ಸಾರಾಂಶ
ಕಲಬುರಗಿ ಮತ್ತು ಬೆಳಗಾವಿ ವಿಭಾಗದ 14 ಜಿಲ್ಲೆಗೆ ಅನ್ವಯ । ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರದಿಂದ ಮಹತ್ವದ ನಿರ್ಧಾರ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಬಿಸಿಲು, ಸೆಖೆ ವಿಪರೀತ ಮಿತಿಮೀರಿರುವುದರಿಂದ ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿಯಡಿ ಕಾರ್ಮಿಕರ ಕೆಲಸದ ಪ್ರಮಾಣವನ್ನು ಮೂರು ತಿಂಗಳ ಅವಧಿಗೆ ಕಡಿತ ಮಾಡಲಾಗಿದೆ.
ಈಗಾಗಲೇ ಕಲಬುರಗಿಯಲ್ಲಿ 41-42 ಹಾಗೂ ಇತರೆ ಜಿಲ್ಲೆಗಳಲ್ಲಿಯೂ 39-40 ತಾಪಮಾನ ದಾಖಲಾಗಿರುವುದರಿಂದ ಕಾರ್ಮಿಕರು ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಲಿದೆ. ಹಾಗಾಗಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಕೂಲಿಕೆಲಸದ ಪ್ರಮಾಣವನ್ನು ಕಡಿಮೆ ಮಾಡಿ ಆದೇಶಿಸಲಾಗಿದೆ.ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವ್ಯಾಪ್ತಿಯ 14 ಜಿಲ್ಲೆಗಳಲ್ಲಿ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಪ್ರಮಾಣವನ್ನು ಉರಿಬಿಸಿಲು ಇರುವುದರಿಂದ ಕಡಿಮೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಚೇತನ್ ಆದೇಶಿಸಿದ್ದಾರೆ.
ಈಗಿರುವ ಕೆಲಸದ ಪ್ರಮಾಣವನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ. 30ರಷ್ಟು ಮತ್ತು ಜೂನ್ ತಿಂಗಳಲ್ಲಿ ಶೇ. 20ರಷ್ಟು ಕಡಿಮೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಈಗಿರುವ ಬೇಸಿಗೆಯಲ್ಲಿ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ. ತಾಪಮಾನ ಮಿತಿಮೀರುತ್ತಿರುವುದರಿಂದ ಮಧ್ಯಾಹ್ನದ ವೇಳೆಯಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟವಾಗುತ್ತದೆ. ಹೀಗಾಗಿ ಈಗ ಕೆಲಸ ನಿರ್ವಹಿಸುವ ಪ್ರಮಾಣವನ್ನು ತಗ್ಗಿಸಿ, ಆದೇಶಿಸಲಾಗಿದ್ದು, ಕೆಲಸದ ಸಮಯವನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಶೇ.50ರಷ್ಟು:ಈಗಾಗಲೇ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಕೆಲಸದ ಪ್ರಮಾಣವನ್ನು ಶೇ.50 ರಷ್ಟು ತಗ್ಗಿಸಲಾಗಿದೆ. ಈಗ ಉಳಿದ ಸಾಮಾನ್ಯರಿಗೂ ಬಿಸಿಲಿನ ತಾಪ ಇರುವುದರಿಂದ ಕಡಿತ ಮಾಡಿ ಆದೇಶಿಸಲಾಗಿದ್ದು, ಇಂದಿನಿಂದಲೇ ಹೊಸ ಆದೇಶ ಜಾರಿಯಾಗಲಿದೆ.
ಸಕಲಸೌಕರ್ಯ:ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಅದರಲ್ಲೂ ಶುದ್ಧ ಕುಡಿಯುವ ನೀರು ಮತ್ತು ನೆರಳು ಇರುವಂತೆ ನೋಡಿಕೊಳ್ಳಬೇಕು. ವಿಶ್ರಾಂತಿ ಪಡೆಯಲು ಅಗತ್ಯ ನೆರಳಿನ ವ್ಯವಸ್ಥೆ ಮಾಡಬೇಕು. ಪ್ರಥಮ ಚಿಕಿತ್ಸೆ ಸಿಗುವಂತೆಯೂ ಸೌಲಭ್ಯ ಇರಬೇಕು. ಬಿಸಿಲಿನ ತಾಪಕ್ಕೆ ಸುಸ್ತಾಗುವುದು ಸೇರಿದಂತೆ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಅವರಿಗೆ ಚಿಕಿತ್ಸೆ ದೊರೆಯುವಂತೆ ಆಗಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.