ಸಂವಿಧಾನದ ಆಶಯ ಸಾಕಾರಗೊಳ್ಳಲಿ: ಸಚಿವ ಮಂಕಾಳ ವೈದ್ಯ

| Published : Jan 27 2024, 01:22 AM IST

ಸಾರಾಂಶ

ಸಂವಿಧಾನದ ಮೂಲ ಆಶಯಗಳು ಸಮಾಜದ ಎಲ್ಲೆಡೆ ಸಾಕಾರಗೊಳ್ಳಬೇಕು. ದೇಶದ ಜನತೆ ಯಾವುದೇ ತಾರತಮ್ಯಗಳಿಲ್ಲದೆ ಸಮಾನತೆ ಮತ್ತು ಸೌಹಾರ್ದತೆಯಿಂದ ಬಾಳಬೇಕು.

ಕಾರವಾರ:

ಸಂವಿಧಾನದ ಮೂಲ ಆಶಯಗಳು ಸಮಾಜದ ಎಲ್ಲೆಡೆ ಸಾಕಾರಗೊಳ್ಳಬೇಕು. ದೇಶದ ಜನತೆ ಯಾವುದೇ ತಾರತಮ್ಯಗಳಿಲ್ಲದೆ ಸಮಾನತೆ ಮತ್ತು ಸೌಹಾರ್ದತೆಯಿಂದ ಬಾಳಬೇಕು. ಇದೇ ನಮ್ಮ ಸಂವಿಧಾನ ರಚನೆಯ ಪ್ರಮುಖ ಉದ್ದೇಶ ಎಂದು ಸಚಿವ ಮಂಕಾಳು ವೈದ್ಯ ಅಭಿಪ್ರಾಯಿಸಿದರು.ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.ಸಂವಿಧಾನ ದೇಶದ ಮುಖ್ಯ ಗ್ರಂಥವಾಗಿದೆ. ಸಮಾಜದ ಎಲ್ಲ ವರ್ಗಗಳ ಜನತೆ ತಮ್ಮ ನಡುವೆ ಯಾವುದೇ ತಾರತಮ್ಯವಿಲ್ಲದೆ ಮುಕ್ತ ವಾಹಿನಿಯಲ್ಲಿ ಬೆರೆತು ಒಂದಾಗಿ, ಒಗ್ಗಟ್ಟಾಗಿ ನೆಮ್ಮದಿಯಿಂದ ಬಾಳುವುದೇ ಸಂವಿಧಾನದ ಪ್ರಮುಖ ಮತ್ತು ಮೂಲ ಆಶಯವಾಗಿದ್ದು, ಸಂವಿಧಾನದ ತತ್ವಗಳಿಗೆ ಪ್ರತಿಯೊಬ್ಬರು ಬದ್ಧವಾಗಿರಬೇಕು ಎಂದರು.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಿದೆ. ಈ ಯೋಜನೆಗಳಿಗೆ ಪ್ರತಿ ವರ್ಷ ನಮ್ಮ ಜಿಲ್ಲೆಗೆ ₹1500 ಕೋಟಿ ಮೊತ್ತದ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತವೆ ಎಂದು ಹೇಳಿದರು.ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 3.30 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದು, ₹ 93.35 ಕೋಟಿ ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ ₹ 95.21 ಕೋಟಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಗೃಹಲಕ್ಷೀ ಯೋಜನೆಯಡಿ 3.8 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ₹ 110 ಕೋಟಿಗೂ ಅಧಿಕ ಮೊತ್ತ ವಿತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3.75 ಲಕ್ಷ ಕುಟುಂಬಗಳಿಗೆ ₹ 85.22 ಕೋಟಿ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದೆ. ಯುವನಿಧಿ ಯೋಜನೆಗೆ ಜಿಲ್ಲೆಯ ಅರ್ಹ ನಿರುದ್ಯೋಗಿಗಳನ್ನು ನೋಂದಣಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಜಿಲ್ಲೆಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡದ ಸೌಲಭ್ಯ ಹಾಗೂ ಶಾಲಾ-ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾಗುವ ವ್ಯವಸ್ಥೆ ಒದಗಿಸಲು ಸದಾ ಬದ್ಧವಾಗಿದ್ದೇವೆ. ಶಾಲೆಗಳಿಗೆ ಹೊಸ ಶಿಕ್ಷಕರ ನೇಮಕ ಮತ್ತು ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದ್ದು, ಜಿಲ್ಲೆಯ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು. ಕಾರವಾರ ಬಂದರಿನಲ್ಲಿ ₹ 40 ಕೋಟಿ ವೆಚ್ಚದಲ್ಲಿ ಹೊಳೆತ್ತುವ ಕಾಮಗಾರಿ ಪ್ರಗತಿಯಲ್ಲಿದ್ದು, ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಮೂಲಕ ಮೀನುಗಾರರಿಗೆ ಅಗತ್ಯವಿರುವ ನೆರವು ನೀಡಲಾಗುತ್ತಿದೆ. ₹ 1118 ಕೋಟಿ ವೆಚ್ಚದಲ್ಲಿ ಕರಾವಳಿ ಭಾಗದ ಎಲ್ಲ ಬಂದರುಗಳ ವ್ಯಾಪ್ತಿಯಲ್ಲಿ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.ಪೊಲೀಸ್, ಅರಣ್ಯ, ಗೃಹ ರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ತುಕಡಿಗಳಿಂದ ಸಚಿವರು ಗೌರವವಂದನೆ ಸ್ವೀಕರಿಸಿದರು. ಬಳಿಕ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಇದೇ ವೇಳೆ ರಾಜ್ಯಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನ, ಕಾರ್ಮಿಕ ಇಲಾಖೆ ವತಿಯಿಂದ 10 ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ, ಕೃಷಿ ಇಲಾಖೆಯಿಂದ ಕೃಷಿ ಪಂಡಿತ ಪ್ರಶಸ್ತಿ ವಿತರಣೆ, ಆರೋಗ್ಯ ಇಲಾಖೆಯಿಂದ ಕಾರ್ಯ ಕ್ಷಮತೆಯ ಆಧಾರದ ಮೇಲೆ 5 ಆರೋಗ್ಯ ಸಂಸ್ಥೆಗಳಿಗೆ ಪ್ರಮಾಣಪತ್ರ ವಿತರಣೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಾಂಕೇತಿಕವಾಗಿ ಪೌಷ್ಟಿಕ ಆಹಾರ ಯೋಜನೆ ಕಿಟ್ ವಿತರಣೆ, ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅತೀ ಉತ್ತಮ ನಾಗರಿಕ ಸೇವೆ ನೀಡಿದ 3 ಗ್ರಾಮ ಒನ್ ನಿರ್ವಾಹಕರಿಗೆ, ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಶಾಸಕ ಸತೀಶ ಸೈಲ್, ವಿಪ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಎಸ್ಪಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ, ಉಪ ವಿಭಾಗಾಧಿಕಾರಿ ಕನಿಷ್ಕ ಇದ್ದರು.