಭೆಯಲ್ಲಿ ತಿಳಿಸಿದರು.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ೪ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ೭೦ ಕ್ಕೂ ಹೆಚ್ಚು ಸಿಬ್ಬಂದಿಯಿದ್ದರೂ ತಾಲೂಕಿನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಂಗಾರಪೇಟೆಗೆ ಗ್ರಾಮಾಂತರ ಪೊಲೀಸ್ ಠಾಣೆಯೊಂದನ್ನು ತೆರೆಯಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಕೆಜಿಎಫ್ ಎಸ್ ಪಿ ಕೆ.ಎಂ.ಶಾಂತರಾಜು ಮಾತನಾಡಿ, ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ/ಪಂಗಡದವರ ಪ್ರಸ್ತಾಪಿಸಿರುವ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲು ಕ್ರಮ ವಹಿಸಲು ಸೂಚನೆ ನೀಡಿದರು.

ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಬೆಳಮಾರನಹಳ್ಳಿ ಆನಂದ್, ಬಿಇಒ ಮುನಿವೆಂಕಟರಾಮಾಚಾರಿ, ನಗರಸಭೆ ವ್ಯವಸ್ಥಾಪಕ ಶಶಿಕುಮಾರ್, ತಾಪಂ ವ್ಯವಸ್ಥಾಪಕ ಅಶ್ವಥನಾರಾಯಣ, ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಜು, ಸಿಡಿಪಿಒ ರಾಜೇಶ್, ಶಿವಾರೆಡ್ಡಿ, ಡಿವೈಎಸ್ಪಿ ಎಸ್.ಪಾಂಡುರಂಗ, ಪೊಲೀಸ್ ಇನ್ಸ್‌ಪೆಕ್ಟರ್ ನವೀನ್, ಜಿ.ಸಿ.ನಾರಾಯಣಸ್ವಾಮಿ, ಎಸ್.ಟಿ.ಮಾರ್ಕಂಡಯ್ಯ, ನಂಜಪ್ಪ, ಸುರೇಶ್‌ರಾಜು, ಆರ್.ದಯಾನಂದ, ಮಂಜುನಾಥಲಿಂಗಾರೆಡ್ಡಿ ಇದ್ದರು.