ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಮಹಿಳೆಯರೇ ಹೆಚ್ಚು ಮಂದಿ ತಾಂತ್ರಿಕ ಪದವಿ ಪಡೆಯುತ್ತಿರುವುದು, ಅದರಲ್ಲೂ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳು ಉನ್ನತ ಮಟ್ಟದ ವಿದ್ಯೆ ಕಲಿಯುತ್ತಿರುವುದಕ್ಕೆ ಇಂಡಿಯನ್ ಅಮೆರಿಕನ್ ಕಂಪ್ಯೂಟರ್ ವಿಜ್ಞಾನಿ ಪ್ರೊ.ಸುಂದರ್‌ರಾಜಾ ಸೀತಾರಾಮ ಅಯ್ಯಂಗಾರ್ ಶ್ಲಾಘಿಸಿದರು.

ತಾಲೂಕಿನ ಸುಂಡಹಳ್ಳಿಯ (ಸಿದ್ದಯ್ಯನಕೊಪ್ಪಲು ಗೇಟ್) ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಿಂದ ಕಾಲೇಜು ಆವರಣದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡಬೇಕು. ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ತಾಂತ್ರಿಕ, ವೈದ್ಯಕೀಯ ಸೇರಿದಂತೆ ಉನ್ನತ ಪದವಿಗಳನ್ನು ಪಡೆದು ಕೆಲಸ ಮಾಡುವುದು ಅಗತ್ಯ ಎಂದರು.

ನಾರಿಯೊಬ್ಬಳು ಕಲಿತರೆ ಮನೆಯೇ ವಿದ್ಯಾವಂತಹ ಕುಟುಂಬ ಎಂಬಂತೆ ಮಹಿಳೆಯರು ಹೆಚ್ಚು ಬುದ್ಧಿವಂತರು. ಅವರು ಎಲ್ಲ ಕ್ಷೇತ್ರಗಳ್ಲೂ ತೊಡಗಿಸಿಕೊಂಡಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇತ್ತೀಚೆಗೆ ಹೆಣ್ಣು ಮಕ್ಕಳು ತಾಂತ್ರಿಕ ಪದವಿ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಕೇವಲ ಇಂಡಿಯಾದಲ್ಲಿ ಮಾತ್ರವಲ್ಲದೆ ಅಮೆರಿಕಾದಲ್ಲೂ ಸಹ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲೂ ಸಹ ಸಾಕಷ್ಟು ಹಳ್ಳಿಗಳು ಇವೆ. ಅದನ್ನು ನಾನು ನೋಡಿದ್ದೇನೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರಷ್ಟೇ ಸಾಲದು, ಅದಕ್ಕೆ ಪೂರಕವಾಗಿ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಂಡು ಉದ್ಯಮಿಗಳಾಗಬೇಕು. ಆ ಮೂಲಕ ಸಾಕಷ್ಟು ಮಂದಿಗೆ ಉದ್ಯೋಗ ಕೊಡುವಂತಹ ಕೆಲಸ ಮಾಡಬೇಕು ಎಂದರು.


ಕಾವೇರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಸೌಲಭ್ಯ ಕಲ್ಪಿಸುತ್ತಿದೆ. ಸ್ಕಿಲ್ ಡೆವಲಪ್‌ಮೆಂಟ್‌ಗಾಗಿ ಪ್ಲೇಸ್‌ ಮೆಂಟ್ ಟ್ರೈನಿಂಗ್ ನೀಡುತ್ತಿದೆ. ಈಗಾಗಲೇ ಅಂತಿಮ ವರ್ಷದ 110 ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಕಂಪನಿಗಳೊಡನೆ ಹಾಗೂ ಇಂಡೋನೇಷಿಯಾದ ವಿವಿ ಉನ್ತಾರ್‌ನೊಂದಿಗೆ ಎಂ.ಒ.ಯು.ಗೆ ಸಹಿ ಮಾಡಿದ್ದಾರೆ ಇದು ವಿದ್ಯಾರ್ಥಿಗಳಿಗಾಗಿ ಮಾಡಿರುವ ಒಳ್ಳೆಯ ಕೆಲಸವಾಗಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಬಿ.ಜಿ.ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಕಾರ್ಯದರ್ಶಿ ಡಾ.ಸಿ.ಜೆ.ಗಂಗಾಧರಗೌಡ, ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.