ಸಾರಾಂಶ
ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಎನ್.ಆರ್.ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಎ.ಎಲ್.ಮಹೇಶ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಬ್ಯಾಂಕಿನ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರ ಸ್ಥಾನಕ್ಕಾಗಿ ಕಣಬೂರು ಕಾಲೋನಿಯ ಎನ್.ಆರ್.ಸತೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅನೂಷ ಬ್ಯಾಂಕಿನ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಎಚ್.ಎ.ಪ್ರದ್ಯುಮ್ನ ಇದ್ದರು.ಅಭಿನಂದನೆ: ಬ್ಯಾಂಕಿನ ನೂತನ ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಜಿ.ವಿ.ಸಂದೇಶ್ ಮಾತನಾಡಿ, ಪಿಸಿಎಆರ್‌ಡಿ ಬ್ಯಾಂಕ್ ಕಳೆದ 4 ವರ್ಷಗಳಿಂದ ಸತತವಾಗಿ ಸಾಲ ವಸೂಲಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುತ್ತಿದೆ. ಮುಂದಿನ ವರ್ಷಗಳಲ್ಲೂ ನಮ್ಮ ಬ್ಯಾಂಕ್ ಸಾಲ ವಸೂಲಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬ್ಯಾಂಕಿನ ಅಧ್ಯಕ್ಷ ರಂಗನಾಥ್ ಮಾತನಾಡಿ, ನಮ್ಮ ಬ್ಯಾಂಕ್ ಚೆನ್ನಾಗಿ ನಡೆಯುತ್ತಿದೆ. ರೈತರಿಗೆ ಶೇ. 3ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ವಾಪಾಸು ಕಟ್ಟಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ನೂತನ ಉಪಾಧ್ಯಕ್ಷ ಎನ್.ಆರ್.ಸತೀಶ್, ನಿರ್ದೇಶಕರಾದ ಎನ್.ಜಿ.ನಾಗೇಶ್, ಜಯಪಾಲ್, ವೈ.ಎಸ್.ರವಿ, ವಿ.ಕೆ.ಸನ್ನಿ, ಕೆ.ಜಿ.ಮಲ್ಲಪ್ಪಗೌಡ, ಬಾಬು, ಎಸ್.ಎನ್.ವೆಂಕಟೇಶ್,ಟಿಎಪಿಸಿಎಂಎಸ್ ಅಧ್ಯಕ್ಷ ಎಸ್ ಗೋಪಾಲ್, ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್, ಬಿಜೆಪಿ ಮುಖಂಡರಾದ ಪರ್ವೀಜ್, ಸುರಭಿ ರಾಜೇಂದ್ರ, ಮಂಜುನಾಥ್ ಲಾಡ್ ಮತ್ತಿತರರು ಇದ್ದರು.