ಸತ್ಯ ಮೇವ ಜಯತೆ ಅಂತ ಸತ್ಯ ಹೇಳಿಯೇ ಕಾಂಗ್ರೆಸ್ ಗೆ ಗೊತ್ತಿಲ್ಲ. ಯಾರ ಹೆಸರನ್ನು ಅಪಚಾರ ಮಾಡಿದ್ದಾರೆ. ಅವರ ಹೆಸರಿನಲ್ಲಿಯೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗದಗ: ಮಹಾತ್ಮ ಗಾಂಧೀಜಿ ದೇಶದ ಆತ್ಮ. ರಾಮ ಗಾಂಧೀಜಿ ಆತ್ಮ. ಅವರಿಬ್ಬರನ್ನು ಬೇರ್ಪಡಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯಿಂದ ಆಗುವ ಪ್ರಯೋಜನಗಳು ಹಾಗೂ ನರೇಗಾ ಯೋಜನೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರ ಮುಂದುವರೆಯಬೇಕಾ ಅಂತ ಬ್ಯಾನರ್ ಮಾಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹಾಕಬೇಕು. ರಾಜ ಸರ್ಕಾರದ ರಾಜಶಕ್ತಿಯ ವಿರುದ್ಧ ಜನಶಕ್ತಿಯ ಸಂಘರ್ಷ ನಡೆಸಬೇಕು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಬಿಜೆಪಿ ವತಿಯಿಂದ ನಡೆದ ವಿಬಿ ಜಿ ರಾಮ್ ಜಿ ಯೋಜನೆಯ ಅನುಷ್ಠಾನ ಹಾಗೂ ಜನಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧಿ ಈ ದೇಶದ ಆತ್ಮ. ‌ನಾವು ಗಾಂಧೀಜಿಯಿಂದ ಎರಡು ವಿಚಾರಗಳನ್ನು ಕಲಿತಿದ್ದೇವೆ. ಮೊದಲನೆಯದ್ದು ಸತ್ಯಮೇವ ಜಯತೆ, ಎರಡನೇಯದು ಸತ್ಯದ ಸಲುವಾಗಿ ಉಪವಾಸ. ಇವೆರಡು ಗಾಂಧೀಜಿಯಿಂದ ಕಲಿತಿದ್ದೇವೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿಗೆ ಸಂಬಂಧ ಇಲ್ಲ. ಇಂದಿರಾ ಗಾಂಧಿ ಪತಿ ಫಿರೋಜ್ ಗ್ಯಾಂಡಿ. ಸ್ವಾತಂತ್ರ್ಯ ಬಂದಾಗ ಫಿರೋಜ್ ಅವರು ಗ್ಯಾಂಡಿಯನ್ನು ಗಾಂಧಿ ಮಾಡಿಕೊಂಡರು. ಈಗ ಗಾಂಧಿ ಹೆಸರಲ್ಲಿ ಹೋರಾಟ ಮಾಡುತ್ತಿದ್ದಾರೆ. ಹೇಳೋದೊಂದು ಮಾಡೊದೊಂದು ಕಾಂಗ್ರೆಸ್ಸಿನ ಎರಡು ಗುಣ. ಕಲಿತಿರುವ ಗುಣ, ಹುಟ್ಟಿರುವ ಗುಣ, ಅಂತ ಇರುತ್ತವೆ. ಹುಟ್ಟಿರುವ ಗುಣ ಬದಲಿಸಲು ಆಗುವುದಿಲ್ಲ. ಸತ್ಯ ಮೇವ ಜಯತೆ ಅಂತ ಸತ್ಯ ಹೇಳಿಯೇ ಕಾಂಗ್ರೆಸ್ ಗೆ ಗೊತ್ತಿಲ್ಲ. ಯಾರ ಹೆಸರನ್ನು ಅಪಚಾರ ಮಾಡಿದ್ದಾರೆ. ಅವರ ಹೆಸರಿನಲ್ಲಿಯೇ ರಾಜಕಾರಣ ಮಾಡುತ್ತಿದ್ದಾರೆ ಎಂದರು.ಇಬ್ಬರು ವ್ಯಕ್ತಿಗಳನ್ನು ಕಾಂಗ್ರೆಸ್ ಅವರ ಹೆಸರು ಬಳಸಿಕೊಂಡು ಅವರ ಮಾತನ್ನು ಕೇಳಿಲ್ಲ. ಗಾಂಧೀಜಿ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಿ ಅಂದರೂ ಮಾಡಲಿಲ್ಲ. ಅಂಬೇಡ್ಕರ್ ಜೀವಂತ ಇದ್ದಾಗ ಅವರನ್ನು ಸೋಲಿಸಿ ಮಂತ್ರಿ ಇದ್ದಾಗ ಅವರನ್ನು ರಾಜೀನಾಮೆ ಕೊಡಿಸಿದರು. ಅವರು ತೀರಿಕೊಂಡಾಗ ಮಣ್ಣು ಮಾಡಲು ದೆಹಲಿಯಲ್ಲಿ ಜಾಗ ಕೊಡಲಿಲ್ಲ. ದೆಹಲಿಯಲ್ಲಿ ಇಂದಿರಾಗಾಂಧಿ, ನೆಹರು, ರಾಜಿವ್ ಗಾಂಧಿ ಸಮಾಧಿ ಇದೆ. ಅಂಬೇಡ್ಕರ್ ಸಮಾಧಿ ಇಲ್ಲ ಎಂದರು.ಝೀರೊ ಸಾಧನೆ ಸರ್ಕಾರ: 2013ರಲ್ಲಿ ಯುಪಿಎ ಸರ್ಕಾರ ಇತ್ತು ಆಗ ನರೇಗಾ ಯೋಜನೆಗೆ ₹33 ಸಾವಿರ ಕೋಟಿ ಬಜೆಟ್ ಇತ್ತು. ಕಳೆದ ಬಜೆಟ್‌ನಲ್ಲಿ ₹1.30 ಲಕ್ಷ ಕೋಟಿ ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಈ ವರ್ಷ ಬಜೆಟ್‌ನಲ್ಲಿ ₹1.40 ಲಕ್ಷ ಕೋಟಿ ನಿಗದಿ ಮಾಡಿ, ₹75 ಸಾವಿರ ಕೋಟಿ ಮುಂದಿನ ವರ್ಷದ ಯೋಜನೆಗೆ 125 ದಿನಕ್ಕೆ ಇಟ್ಟು ಹಿಂದಿನ ಕೆಲಸದ ಬಾಕಿ ₹30 ಸಾವಿರ ಕೋಟಿ ಇಟ್ಟಿದೆ. ಈ ವರ್ಷವೂ ₹1.5 ಲಕ್ಷ ಕೋಟಿ ಕೇಂದ್ರ ಸರ್ಕಾರ ಇಟ್ಟಿದೆ. ನೂರು ದಿನದ ಹಣ ಕೇಂದ್ರ ಸರ್ಕಾರ ಕೊಡುತ್ತದೆ. 25 ದಿನಕ್ಕೆ ಕೊಡಿ ಎಂದರೆ ರಾಜ್ಯ ಸರ್ಕಾರದವರು ನಾಟಕ ಮಾಡುತ್ತಾರೆ.

ಈ ವೇಳೆ ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಶಿವಕುಮಾರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.