ಸಾರಾಂಶ
ಹುಬ್ಬಳ್ಳಿ: ಸಮಯ ಪಾಲನೆಯಲ್ಲಿ ಎಲ್ಲ ರೈಲ್ವೆ ವಲಯಗಳ ಪೈಕಿ ನೈರುತ್ಯ ರೈಲ್ವೆಯು ನಾಲ್ಕನೇ ಸ್ಥಾನ ಪಡೆಯುವ ಜತೆಗೆ ತನ್ನ ಮೂಲ ಆದಾಯ ವೃದ್ಧಿಗೆ ನಿರಂತರ ಶ್ರಮಿಸುತ್ತಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದರು.
75ನೇ ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿಯ ರೈಲ್ವೆ ಕ್ರೀಡಾ ಮೈದಾನದಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನೈರುತ್ಯ ರೈಲ್ವೆ ದೇಶದ ಎಲ್ಲ ಭಾಗಗಳಿಗೆ ಪ್ರಯಾಣಿಕರನ್ನು ಸಾಗಿಸುವುದರ ಜತೆಗೆ ಕೈಗಾರಿಕೆಗಳಿಗೆ ಕಬ್ಬಿಣದ ಅದಿರು, ಉಕ್ಕು, ಕಲ್ಲಿದ್ದಲು ಮತ್ತು ಇತರ ಕಚ್ಚಾ ವಸ್ತು ಸಾಗಿಸುವ ಮೂಲಕ ಈ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಣಕಾಸು ವರ್ಷದಲ್ಲಿ ಇದುವರೆಗೆ ಒಟ್ಟು ಮೂಲ ಆದಾಯ ₹ 6480.05 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 11.57ರಷ್ಟುಹೆಚ್ಚಾಗಿದೆ ಎಂದರು.
2023-24ರ ಹಣಕಾಸು ವರ್ಷದ ಡಿಸೆಂಬರ್‌ವರೆಗೆ ಸಾಗಿಸಲಾದ ಪ್ರಯಾಣಿಕರ ಸಂಖ್ಯೆ 111.51 ಮಿಲಿಯನ್ ನಿಂದ 122.78 ಮಿಲಿಯನ್ ಗೆ ಏರಿಕೆಯಾಗಿದ್ದು, ಶೇ.10.11 ಹೆಚ್ಚಳವಾಗಿದೆ. ನೈರುತ್ಯ ರೈಲ್ವೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 39.64 ಮಿಲಿಯನ್ ಟನ್ ಸರಕು ಸಾಗಿಸಿದ್ದು, ಇದು ಶೇ.8.8ರಷ್ಟುಹೆಚ್ಚಳವಾಗಿದೆ.ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 2023 ಏಪ್ರಿಲ್‌ನಿಂದ ಡಿಸೆಂಬರವರೆಗೆ 319 ಫೆಸ್ಟಿವಲ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಾಗಿದೆ. 5 ರೈಲುಗಳನ್ನು ವಿಸ್ತರಣೆ ಮಾಡಿದ್ದು, ರೈಲುಗಳಿಗೆ 2,439 ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ ಮತ್ತು 36 ರೈಲುಗಳ ವೇಗ ಹೆಚ್ಚಿಸುವ ಮೂಲಕ 610 ನಿಮಿಷಗಳ ಪ್ರಯಾಣದ ಸಮಯ ಉಳಿಸಿವೆ.
ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನನ್ಹೆ ಫರಿಶ್ತೆ ಮತ್ತು ಜೀವನ್ ರಕ್ಷಕ್ ಮೂಲಕ ನಮ್ಮ ಎಲ್ಲ ನಿಲ್ದಾಣಗಳ ಸುರಕ್ಷಿತ ಮತ್ತು ಸುರಕ್ಷಿತವಾಗಿಸಲು ಆರ್‌ಪಿಎಫ್ ಪಡೆ ಶ್ರಮಿಸುತ್ತಿದೆ. ಈ ಕಾರ್ಯಾಚರಣೆಯಲ್ಲಿ 297 ಮಕ್ಕಳು ಮತ್ತು 08 ಪ್ರಯಾಣಿಕರನ್ನು ರಕ್ಷಿಸಲಾಗಿದೆ, 146 ದಲ್ಲಾಳಿ ಪ್ರಕರಣಗಳು ಪತ್ತೆಯಾಗಿವೆ, 2023-24 ರ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ ₹ 9,65,504ಗಳ ಮೌಲ್ಯದ 497 ಲೈವ್ ಟಿಕೆಟ್ ಗಳನ್ನು ವಶಪಡಿಸಿ, 153 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಡಿ.ಸುಬ್ಬರಾವ್, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಡಾ. ವಂದನಾ ಶ್ರೀವಾಸ್ತವ, ಡಾ. ಮಂಜುನಾಥ್ ಕನಮಡಿ ಸೇರಿದಂತೆ ಇತರರು ಇದ್ದರು.