ನರೇಗಾ: ಟ್ರ್ಯಾಕ್ಟರ್‌ಗಳಿಗೆ ಹಣ ನೀಡದ ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ

| Published : Aug 05 2025, 12:30 AM IST

ನರೇಗಾ: ಟ್ರ್ಯಾಕ್ಟರ್‌ಗಳಿಗೆ ಹಣ ನೀಡದ ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ ಯೋಜನೆಯಡಿ ಕಳೆದ ಮೂರು ವರ್ಷಗಳ ಹಿಂದೆ ನೆಲಮಾಕನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಲಸದ ಸಂದರ್ಭದಲ್ಲಿ ಮಣ್ಣು ಸಾಗಿಸಲು ಟ್ರ್ಯಾಕ್ಟರ್ ಗಳನ್ನು ಬಾಡಿಗೆ ಪಡೆಯಲಾಗಿತ್ತು. ಸುಮಾರು 7 ಲಕ್ಷ ರು. ಬಾಡಿಗೆ ಹಣ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ನೆಲಮಾಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸದ ವೇಳೆ ಬಾಡಿಗೆಗೆ ಪಡೆದಿದ್ದ ಟ್ರ್ಯಾಕ್ಟರ್ ಗಳಿಗೆ ಹಣ ನೀಡದ ಅಧಿಕಾರಿಗಳ ಕ್ರಮ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪುರಸಭೆ ಮುಂಭಾಗದಿಂದ ಟ್ರ್ಯಾಕ್ಟರ್ ಗಳೊಂದಿಗೆ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದರು. ನಂತರ ಧರಣಿ ಕುಳಿತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗ ನೀಡುವ ಜೊತೆಗೆ ಹಳ್ಳಿಗಾಡಿನ ಪ್ರಗತಿಯ ಕೆಲಸವಾಗುತ್ತದೆ. ಕಳೆದ ಮೂರು ವರ್ಷಗಳ ಹಿಂದೆ ನೆಲಮಾಕನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಲಸದ ಸಂದರ್ಭದಲ್ಲಿ ಮಣ್ಣು ಸಾಗಿಸಲು ಟ್ರ್ಯಾಕ್ಟರ್ ಗಳನ್ನು ಬಾಡಿಗೆ ಪಡೆಯಲಾಗಿತ್ತು. ಸುಮಾರು 7 ಲಕ್ಷ ರು. ಬಾಡಿಗೆ ಹಣ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೊಸ ಕಾಮಗಾರಿಗೆ ಅವಕಾಶ ನೀಡದೇ ಯೋಜನೆ ಉದ್ದೇಶವನ್ನೇ ಹಾಳು ಮಾಡಲು ಮುಂದಾಗಿದ್ದಾರೆ. ಅಲ್ಲದೇ, ಧನದ ಕೊಟ್ಟಿಗೆಯನ್ನು ಸಹ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕೊಡತ್ತಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಒಂದು ಬಿಲ್ ಮಾತ್ರ ಮಾಡಿ ಉಳಿದಂತೆ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಸಾಲ ಮಾಡಿ ಮನೆ ನಿರ್ಮಿಸಿಕೊಳ್ಳುತ್ತಿರುವ ಬಡವರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅಲ್ಲದೇ, ಹಲವು ಕಾಮಗಾರಿಗಳ ಸಲಕರಣೆಗಳ ಬಿಲ್ ಸಹ ಪೂರ್ಣ ಪ್ರಮಾಣದಲ್ಲಿ ನೀಡಿಲ್ಲ. ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮನವಿ ಸ್ವೀಕರಿಸಿ ಕ್ರಮ ವಹಿಸುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸುಶೀಲಾ, ಜಯಶೀಲಾ, ರತ್ನಮ್ಮ, ರಘುನಾಥ್, ಉಮೇಶ್, ಶಿವಲಿಂಗೇಗೌಡ, ಶೇಖರ್, ಕೆಂಪೇಗೌಡ, ರಮೇಶ್, ಮಹೇಶ್, ಪದ್ಮ ಪಾಲ್ಗೊಂಡಿದ್ದರು.