ಕೇಂದ್ರ ಸರ್ಕಾರದಿಂದ ಮನರೇಗಾ ಹೆಸರನ್ನು ವಿಬಿ- ಜಿ ರಾಮ್‌ ಜಿ ಎಂದು ಬದಲಾವಣೆ ಮಾಡಿದ ಹಿನ್ನೆಲೆ ಕಾಂಗ್ರೆಸ್‌ನಿಂದ ಅನೇಕ ಗೊಂದಲಗಳನ್ನು ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದೆ

ಬಳ್ಳಾರಿ: ಕೇಂದ್ರ ಸರ್ಕಾರದಿಂದ ಮನರೇಗಾ ಹೆಸರನ್ನು ವಿಬಿ- ಜಿ ರಾಮ್‌ ಜಿ ಎಂದು ಬದಲಾವಣೆ ಮಾಡಿದ ಹಿನ್ನೆಲೆ ಕಾಂಗ್ರೆಸ್‌ನಿಂದ ಅನೇಕ ಗೊಂದಲಗಳನ್ನು ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ನೀಡುವ ಉದ್ದೇಶದಿಂದ ಮನರೇಗಾ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಇದರಲ್ಲಿಯೂ ಜಾಬ್‌ ಕಾರ್ಡ್‌ ಹೆಸರಿನಲ್ಲಿ ಬೃಹತ್‌ ಭ್ರಷ್ಟಾಚಾರ ನಡೆಸಲಾಗಿದೆ. ಹೀಗಾಗಿ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮನರೇಗಾದಲ್ಲಿ ಅನೇಕ ಸುಧಾರಣೆ ತಂದಿದೆ. 100 ದಿನಗಳಿಗೆ ಸೀಮಿತವಾಗಿದ್ದನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ. ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಉದ್ಯೋಗ ಖಾತ್ರಿ ಹಣವನ್ನು ಪಾವತಿಸಲಾಗುತ್ತಿದೆ. ಕೂಲಿ ಹಣವನ್ನು ಸಹ ಹೆಚ್ಚಿಸಲಾಗಿದೆ. ಈಗ ವಿಕಸಿತ ಭಾರತ ಉದ್ಯೋಗ ಖಾತ್ರಿ ಹೆಸರು ಬದಲಾವಣೆ ಮಾಡಿದ್ದು, ಇದಕ್ಕೆ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಗಾಂಧೀಜಿ ಕಾಣುವ ದೇವರು, ಶ್ರೀರಾಮ ಕಾಣದ ದೇವರು. ಹೀಗಾಗಿ, ಗಾಂಧೀಜಿ ಬೇರೆ ಅಲ್ಲ ಹಾಗೂ ರಾಮ ಬೇರೆ ಅಲ್ಲ. ಅಂದು ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಈಗಿನ ನಕಲಿ ಗಾಂಧಿಗಳು ಹಣ ಲೂಟಿ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿ ಹೆಸರು ಹೇಳಲು ಯಾವ ನೈತಿಕತೆಯಿಲ್ಲ. ಈಗ ಹೆಸರು ಬದಲಾವಣೆ ಮಾಡಿದೆ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಕೆಡಿಸಲು ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದು ಎಲ್ಲ ಬೋಗಸ್‌. ರಾಹುಲ್‌ ಗಾಂಧಿ ವಿದೇಶಕ್ಕೆ ಹೋಗಿ ಪ್ರಧಾನಿ ಮೋದಿ ಅವರನ್ನು ತೆಗಳುವ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿ ದೇಶದ ಮೂರು ರಾಜ್ಯಗಳಲ್ಲಿಯೂ ಕಾಂಗ್ರೆಸ್‌ ಸಂಪೂರ್ಣವಾಗಿ ನಿರ್ನಾಮವಾಗುತ್ತದೆ ಎಂದರು.

ಹುಬ್ಬಳ್ಳಿಯಲ್ಲಿನ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮಹಿಳೆಗೆ ಅಪಮಾನವಾಗಿದ್ದು, ಇದಕ್ಕೆ ಸರ್ಕಾರವೇ ಕಾರಣವಾಗಿದೆ. ಆಂಧ್ರ, ಕೇರಳ ಸೇರಿ ನಾನಾ ಭಾಗದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿಮಾಜಿ ಶಾಸಕರಾದ ಜಿ.ಸೋಮಶೇಖರ್‌ ರೆಡ್ಡಿ, ಟಿ.ಎಚ್‌. ಸುರೇಶ್‌ ಬಾಬು ಇದ್ದರು.