ಸಾರಾಂಶ
ಶಿರಹಟ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕಳೆದ ಆರು ತಿಂಗಳಿಂದ (ಜನವರಿ ೨೦೨೫ ರಿಂದ) ಸಂಬಳ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಶಿರಹಟ್ಟಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು. ಈ ವೇಳೆ ಹೊರಗುತ್ತಿಗೆ ನೌಕರರು ಮಾತನಾಡಿ, ಕರ್ನಾಟಕ ರಾಜ್ಯಾದ್ಯಂತ ೩,೬೩೨ ನರೇಗಾ ನೌಕರರು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಮಟ್ಟದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಜಿಲ್ಲಾ ಅಕೌಂಟ್ ಮ್ಯಾನೇಜರ್, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು (ಸಿವಿಲ್, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ), ಆಡಳಿತ ಸಹಾಯಕರು, ಡಿಇಒ, ಬೇರ್ ಫೂಟ್ ಟೆಕ್ನಿಷಿಯನ್, ಗ್ರಾಮ ಕಾಯಕ ಮಿತ್ರ ಮುಂತಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ ಆರು ತಿಂಗಳಿಂದ ಸಂಬಳವಿಲ್ಲದೇ ಈ ಸಿಬ್ಬಂದಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ, ಪ್ರಯಾಣ ಖರ್ಚು, ಸಾಲ ಮರುಪಾವತಿ, ಇಎಂಐ ಮುಂತಾದ ಆರ್ಥಿಕ ಬಾಧ್ಯತೆಗಳನ್ನು ನಿಭಾಯಿಸಲು ತೊಂದರೆಯಾಗಿದೆ. ಇದರಿಂದ ಸಿಬ್ಬಂದಿಗಳು ಸ್ನೇಹಿತರು, ಸಂಬಂಧಿಕರು, ಖಾಸಗಿ ಸಾಲಗಾರರಿಂದ ಸಾಲ ಪಡೆಯುವಂತಹ ಗಂಭೀರ ಪರಿಸ್ಥಿತಿಗೆ ತಲುಪಿದ್ದಾರೆ ಎಂದರು. ಇದು ಅವರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ದಿನಾಂಕ 2025ರ ಜು. 28 ಹಾಗೂ 30ರಂದು ನಡೆದ ಸಭೆಗಳ ತೀರ್ಮಾನದಂತೆ, ಸಂಬಳ ಬಾಕಿ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ ೭ರಿಂದ ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಲಾಗಿದೆ.ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತು ರಾಜ್ಯದಿಂದ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿದ್ದರೂ, ಹೊಸ ತಂತ್ರಾಂಶದ ತಾಂತ್ರಿಕ ಸಮಸ್ಯೆಯಿಂದಾಗಿ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳಿಂದ ತಿಳಿಸಲಾಗಿದೆ. ಈಗಾಗಲೇ ಎರಡು ದಿನಗಳ ಒತ್ತಡವನ್ನು ನೀಡಲಾಗಿದ್ದು, ಈ ಅವಧಿಯಲ್ಲಿ ವೇತನ ಪಾವತಿಯಾಗದಿದ್ದರೆ, ಸಿಬ್ಬಂದಿಗಳು ಕೆಲಸ-ಕಾರ್ಯಗಳನ್ನು ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಾಕಿ ಸಂಬಳವನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಂದು ನರೇಗಾ ಸಿಬ್ಬಂದಿಗಳು ಕಳಕಳಿಯಿಂದ ವಿನಂತಿಸಿದ್ದಾರೆ. ಈ ಬಗ್ಗೆ ರಾಜ್ಯ ಸಂಘದ ತೀರ್ಮಾನವನ್ನು ಗಂಭೀರವಾಗಿ ಪರಿಗಣಿಸಿ, ಸಿಬ್ಬಂದಿಗಳ ಆರ್ಥಿಕ ಸಂಕಷ್ಟವನ್ನು ನೀಗಿಸಲು ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ತಾಲೂಕು ತಾಂತ್ರಿಕ ಸಂಯೋಜಕಿ ವಿಜಯಲಕ್ಷ್ಮಿ, ಎಂಐಎಸ್ ಸಂಯೋಜಕ ಅಶೋಕ, ವೀರೇಶ ಸೇರಿದಂತೆ ನರೇಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು.