ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರಶಿಕ್ಷಣ ಕ್ಷೇತ್ರ ನಿಂತ ನೀರಲ್ಲ, ಸದಾ ಹರಿಯುವ ನೀರಿನಂತೆ. ಏನಾದರೂ ಹೊಸತಾದದ್ದನ್ನು ಮಾಡಲೇಬೇಕು ಎಂದು ನನಗೆ ಸಿಕ್ಕ ಸಮಯದಲ್ಲಿ ಈ ಶಿಕ್ಷಣ ಕ್ಷೇತ್ರಕ್ಕಾಗಿ ಶ್ರಮಿಸಿದ್ದೇನೆ. ಶಿಕ್ಷಣವೇ ಜೀವನಕ್ಕೆ ಮೂಲಾಧಾರವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಶಂಶುದ್ಧೀನ್ ಪುಣೇಕರ ಮನದಾಳ ಹಂಚಿಕೊಂಡರು. ನಗರದ ಸಿಕ್ಯಾಬ್ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನದ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಂಶುದ್ಧೀನ್ ಪುಣೇಕರ, ಶಿಕ್ಷಣದ ಜತೆಗೆ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಆಧ್ಯತೆ ಕೊಡಬೇಕು. ಸರ್ವರೂ ನೂರಾರು ಕಾಲ ಬಾಳಿ ಬದುಕಿ ಶಿಕ್ಷಣ ಕ್ಷೇತ್ರವನ್ನು ಸಮೃದ್ಧಿಗೊಳಿಸಬೇಕು. ಇಂದಿನ ದಿನಗಳಲ್ಲಿ ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯದ ಕಡೆ ಎಲ್ಲರೂ ಗಮನಕೊಡಬೇಕು ಎಂದು ಸಲಹೆ ನೀಡಿದರು.ನಿವೃತ್ತ ಅಧಿಕಾರಿ ಎಸ್.ಎಸ್.ಬಿಳಗಿಪೀರ ಮಾತನಾಡಿ, ಪುಣೇಕರ್ ಅವರು 69 ವರ್ಷದ ಹಿಂದೆ ಶಿಕ್ಷಣ ಸಂಸ್ಥೆ ಕಟ್ಟಿ ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದ್ದಾರೆ. ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಶಿಕ್ಷಣ ಪ್ರಾರಂಭಿಸಿದ್ದು, ಅವರು ಶಿಕ್ಷಣಕ್ಕೆ ಎಷ್ಟು ಮಹತ್ವ ಕೊಡುತ್ತಿದ್ದರು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಅವರಿಗೆ ಶಿಕ್ಷಣದ ಬಗ್ಗೆ ಸಾಕಷ್ಟು ಹಸಿವಿದೆ. ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಅವರ ಕೊಡುಗೆ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ ಮಾತನಾಡಿ,1969ರಲ್ಲಿ ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯೂ ಅಪಾರವಾದ ಸಾಧನೆ ಮಾಡಿದೆ. ಸಂಸ್ಥೆಯು 26 ವಿದ್ಯಾ ಸಂಸ್ಥೆಗಳನ್ನು ಹೊಂದಿದೆ. ಸದ್ಯ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್‌ಕೆಜಿ ಯಿಂದ ಹಿಡಿದು ಪಿಜಿವರೆಗೂ ಇದರ ಶಿಕ್ಷಣ ಸಂಸ್ಥೆಗಳಿವೆ. ಇದಕ್ಕಾಗಿ ಪುಣೇಕರ ಅವರು ಶಿಕ್ಷಣ ಕ್ಷೇತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದು ಅವರ ಕಾರ್ಯವನ್ನು ಸ್ಮರಿಸಿದರು.ಇದೇ ವೇಳೆ ಸಂಸ್ಥೆಯ ಸಂಸ್ಥಾಪಕ ಶಂಶುದ್ಧೀನ್ ಪುಣೇಕರ ಅವರನ್ನು, ಸಾಧನೆ ತೋರಿದ, ನಿವೃತ್ತ ಶಿಕ್ಷಕರು, ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಂಗವಾಗಿ ಸನ್ಮಾನಿಸಲಾಯಿತು.
ಮಾಜಿ ಶಾಸಕ ಮಕ್ಬುಲ್ ಬಾಗವಾನ್, ಶಿವಶರಣ ಪಾಟೀಲ, ಮಹಾಪೌರರಾದ ಮೆಹಜಬೀನ್ ಹೊರ್ತಿ, ರಫಿ ಭಂಡಾರಿ, ಸಿ.ಎಸ್.ನಿಂಬಾಳ, ಸಲೀಂ ಜಾಗೀರದಾರ, ರಫೀಕ್ ಇಂಡಿಕರ, ನಾಗರಾಜ ಲಂಬೂ, ಮಲ್ಲನಗೌಡ ಬಿರಾದಾರ, ಫಯಾಜ್ ಕಲಾದಗಿ, ಕನ್ನಾನ ಮುಶ್ರೀಫ್, ಪೀಟರ್ ಅಲೆಕ್ಸಾಂಡರ್, ಡಾ.ಪ್ರಭುಗೌಡ ಲಿಂಗದಳ್ಳಿ, ಮಹೇಶ ಕ್ಯಾತನ, ಜಮೀರ್ ಬಕ್ಷಿ, ಸೋಮನಾಥ ಕಳ್ಳಿಮನಿ, ಎಚ್.ಕೆ.ಯಡಹಳ್ಳಿ, ಮಲ್ಲಿಕಾರ್ಜುನ ಮೇತ್ರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.