ಸಾರಾಂಶ
ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ 2024-25ನೇ ಸಾಲಿನಲ್ಲಿ 2 ತಿಂಗಳಲ್ಲೇ ರೋಣ ತಾಪಂ ಶೇ. 95 ಮಾನವ ದಿನಗಳ ಸೃಜನೆ ಮಾಡುವ ಮೂಲಕ ರಾಜ್ಯದಲ್ಲೇ ಉತ್ತಮ ನರೇಗಾ ಕೆಲಸಗಳನ್ನು ಮಾಡಿರುವ ತಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2024-25ರಲ್ಲಿ ರೋಣ ತಾಪಂ 6,32,945 ಮಾನವ ದಿನಗಳನ್ನು ಸೃಜಿನ ಮಾಡುವ ಗುರಿ ಹೊಂದಿತ್ತು. ಆದರೆ ಎರಡು ತಿಂಗಳ ಅವಧಿಯಲ್ಲಿ 6,03,572 ಮಾಡಿ ಶೇ. 95ರಷ್ಟು ಮಾನವ ದಿನಗಳ ಸೃಜನೆ ಮಾಡಿದೆ.
ತಾಲೂಕಿನಲ್ಲಿ 22 ಗ್ರಾಪಂಗಳಿದ್ದು, ಗ್ರಾಮಸ್ಥರಿಗೆ ನರೇಗಾ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರೋಜಗಾರ್ ಡೇ ಕಾರ್ಯಕ್ರಮ, ರೋಜಗಾರ ವಾಹಿನಿ ಮೂಲಕ ಎಲ್ಲರಿಗೆ ಯೋಜನೆ ಮಾಹಿತಿ ತಲುಪಿಸಲಾಗುತ್ತಿದೆ. ಕೆಲಸ ಮಾಡುವ ಕೂಲಿಕಾರರಿಗೆ ಸ್ಥಳದಲ್ಲೇ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕುರಿ ಶೆಡ್, ದನದ ಕುಡಿಯುವ ನೀರಿನ ತೊಟ್ಟೆ, ಕೃಷಿ ಬಾವಿ, ಕೃಷಿ ಹೊಂಡ ಕಲ್ಯಾಣಿ ಪುನಶ್ಚೇತನ, ಅರಣ್ಯಿಕರಣ ಮತ್ತಿತರ ಕಾಮಗಾರಿ ಅನುಷ್ಠಾನಕ್ಕೆ ಕ್ರಿಯಾಯೋಜನೆ ಮಾಡಲಾಗಿದೆ. ಶಾಲಾ ಕಾಂಪೌಂಡ್, ಪೌಷ್ಟಿಕ ಕೈತೋಟ, ದಾಸೋಹ ಭವನ, ಆಟದ ಮೈದಾನ, ಶೌಚಗೃಹವನ್ನು ಈ ಯೋಜನೆಯಡಿ ನಿರ್ಮಿಸಲಾಗಿದೆ. ಜಲ ಸಂರಕ್ಷಣೆ, ಮಣ್ಣಿನ ಸವಕಳಿ ತಡೆಗಟ್ಟಿ ಅಂತರ್ಜಲ ಮಟ್ಟ ಹೆಚ್ಚಿಸಲು ಚೆಕ್ ಡ್ಯಾಂ, ನೀರು ಕಾಲುವೆ ಇಂಗುಗುಂಡಿಗಳನ್ನು ಮಾಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಅಮೃತ ಸರೋವರಕ್ಕೆ ಆಯ್ಕೆಯಾದ ಸರೋವರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
5 ವರ್ಷದಲ್ಲಿನ ಮಾನವ ದಿನಗಳು: 2019-20ರಲ್ಲಿ 8,85,737 ಮಾನವ ದಿನಗಳು ಬಳಕೆಯಾಗಿವೆ. 2020-21ರಲ್ಲಿ 6,11,574 ಮಾನವ ದಿನಗಳು, 2021-22ರಲ್ಲಿ 9,29,521, 2022-23ರಲ್ಲಿ 4,98,878, 2023-24ನೇ ಸಾಲಿನಲ್ಲಿ 7,63,762 ಮಾನವ ದಿನಗಳು ಬಳಕೆಯಾಗಿದೆ. ಜಿಪಂ ಸಿಇಒ ಅವರ ಸಲಹೆ-ಸೂಚನೆಗಳು ಮತ್ತು ರೋಣ ತಾಪಂ ಇಒ ಅವರ ಪೋತ್ಸಾಹ ಮತ್ತು ಮಾರ್ಗದರ್ಶನ ದೊಂದಿಗೆ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸಲಾಗಿದೆ. ಕೆಲಸ ಕೇಳಿದ ಕೈಗಳಿಗೆ ತಕ್ಷಣವೇ ಉದ್ಯೋಗ ನೀಡಲಾಗಿದೆ ಎಂದು ರೋಣ ತಾಪಂ ಸಹಾಯಕ ನಿರ್ದೇಶಕ ರಿಯಾಜ್ ಖತೀಬ ಹೇಳುತ್ತಾರೆ.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರಂತರ ಪ್ರೋತ್ಸಾಹದಿಂದ ಈ ಗುರಿ ಸಾಧನೆ ಮಾಡಿದ್ದೇವೆ. ಅದಲ್ಲದೆ ನಮ್ಮ ತಾಲೂಕಿನ ವ್ಯಾಪ್ತಿಯ ಎಲ್ಲ ಪಿಡಿಒ ಹಾಗೂ ಸಿಬ್ಬಂದಿ ವರ್ಗದವರ ಶ್ರಮವೂ ಅಪಾರವಾಗಿದೆ ಎಂದು ರೋಣ ತಾಪಂ ಇಒ ಎಸ್.ಕೆ. ಇನಾಮದಾರ ಹೇಳುತ್ತಾರೆ.